ಮಹಾಭಾರತದ ಪಾಂಡವರಿಗೂ ರಾಹುಲ್ ಟೆವಾಟಿಯಾ ಗೂ ಇರೋ ನಂಟಾದ್ರೂ ಏನು ?
ರಾಹುಲ್ ಟೆವಾಟಿಯಾ… ಯಾರು ಯಾರು ಅಂತ ಕೇಳುತ್ತಿದ್ರು. ಅಷ್ಟಕ್ಕೂ ರಾಹುಲ್ ಟೆವಾಟಿಯಾ ಯಾರು ಅಂತನೇ ಬಹುತೇಕರಿಗೆ ಗೊತ್ತಿಲ್ಲ. ಆದ್ರೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಸಿಡಿಸಿದ್ದ ಏಳು ಸಿಕ್ಸರ್ (ಒಂದೇ ಓವರ್ ನಲ್ಲಿ ಐದು ಸಿಕ್ಸರ್) ಅವರ ಬದುಕಿನ ಚಿತ್ರಣವನ್ನೇ ಬದಲಾಯಿಸಿಬಿಟ್ಟಿದೆ. ರಾತ್ರೋ ರಾತ್ರಿ ಹೀರೋ ಆದ ರಾಹುಲ್ ಟೆವಾಟಿಯಾ ತನ್ನ ಪ್ರತಿಭೆಯನ್ನು ಇಡೀ ಜಗತ್ತಿಗೆ ಪರಿಚಯಿಸಿಬಿಟ್ಟಿದ್ದಾರೆ.
ಹೌದು, ಈ ಪಂದ್ಯಕ್ಕೂ ಮುನ್ನ ರಾಹುಲ್ ಟೆವಾಟಿಯಾ ಅವರು ಒಬ್ಬ ಮಾಮೂಲಿ ಕ್ರಿಕೆಟಿಗ. ಹರಿಯಾಣ ತಂಡದ ಪರ ಆಡುತ್ತಿದ್ದ ರಾಹುಲ್ ಹೇಳಿಕೊಳ್ಳುವಂತಹ ಸಾಧನೆ ಏನು ಮಾಡಿರಲಿಲ್ಲ. ಹಾಗೇ ಹೆಚ್ಚು ಅವಕಾಶವೂ ಸಿಕ್ಕಿರಲಿಲ್ಲ. ಟೆವಾಟಿಯಾ ಅವರು ಅವಕಾಶಕ್ಕಾಗಿ ಕಾಯುತ್ತಿದ್ದರು. ಟೀಕೆಗೆ ಗುರಿಯಾಗಬೇಕಿದ್ದ ರಾಹುಲ್ ಕೇವಲ 12 ಎಸೆತಗಳಲ್ಲಿ ಎಲ್ಲರ ಕಣ್ಣಿಗೆ ಹೀರೋ ಆಗಿ ಬೆಳೆದುಬಿಟ್ರು.
ಕಿಂಗ್ಸ್ ಪಂಜಾಬ್ ವಿರುದ್ಧದ ಪಂದ್ಯಕ್ಕೂ ಮುನ್ನ ರಾಹುಲ್ ಅವರ ಇನ್ ಸ್ಟಾಗ್ರಾಮ್ ನಲ್ಲಿ 22 ಸಾವಿರ ಫಾಲೋವರ್ಸ್ ಇದ್ರು. ಇದೀಗ 75 ಸಾವಿರ ಫಾಲೋವರ್ಸ್ ಆಗಿದ್ದಾರೆ. ಒಂದು ಪಂದ್ಯ, 12 ಎಸೆತಗಳು, ಏಳು ಸಿಕ್ಸರ್ ಗಳು ರಾಹುಲ್ ಟೆವಾಟಿಯಾ ಅವರು ರನ್ ಗಳಿಸಲು ಒದ್ದಾಟ ನಡೆಸಿರುವುದನ್ನು ಮರೆಯುವಂತೆ ಮಾಡಿತ್ತು. ಈ ಏಳು ಸಿಕ್ಸರ್ ಸಿಡಿಸುವುದಕ್ಕಿಂತ ಮುನ್ನ 18 ಎಸೆತಗಳಲ್ಲಿ ರನ್ ಗಳಿಸಲು ಪರದಾಟ ನಡೆಸಿದ್ದರು ಅನ್ನೋದನ್ನು ಕೂಡ ಮರೆಯುವ ಹಾಗಿಲ್ಲ.
ಮಹಾಭಾರತದ ಪಾಂಡವರಿಗೂ ರಾಹುಲ್ ಟೆವಾಟಿಯಾ ಗೂ ಇರೋ ನಂಟಾದ್ರೂ ಏನು ?
ಅದೇನೇ ಇರಲಿ, ರಾಹುಲ್ ಟೆವಾಟಿಯಾ ಮತ್ತು ಮಹಾಭಾರತದ ಪಾಂಡವರಿಗೆ ಇರೋ ನಂಟಾದ್ರೂ ಏನು ? ಹೌದು, ಒಂದು ರೀತಿಯ ನಂಟಿದೆ. ಮಹಾಭಾರತದ ಒಂದು ಪೌರಾಣಿಕ ಕಥೆ . ಹಾಗಾಗಿ ರಾಹುಲ್ ಟೆವಾಟಿಯಾ ಅವರು ಪಾಂಡವರ ವಂಶಸ್ಥರಂತೂ ಅಲ್ಲ. ಅಷ್ಟಕ್ಕೂ ಹರಿಯಾಣಕ್ಕೂ ಪಾಂಡವರಿಗೂ ಏನು ಸಂಬಂಧ ಅನ್ನೋ ಪ್ರಶ್ನೆ ಕೂಡ ಮೂಡಬಹುದು. ನಿಜ, ಕೌರವರ ವಿರುದ್ಧ ಪಾಂಡವರು ಯುದ್ಧ ತಪ್ಪಿಸಲು ಕೊನೆಯ ಅಸ್ತ್ರವಾಗಿ ಐದು ಗ್ರಾಮಗಳನ್ನು ನೀಡುವಂತೆ ಕೇಳಿಕೊಂಡಿದ್ದರು. ಆ ಐದು ಗ್ರಾಮಗಳಲ್ಲಿ ಹರಿಯಾಣದ ಸಿಹಿ ಗ್ರಾಮ ಕೂಡ ಒಂದು. ಇದು ಹರಿಯಾಣದ ಫರಿದಾಬಾದ್ ಜಿಲ್ಲೆಯಲ್ಲಿರುವ ಗ್ರಾಮವಾಗಿದೆ. ಅಷ್ಟೇ ಅಲ್ಲ 16ನೇ ಶತಮಾನದ ಭಕ್ತಿ ಸುಧೆ ಗಾಯಕ ಸಂತ ಸುರದಾಸ್ ಅವರ ಗ್ರಾಮ ಕೂಡ ಹೌದು.
ಇದೀಗ ಪಾಂಡವರು, ಭಕ್ತಿ ಸುಧೆ ಗಾಯಕ ಸಂತ ಸುರದಾಸ್ ಅವರು ಹುಟ್ಟಿರುವ ಗ್ರಾಮದ ಯುವಕ ರಾಹುಲ್ ಟೆವಾಟಿಯಾ ಕ್ರಿಕೆಟ್ ಲೋಕದಲ್ಲಿ ಮಿಂಚುತ್ತಿದ್ದಾರೆ. ಆದ್ರೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ.
ಇನ್ನು ರಾಹುಲ್ ಟೆವಾಟಿಯಾ ಆಟವನ್ನು ನೋಡಿದ್ದ ಮೇಲೆ ಸಿಹಿ ಗ್ರಾಮದ ಜನತೆ ಸಂಭ್ರಮದಿಂದ ತೇಲಾಡುತ್ತಿದ್ದಾರೆ. ನೀವು 18 ಎಸೆತಗಳನ್ನು ಕಾಯಲು ಸಿದ್ಧರಿರಲಿಲ್ಲ. ಆದ್ರೆ ಆತ 18 ವರ್ಷಗಳಿಂದ ಕಾಯುತ್ತಿದ್ದಾನೆ. ನಮಗೆ ಗೊತ್ತಿತ್ತು. ಆತ ವಿಕೆಟ್ ಕೈಚೆಲ್ಲಿಕೊಳ್ಳುವುದಿಲ್ಲ ಅಂತ. ನಮ್ಮ ನಿರೀಕ್ಷೆಗಳನ್ನು ಆತ ಹುಸಿಗೊಳಿಸಲಿಲ್ಲ. ಒಂದು ವೇಳೆ ಆತ ವಿಫಲನಾಗಿರುತ್ತಿದ್ರೆ, ಇನ್ನುಳಿದ 12 ಪಂದ್ಯಗಳಲ್ಲಿ ಹೊರಗುಳಿಯಬೇಕಾಗಿತ್ತು. ಆದ್ರೆ ನನಗೆ ಆತನ ಮೇಲೆ ನಂಬಿಕೆ ಇತ್ತು. ಆತ ಯಶಶ್ವಿಯಾಗ್ತಾನೆ ಅಂತ ಹೇಳ್ತಾರೆ ರಾಹುಲ್ ಟೆವಾಟಿಯಾ ಅವರ ಚಿಕ್ಕಪ್ಪ ಧರಾಂಬಿರ್.
ಹಾಗೇ ನೋಡಿದ್ರೆ, ರಾಹುಲ್ ಟೆವಾಟಿಯಾ ಅವರಿಗೆ ಕ್ರಿಕೆಟ್ ಮೊದಲ ಆಯ್ಕೆಯಾಗಿರಲಿಲ್ಲ. ರಾಹುಲ್ ಅವರ ಅಜ್ಜ ಪೈಲ್ವಾನ್ ಆಗಿದ್ದರು. ಅವರ ಚಿಕ್ಕಪ್ಪ ರಾಷ್ಟ್ರೀಯ ಹಾಕಿ ಆಟಗಾರ. ಹಾಕಿ ಸಿಹಿ ಗ್ರಾಮದ ಪ್ರಮುಖ ಕ್ರೀಡೆಯಾಗಿತ್ತು. ಆದ್ರೆ ಟೆವಾಟಿಯಾ ಅವರಿಗೆ ಕ್ರಿಕೆಟ್ ಮೇಲೆ ಅಪಾರ ಆಸಕ್ತಿ ಇತ್ತು. ಹೀಗಾಗಿ ರಾಹುಲ್ ಟೆವಾಟಿಯಾ ಅವರ ತಂದೆ ಕೃಷ್ಣಪಾಲ್ ಅವರು ವಿಜಯ್ ಯಾದವ್ ಕ್ರಿಕೆಟ್ ಅಕಾಡೆಮಿಗೆ ಸೇರಿಸಿದ್ರು. ನಂತರ ಹರಿಯಾಣ ವಿವಿಧ ವಯೋಮಿತಿ ಕ್ರಿಕೆಟ್ ಟೂರ್ನಿಯಲ್ಲಿ ಆಡಿದ್ದರು. ಹಾಗೇ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಶಿಬಿರಕ್ಕೂ ಸೇರಿಕೊಂಡ್ರು. ಆದ್ರೆ ಹರಿಯಾಣ ತಂಡದಲ್ಲಿ ರಾಹುಲ್ ಟೆವಾಟಿಯಾಗೆ ಸರಿಯಾದ ಅವಕಾಶ ಸಿಗಲಿಲ್ಲ. ಇದೀಗ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ.