ಐಪಿಎಲ್ 2020 – ಡೆಲ್ಲಿ ಕ್ಯಾಪಿಟಲ್ಸ್‍ಗೆ ಐದನೇ ಗೆಲುವು.. ರಾಯಲ್ಸ್ ಗೆ ಐದನೇ ಸೋಲು..!
2020ರ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಬ್ಬರ ಮತ್ತೆ ಮುಂದುವರಿದಿದೆ.
ಟೂರ್ನಿಯ 23ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 46 ರನ್ ಗಳಿಂದ ರಾಜಸ್ತಾನ ರಾಯಲ್ಸ್ ತಂಡವನ್ನು ಮಣಿಸಿತು.
ಶಾರ್ಜಾದಲ್ಲಿ ಟಾಸ್ ಗೆದ್ದು ರಾಜಸ್ತಾನ ರಾಯಲ್ಸ್ ತಂಡ ಡೆಲ್ಲಿ ತಂಡವನ್ನು ಮೊದಲು ಬ್ಯಾಟಿಂಗ್‍ಗೆ ಆಹ್ವಾನಿಸಿತ್ತು.
ಆರಂಭದಲ್ಲಿ ರಾಯಲ್ಸ್ ತಂಡದ ಲೆಕ್ಕಚಾರ ಸರಿಯಾದ ಹಾದಿಯಲ್ಲೇ ಸಾಗುತ್ತಿತ್ತು.
ಶಿಖರ್ ಧವನ್ 5 ರನ್, ಪೃಥ್ವಿ ಶಾ 19 ರನ್ ಗಳಿಸಿ ಬೇಗನೇ ಪೆವಿಲಿಯನ್ ಸೇರಿಕೊಂಡ್ರು. ಬಳಿಕ ಶ್ರೇಯಸ್ ಅಯ್ಯರ್ 22 ರನ್ ಹಾಗೂ ರಿಷಬ್ ಪಂತ್ 5 ರನ್ ಗಳಿಸಿ ರನೌಟಾದಾಗ ಡೆಲ್ಲಿ ತಂಡ ಆಘಾತವನ್ನೇ ಅನುಭವಿಸಿತ್ತು.
ನಂತರ ರಾಯಲ್ಸ್ ತಂಡದ ಗೇಮ್ ಪ್ಲಾನ್ ಅನ್ನು ಉಲ್ಟಾಪಲ್ಟಾ ಮಾಡಿದ್ದು ಮಾರ್ಕಸ್ ಸ್ಟೋನಿಸ್ ಮತ್ತು ಶಿಮ್ರೋನ್ ಹೆಟ್ಮೇರ್. ಸ್ಟೋನಿಸ್ 30 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಗಳ ಸಹಾಯದಿಂದ 39 ರನ್ ಸಿಡಿಸಿದ್ರು.
ಹಾಗೇ ಹೆಟ್ಮೇರ್ ಅವರು 24 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಐದು ಸಿಕ್ಸರ್ ನ ಸಹಾಯದಿಂದ ಆಕರ್ಷಕ 45 ರನ್ ದಾಖಲಿಸಿದ್ರು.
ಇನ್ನು ಹರ್ಷಲ್ ಪಟೇಲ್ 16 ಮತ್ತು ಅಕ್ಸರ್ ಪಟೇಲ್ 17 ರನ್ ಗಳಿಸಿದ್ರು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ ತಂಡ ಎಂಟು ವಿಕೆಟ್ ಕಳೆದುಕೊಂಡು 184 ರನ್ ಗಳಿಸಿತು.
ಸವಾಲನ್ನು ಬೆನ್ನಟ್ಟಿದ್ದ ರಾಜಸ್ತಾನ ರಾಯಲ್ಸ್ ತಂಡದ ಬೌಲರ್ ಗಳು ಮಾರಕವಾಗಿ ಕಾಡಿದ್ರು.
ಜೋಸ್ ಬಟ್ಲರ್ (13), ಸ್ಮಿತ್ (24), ಸಂಜು ಸಾಮ್ಸನ್ (5), ಮಹಿಪಾಲ್ (1) ರನ್ ಗಳಿಸಿ ನಿರಾಸೆ ಮೂಡಿಸಿದ್ರು.
ಇನ್ನೊಂದೆಡೆ ಆರಂಭಿಕ ಯಶಸ್ವಿ ಜೈಸ್ವಾಲ್ (34 ರನ್) ಮತ್ತು ರಾಹುಲ್ ಟೆವಾಟಿಯಾ (38) ರನ್ ಗಳಿಸಿ ಕೊಂಚ ಮಟ್ಟಿನ ಪ್ರತಿರೋಧ ಒಡ್ಡಿದ್ರು.
ಆದ್ರೆ ಡಿಡಿಯ ನಿಖರ ದಾಳಿಗೆ ರಾಜಸ್ತಾನ ರಾಯಲ್ಸ್ ತಂಡ 138 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ರಬಾಡ ಮೂರು ವಿಕೆಟ್ ಪಡೆದ್ರೆ, ಆರ್. ಅಶ್ವಿನ್ ಮತ್ತು ಸ್ಟೋನಿಸ್ ತಲಾ ಎರಡು ವಿಕೆಟ್ ಉರುಳಿಸಿದ್ರು. 22 ರನ್ ಗೆ 2 ವಿಕೆಟ್ ಉರುಳಿಸಿದ ಆರ್. ಅಶ್ವಿನ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.