ಐಪಿಎಲ್ 2020 – ಧವನ್ ಶತಕ ವ್ಯರ್ಥ.. ನಿಕೊಲಾಸ್ ಅರ್ಧಶತಕ್ಕೆ ಒಲಿದ ಜಯ
ಶಿಖರ್ ಧವನ್ ಅಜೇಯ ಶತಕ ದಾಖಲಿಸಿದ್ರೂ ಡೆಲ್ಲಿ ಕ್ಯಾಪಿಟಲ್ಸ್‍ಗೆ ದಕ್ಕಲಿಲ್ಲ ಗೆಲುವು.
ಸೋಲಿನ ದವಡೆಗೆ ಸಿಲುಕಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಜಯ ತಂದುಕೊಟ್ಟಿದ್ದು ನಿಕೋಲಾಸ್ ಪೂರನ್ ಅವರ ಅರ್ಧಶತಕ
ಇದು ಐಪಿಎಲ್ ಟೂರ್ನಿಯ 38ನೇ ಪಂದ್ಯದ ಹೈಲೈಟ್ಸ್.
ಹೌದು, ಕಿಂಗ್ಸ್ ಪಂಜಾಬ್ ಎರಡನೇ ಹಂತದ ಪಂದ್ಯಗಳಲ್ಲಿ ಸತತ ಮೂರನೇ ಗೆಲುವು ದಾಖಲಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗೆಲುವಿನ ಓಟಕ್ಕೆ ರಾಹುಲ್ ಬಳಗ ಬ್ರೇಕ್ ಹಾಕಿದೆ.
ಜಿದ್ದಾಜಿದ್ದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಐದು ವಿಕೆಟ್ ಗಳಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಪರಾಭವಗೊಳಿಸಿತ್ತು.
ದುಬೈನಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು.
ಆದ್ರೆ ಅಂದುಕೊಂಡಂತೆ ಡೆಲ್ಲಿ ಕ್ಯಾಪಿಟಲ್ಸ್ ನಿರೀಕ್ಷಿತ ಆರಂಭ ಪಡೆಯಲಿಲ್ಲ.
ಪೃಥ್ವಿ ಶಾ 7 ರನ್ ಗೆ ಸೀಮಿತವಾದ್ರೆ, ಶ್ರೇಯಸ್ ಅಯ್ಯರ್ 14 ರನ್ ಮತ್ತು ರಿಷಬ್ ಪಂತ್ 14 ರನ್‍ಗೆ ಹೋರಾಟವನ್ನು ಮುಗಿಸಿದ್ರು.
ಹಾಗೇ ಮಾರ್ಕಸ್ ಸ್ಟೋನಿಸ್ ಆರ್ಭಟ 9 ರನ್‍ಗೆ ಕೊನೆಗೊಂಡಿತ್ತು.
ಇನ್ನೊಂದೆಡೆ ಆರಂಭಿಕ ಶಿಖರ್ ಧವನ್ ಏಕಾಂಗಿ ಹೋರಾಟ ನಡೆಸಿದ್ರು. ಪಂಜಾಬ್ ಬೌಲರ್ ಗಳ ಮೇಲೆ ಸವಾರಿ ನಡೆಸಿದ್ರು.
ಅಲ್ಲದೆ ಟೂರ್ನಿಯಲ್ಲಿ ಸತತ ಎರಡನೇ ಶತಕದ ಸಂಭ್ರಮದಲ್ಲೂ ತೇಲಾಡಿದ್ರು.
61 ಎಸೆತಗಳಲ್ಲಿ 12 ಬೌಂಡರಿ ಮತ್ತು ಮೂರು ಸಿಕ್ಸರ್ ಗಳ ಸಹಾಯದಿಂದ ಶಿಖರ್ ಧವನ್ ಅಜೇಯ 106 ರನ್ ದಾಖಲಿಸಿದ್ರು.
ಶಿಮ್ರೋನ್ ಹೆಟ್ಮೇರ್ ಅಜೇಯ 10 ರನ್ ದಾಖಲಿಸಿದ್ರು.
ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐದು ವಿಕೆಟ್ ಗೆ 164 ರನ್ ಗಳಿಸಿತು.
ಸವಾಲಿಗೆ ಪ್ರತ್ಯುತ್ತರ ನೀಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ಆರಂಭದಲ್ಲೇ ರಾಹುಲ್ ವಿಕೆಟ್ ಪತನಗೊಂಡಿತು.
ನಿಖರ ಬೌಲಿಂಗ್ ದಾಳಿಯ ಮೂಲಕ ಡೆಲ್ಲಿ ಬೌಲರ್ ಗಳು ಪಂಜಾಬ್ ಮೇಲೆ ಒತ್ತಡ ಹೇರಿದ್ರು.
ಆದ್ರೆ ತುಷಾರ್ ದೇಶಪಾಂಡೆಯ ಒಂದೇ ಓವರ್ ನಲ್ಲಿ ಕ್ರಿಸ್ ಗೇಲ್ ಸ್ಪೋಟಕ ಬ್ಯಾಟಿಂಗ್ ನಡೆಸಿದ್ರು.
ಅಲ್ಲದೆ ಪಂದ್ಯದ ಗತಿಯನ್ನು ಕೂಡ ಬದಲಾಯಿಸಿದ್ರು.
ಆದ್ರೆ ಕ್ರಿಸ್ ಗೇಲ್ ಆರ್ಭಟ 29 ರನ್ ಗೆ ಕೊನೆಗೊಂಡಿತ್ತು. ಆರ್. ಅಶ್ವಿನ್ ಅವರಿಗೆ ಕ್ರಿಸ್ ಗೇಲ್ ಬೌಲ್ಡಾದಾಗ ಪಂಜಾಬ್ ಒತ್ತಡಕ್ಕೆ ಸಿಲುಕಿತ್ತು.
ಮತ್ತೊಂದೆಡೆ ಮಯಾಂಕ್ ಅಗರ್ ವಾಲ್ ಅವರು ಐದು ರನ್ ಗಳಿಸಿ ರನೌಟಾದ್ರು.
ನಂತರ ತಂಡಕ್ಕೆ ಗೆಲುವಿನ ದಾರಿ ತೋರಿಸಿದದ್ದು ನಿಕೊಲಾಸ್ ಪೂರನ್.
ನಿಕೊಲಾಸ್ ಪೂರನ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ರು. ಮತ್ತೊಂದೆಡೆ ಗ್ಲೇನ್ ಮ್ಯಾಕ್ಸ್ ವೆಲ್ ತಾಳ್ಮೆಯ ಆಟವನ್ನಾಡಿದ್ರು.
ನಿಕೊಲಾಸ್ ಪೂರನ್ 28 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಮೂರು ಸಿಕ್ಸರ್ ನ ನೆರವಿನಿಂದ ಆಕರ್ಷಕ 53 ರನ್ ಸಿಡಿಸಿದ್ರು.
ಅದೇ ರೀತಿ ಗ್ಲೇನ್ ಮ್ಯಾಕ್ಸ್ ವೆಲ್ 32 ರನ್ ಗಳಿಸಿ ರಬಾಡಗೆ ವಿಕೆಟ್ ಒಪ್ಪಿಸಿದ್ರು.
ಅಂತಿಮವಾಗಿ ದೀಪಕ್ ಹೂಡ ಅಜೇಯ 15 ರನ್ ಮತ್ತು ಜೇಮ್ಸ್ ನಿಶಾಮ್ ಅಜೇಯ 10 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ರು.
ಅಂತಿಮವಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐದು ವಿಕೆಟ್ ನಷ್ಟಕ್ಕೆ 19ನೇ ಓವರ್ ನಲ್ಲಿ ಗೆಲುವಿನ ನಗೆ ಬೀರಿತ್ತು.
ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೀರೋ ಶಿಖರ್ ಧವನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.