ಐಪಿಎಲ್ 2020- ಸತತ ಐದನೇ ಗೆಲುವು.. ಕಿಂಗ್ಸ್ ಆಸೆ ಇನ್ನೂ ಜೀವಂತ.. ಕೆಕೆಆರ್ ಗೆ ಸೋಲುಣಿಸಿದ ರಾಹುಲ್ ಬಳಗ
ಸತತ ಐದು ಗೆಲುವು… ಸಾಲು ಸಾಲು ಸೋಲುಗಳಿಂದ ಗೆಲುವಿನ ಪಾಠ.. ಐಪಿಎಲ್ ನಲ್ಲಿ ಪ್ಲೇ ಆಫ್ ಕನಸು ಇನ್ನೂ ಜೀವಂತ..
ಇದು 2020ರ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಇಲ್ಲಿಯವರೆಗಿನ ಸಾಧನೆ.
ಹೌದು, ಕಿಂಗ್ಸ್ ಇಲೆವೆನ್ ಮೊದಲ ಹಂತದ ಏಳು ಪಂದ್ಯಗಳಲ್ಲಿ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು.
ಇದೀಗ ಎರಡನೇ ಹಂತದ ಐದು ಪಂದ್ಯಗಳ ಬಳಿಕ ನಾಲ್ಕನೇ ಸ್ಥಾನ ಕಾಯ್ದುಕೊಂಡಿದೆ. ಅಂದ್ರೆ ಪ್ಲೇ ಆಫ್ಗೇರುವ ಆಸೆಯನ್ನು ಇನ್ನೂ ಹೆಚ್ಚಿಸಿಕೊಂಡಿದೆ.
ಇನ್ನುಳಿದ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದ್ರೆ ಬಹುತೇಕ ಪ್ಲೇ ಆಫ್ ಗೇರುವುದು ಖಚಿತವಾಗಿದೆ.
ಐಪಿಎಲ್ ಟೂರ್ನಿಯ 46ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಎಂಟು ವಿಕೆಟ್ ಗಳಿಂದ ಕೆಕೆಆರ್ ತಂಡವನ್ನು ಸೋಲಿಸಿದೆ.
ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಹುಲ್ ಮೊದಲು ಕೆಕೆ ಆರ್ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದ್ರು.
ಕೆಕೆಆರ್ ಗೇಮ್ ಪ್ಲಾನ್ ಅನ್ನು ಆರಂಭದಲ್ಲೇ ರಾಹುಲ್ ಉಲ್ಟಪಲ್ಟಾ ಮಾಡಿದ್ದರು.
ಸ್ಪಿನ್ನರ್ ಗ್ಲೇನ್ ಮ್ಯಾಕ್ಸ್ ವೆಲ್ ಅವರನ್ನು ದಾಳಿಗಿಳಿಸಿದ್ದ ರಾಹುಲ್ ಯಶಸ್ವಿ ಕೂಡ ಆದ್ರು.
ಮೊದಲ ಓವರ್ ನ ಎರಡನೇ ಎಸೆತದಲ್ಲೇ ನಿತೀಶ್ ರಾಣಾ ಅವರನ್ನು ಗ್ಲೇನ್ ಮ್ಯಾಕ್ಸ್ ವೆಲ್ ಪೆವಿಲಿಯನ್ಗೆ ಕಳುಹಿಸಿದ್ರು.
ನಂತರ ಮಹಮ್ಮದ್ ಶಮಿ ಅವರು ಕೆಕೆಆರ್ ಗೆ ಮಾರಕವಾಗಿ ಪರಿಣಮಿಸಿದ್ರು.
ರಾಹುಲ್ ತ್ರಿಪಾಠಿ 7 ರನ್ ಹಾಗೂ ದಿನೇಶ್ ಕಾರ್ತಿಕ್ ಶೂನ್ಯ ಸುತ್ತಿ ಶಮಿಗೆ ವಿಕೆಟ್ ಒಪ್ಪಿಸಿದ್ರು. ಆಗ ಕೆಕೆಆರ್ ತಂಡದ ಮೊತ್ತ ಮೂರು ವಿಕೆಟ್ ನಷ್ಟಕ್ಕೆ 10 ರನ್.
ಬಳಿಕ ಆರಂಭಿಕ ಶುಬ್ಮನ್ ಗಿಲ್ ಅವರ ಜೊತೆ ಸೇರಿಕೊಂಡ ನಾಯಕ ಇಯಾನ್ ಮೊರ್ಗಾನ್ ತಂಡಕ್ಕೆ ಚೇತರಿಕೆ ನೀಡಿದ್ರು.
ಅಲ್ಲದೆ ನಾಲ್ಕನೇ ವಿಕೆಟ್ ಗೆ 81 ರನ್ ಕೂಡ ಕಲೆ ಹಾಕಿದ್ದರು.
ಈ ಹಂತದಲ್ಲಿ ಇಯಾನ್ ಮೊರ್ಗಾನ್ 40 ರನ್ ಗಳಿಸಿ ಔಟಾದ್ರು.
ಹಾಗೇ ಅಪಾಯಕಾರಿ ಸುನೀಲ್ ನರೇನ್ 6 ರನ್ ಗಳಿಸಿ ಕ್ರಿಸ್ ಜೋರ್ಡಾನ್ಗೆ ಬಲಿಯಾದ್ರು.
ಇನ್ನು ಕಮಲೇಶ್ ನಾಗರ್ಕೊಟ್6 ರನ್ ಗಳಿಸಿದ್ರೆ, ಪ್ಯಾಟ್ ಕಮಿನ್ಸ್ 1 ರನ್ ಗಳಿಸಿದ್ರು.
ಮತ್ತೊಂದೆಡೆ ಜವಾಬ್ದಾರಿಯುತ ಆಟವನ್ನಾಡಿದ್ದ ಶುಬ್ಮನ್ ಗಿಲ್ ಆಕರ್ಷಕ ಅರ್ಧಶತಕ ಸಿಡಿಸಿದ್ರು.
45 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಗಳ ಮೂಲಕ ಗಿಲ್ 57 ರನ್ ಗಳಿಸಿ ತನ್ನ ಹೋರಾಟವನ್ನು ಮುಗಿಸಿದ್ರು.
ಕೊನೆಯಲ್ಲಿ ಫಗ್ರ್ಯುಸನ್ ಅವರು 13 ಎಸೆತಗಳಲ್ಲಿ ಅಜೇಯ 24 ರನ್ ಸಿಡಿಸಿದ್ರು. ಅಂತಿಮವಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 9 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಮಹಮ್ಮದ್ ಶಮಿ ಮೂರು ವಿಕೆಟ್ ಪಡೆದ್ರು. ರವಿ ಬಿಸ್ನೋಯ್ ಮತ್ತು ಕ್ರಿಸ್ ಜೋರ್ಡಾನ್ ತಲಾ ಎರಡು ವಿಕೆಟ್ ಉರುಳಿಸಿದ್ರು.
ಗೆಲ್ಲಲು ಸಾಧಾರಣ ಮೊತ್ತದ ಸವಾಲನ್ನು ಬೆನ್ನಟ್ಟಿದ್ದ ಕಿಂಗ್ಸ್ ಪಂಜಾಬ್ ಗೆ ಕೆ.ಎಲ್. ರಾಹುಲ್ ಮತ್ತು ಮನ್ದೀಪ್ ಸಿಂಗ್ ಉತ್ತಮ ಆರಂಭವನ್ನೇ ಒದಗಿಸಿದ್ರು.
ಕೆಕೆಆರ್ ತಂಡದ ಉತ್ತಮ ದಾಳಿಯ ನಡುವೆಯೂ ಕಿಂಗ್ಸ್ ಪಂಜಾಬ್ ತಂಡ ಮೊದಲ ವಿಕೆಟ್ ಗೆ 47 ರನ್ ಕಲೆ ಹಾಕಿತ್ತು.
ಈ ಹಂತದಲ್ಲಿ 28 ರನ್ ಗಳಿಸಿದ್ದ ಕೆ.ಎಲ್. ರಾಹುಲ್ ವರುಣ್ ಚಕ್ರವರ್ತಿ ಅವರ ಎಲ್ ಬಿ ಬಲೆ ಬಿದ್ರು.
ನಂತರ ಶಾರ್ಜಾ ಅಂಗಣದಲ್ಲಿ ಗುಡುಗಿದ್ದು ಕ್ರಿಸ್ ಗೇಲ್.
ಕೇವಲ 29 ಎಸೆತಗಳಲ್ಲಿ ಐದು ಸಿಕ್ಸರ್ ಮತ್ತು ಎರಡು ಬೌಂಡರಿಗಳ ಸಹಾಯದಿಂದ ಗೇಲ್ 51 ರನ್ ದಾಖಲಿಸಿ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದ್ರು.
ಇನ್ನೊಂದೆಡೆ ತಂದೆಯ ಸಾವಿನ ನೋವಿನ ನಡುವೆಯೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಮನ್ ದೀಪ್ ಸಿಂಗ್ ಅರ್ಧಶತಕ ದಾಖಲಿಸಿದ್ರು. ಈ ಅರ್ಧಶತಕವನ್ನು ತನ್ನ ತಂದೆಗೆ ಅರ್ಪಣೆ ಮಾಡಿದ್ರು.
ಅಂತಿಮವಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 18.5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗೆಲುವಿನ ನಗೆ ಬೀರಿತ್ತು.
ಮನ್ ದೀಪ್ ಸಿಂಗ್ ಅವರು 56 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ನೆರವಿನಿಂದ ಅಜೇಯ 66 ರನ್ ಸಿಡಿಸಿದ್ರು.
ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ಕ್ರಿಸ್ ಗೇಲ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.