ರಾಜಸ್ತಾನ ರಾಯಲ್ಸ್ ತಂಡದ “ರಫೇಲ್” ಅಸ್ತ್ರ ಜೋಫ್ರಾ ಆರ್ಚೆರ್
ಜೋಫ್ರಾ ಆರ್ಚೆರ್… ಇಂಗ್ಲೆಂಡ್ ತಂಡದ ವೇಗದೂತ. ಸದ್ಯ ಐಪಿಎಲ್ ಟೂರ್ನಿಯಲ್ಲಿ ರಾಜಸ್ತಾನ ರಾಯಲ್ಸ್ ತಂಡದ ರಫೇಲ್ ಅಸ್ತ್ರ.. ಟೂರ್ನಿಯ 12ನೇ ಪಂದ್ಯದಲ್ಲಿ ಜೋಫ್ರಾ ಆರ್ಚೆರ್ ಅವರು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಅದ್ಭುತವಾದ ಬೌಲಿಂಗ್ ಪ್ರದರ್ಶನ ನೀಡಿದ್ರು.
ಅದ್ರಲ್ಲೂ ತನ್ನ ಮೊದಲ ಓವರ್ ನಲ್ಲಿ ಆರ್ಚೆರ್ ಅವರ ಬೆಂಕಿ ಎಸೆತಗಳು ದಂಗುಬಡಿಯುವಂತಿದ್ದವು. ಮೊದಲ ಎಸೆತ 147.4 ಕಿ.ಮಿ., ಎರಡನೇ ಎಸೆತ 150.4 ಕಿ.ಮೀ. ಮೂರನೇ ಎಸೆತ 147.7 ಕಿ.ಮೀ, ನಾಲ್ಕನೇ ಎಸೆತ 147.8 ಕಿ.ಮೀ, ಐದನೇ ಎಸೆತ 148.6 ಕಿ.ಮೀ ಹಾಗೂ ಆರನೇ 150.8 ಕಿ.ಮೀ. ವೇಗದಲ್ಲಿ ಎಸೆದಿದ್ದರು.
ಇನ್ನು ಮೂರನೇ ಓವರ್ ನಲ್ಲೂ ಅಷ್ಟೇ. 147.3 ಕಿ,ಮೀ ವೇಗದಲ್ಲಿ ಬೌಲಿಂಗ್ ಮಾಡಿರುವ ಜೋಫ್ರಾ ಅವರು ದಿನೇಶ್ ಕಾರ್ತೀಕ್ ಅವರನ್ನು ಬಲಿ ಪಡೆದ್ರು. ಅದೇ ರೀತಿ ಇಯಾನ್ ಮೊರ್ಗಾನ್ ಅವರಿಗೆ 152.1 ಕಿ,ಮೀ. ವೇಗದಲ್ಲಿ ಎಸೆತವೊಂದನ್ನು ಹಾಕಿದ್ರು. ಪರಿಣಾಮ ಜೋಫ್ರಾ ಆರ್ಚೆರ್ ಅವರು ತನ್ನ ಮೊದಲ ಮೂರು ಓವರ್ ನಲ್ಲಿ 4 ರನ್ ನೀಡಿ ಎರಡು ವಿಕೆಟ್ ಪಡೆದಿದ್ದರು. ಅದೇ ರೀತಿ 14 ಡಾಟ್ ಬಾಲ್‍ಗಳನ್ನು ಎಸೆದಿದ್ದರು. ಆದ್ರೆ ನಾಲ್ಕನೇ ಓವರ್ ನಲ್ಲಿ 14 ರನ್ ನೀಡಿ ದುಬಾರಿಯಾದ್ರು. ತನಗೆ ಎಕ್ಸ್ ಪ್ರೆಸ್ ಎಸೆತ ಹಾಕಿ ದಂಗುಬಡಿಯುವಂತೆ ಮಾಡಿದ್ದ ಆರ್ಚೆರ್ ಅವರ ಕೊನೆಯ ಓವರ್ ನಲ್ಲಿ ಇಯಾನ್ ಮೊರ್ಗಾನ್ ಸರಿಯಾಗಿಯೇ ದಂಡಿಸಿಬಿಟ್ಟಿದ್ದರು.
ಆದೆನೇ ಇರಲಿ, ಚುಟುಕು ಕ್ರಿಕೆಟ್ ನಲ್ಲಿ 14 ಡಾಟ್ ಎಸೆತಗಳನ್ನು ಹಾಕುವುದು ಅಷ್ಟೊಂದು ಸುಲಭದ ಸಂಗತಿಯಲ್ಲ. 150 ಕಿ.ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿರುವ ಜೋಫ್ರಾ ಆರ್ಚೆರ್ ರಾಜಸ್ತಾನ ರಾಯಲ್ಸ್ ತಂಡಕ್ಕೆ ಬ್ಯಾಟಿಂಗ್ ನಲ್ಲೂ ನೆರವಾಗುತ್ತಿದ್ದಾರೆ.