ಐಪಿಎಲ್ 2020- ನಡೆಯದ ಧೋನಿಯ ಲೆಕ್ಕಾಚಾರ… ನೈಟ್ ರೈಡರ್ಸ್ ಗೆ ಶರಣಾದ ಚೆನ್ನೈ ಸೂಪರ್ ಕಿಂಗ್ಸ್
ಐಪಿಎಲ್ ಟೂರ್ನಿಯ 21ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 10 ರನ್ ಗಳಿಂದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಪರಾಭವಗೊಳಿಸಿದೆ.
ಅಬುಧಾಬಿಯಲ್ಲಿ ಟಾಸ್ ಗೆದ್ದ ಕೆಕೆಆರ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಶುಬ್ಮನ್ ಗಿಲ್ ಜೊತೆಗೆ ರಾಹುಲ್ ತ್ರಿಪಾಠಿ ಅವರು ಆರಂಭಿಕನಾಗಿ ಕಣಕ್ಕಿಳಿದ್ರು.
ಶುಬ್ಮನ್ ಗಿಲ್ 11 ರನ್ ಗಳಿಸುವಷ್ಟರಲ್ಲಿ ಬ್ರೇವೋ ಅವರಿಗೆ ವಿಕೆಟ್ ಒಪ್ಪಿಸಿದ್ರು. ಮತ್ತೊಂದೆಡೆ ರಾಹುಲ್ ತ್ರಿಪಾಠಿ ಅವರು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ್ರು. ಆದ್ರೆ ಕೆಕೆಆರ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮೆನ್ ಗಳು ಸರಿಯಾಗಿ ಸಾಥ್ ನೀಡಲಿಲ್ಲ.
ನಿತೀಶ್ ರಾಣಾ 9 ರನ್, ಸುನೀಲ್ ನರೇನ್ 17 ರನ್, ಇಯಾನ್ ಮೊರ್ಗಾನ್ 7 ರನ್, ಆಂಡ್ರೆ ರಸೆಲ್ 2 ರನ್ , ದಿನೇಶ್ ಕಾರ್ತಿಕ್ 12 ರನ್ ಗಳಿಸಿ ನಿರಾಸೆ ಮೂಡಿಸಿದ್ರು.
ಮತ್ತೊಂದೆಡೆ ಆರಂಭಿಕ ರಾಹುಲ್ ತ್ರಿಪಾಠಿ ಅವರು ಅಬ್ಬರದ ಬ್ಯಾಟಿಂಗ್ ನಡೆಸಿದ್ರು. ಚೆನ್ನೈ ಬೌಲರ್ ಗಳಿಗೆ ಸವಾಲಾಗಿ ಪರಿಣಮಿಸಿದ್ದ ರಾಹುಲ್ ತ್ರಿಪಾಠಿ ಅವರು 51 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಮೂರು ಸಿಕ್ಸರ್ ಗಳ ಸಹಾಯದಿಂದ ಆಕರ್ಷಕ 81 ರನ್ ಸಿಡಿಸಿದ್ರು.
ಐಪಿಎಲ್ 2020- ಮಂಕಾಗುತ್ತಿರುವ ಈ ಐದು ಬ್ಯಾಟ್ಸ್ ಮೆನ್ ಗಳು.. ಫ್ರಾಂಚೈಸಿಗಳಿಗೆ ದೊಡ್ಡ ತಲೆನೋವು..!
ಇನ್ನುಳಿದಂತೆ ಬ್ರೇವೋ ಅವರ ಮಾರಕ ದಾಳಿಗೆ ಕಮಲೇಶ್ ನಾಗರ್ಕೋಟಿ, ಶಿವಮ್ ಮಾವಿ ಮತ್ತು ವರುಣ್ ಚಕ್ರವರ್ತಿ ಶೂನ್ಯ ಸುತ್ತಿದ್ರು. ಪ್ಯಾಟ್ ಕಮಿನ್ಸ್ ಅವರು ಅಜೇಯ 17 ರನ್ ಗಳಿಸಿದ್ರು. ಅಂತಿಮವಾಗಿ ಕೆಕೆಆರ್ ತಂಡ 20 ಓವರ್ ಗಳಲ್ಲಿ 167 ರನ್ ಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತ್ತು.
ಗೆಲ್ಲಲು 168 ರನ್ ಗಳ ಸವಾಲನ್ನು ಸ್ವೀಕರಿಸಿದ್ದ ಚೆನ್ನೈ ತಂಡ ಪಂದ್ಯ 3.4 ನೇ ಓವರ್ ನಲ್ಲಿ ಫಾಪ್ ಡುಪ್ಲೇಸಸ್ 17 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದ್ರು.
ನಂತರ ಶೇನ್ ವಾಟ್ಸನ್ ಜೊತೆ ಸೇರಿದ ಅಂಬಟಿ ರಾಯುಡು ತಂಡವನ್ನು ಗೆಲುವಿನ ದಡ ಸೇರಿಸುವ ಪ್ರಯತ್ನ ನಡೆಸಿದ್ರು.
ಈ ಹಂತದಲ್ಲಿ 30 ರನ್ ಗಳಿಸಿದ್ದ ಅಂಬಟಿ ರಾಯುಡು ಅವರು ನಾಗರ್ಕೋಟಿ ಅವರಿಗೆ ಬಲಿಯಾದ್ರು. ಹಾಗೇ ಶೇನ್ ವಾಟ್ಸನ್ ಅವರು 50 ರನ್ ಗಳಿಸಿದ್ದಾಗ ಸುನೀಲ್ ನರೇನ್ ಅವರ ಎಲ್ಬಿ ಬಲೆಗೆ ಬಿದ್ರು.
ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕೆಕೆಆರ್ ಬೌಲರ್ ಗಳು ಕಂಟಕವಾಗಿ ಪರಿಣಮಿಸಿದ್ರು. ಮಹೇಂದ್ರ ಸಿಂಗ್ ಧೋನಿ 11 ರನ್ ಗಳಿಸಿದ್ದಾಗ ವರುಣ್ ಚಕ್ರವರ್ತಿಗೆ ಬೌಲ್ಡಾದ್ರೆ, ಸ್ಯಾಮ್ ಕುರನ್ 17 ರನ್ ಗಳಿಸಿ ಪೆವಿಲಿಯನ್ಗೆ ಹಿಂತಿರುಗಿದ್ರು.
ಕೊನೆಯಲ್ಲಿ ಕೇದಾರ್ ಜಾಧವ್12 ಎಸೆತಗಳಲ್ಲಿ ಅಜೇಯ ಏಳು ರನ್ ಹಾಗೂ ರವೀಂದ್ರ ಜಡೇಜಾ ಎಂಟು ಎಸೆತಗಳಲ್ಲಿ 21 ರನ್ ಗಳಿಸಿದ್ರು. ಆದ್ರೆ ಕೆಕೆಆರ್ ತಂಡದ ಶಿಸ್ತುಬದ್ಧ ಬೌಲಿಂಗ್ ದಾಳಿಯ ಮುಂದೆ ಸಿಎಸ್ಕೆ ತಂಡದ ಅಬ್ಬರ ನಡೆಯಲಿಲ್ಲ.
ಹೀಗಾಗಿ ಕೆಕೆಆರ್ ತಂಡ 10 ರನ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತ್ತು. ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ ಕಳೆದುಕೊಂಡು 157 ರನ್ ಗಳಿಸಲಷ್ಟೇ ಶಕ್ತವಾಯ್ತು.
ಸಿಎಸ್ಕೆ ಟೂರ್ನಿಯಲ್ಲಿ ನಾಲ್ಕನೇ ಸೋಲು ಕಂಡ್ರೆ, ಕೆಕೆಆರ್ ತಂಡ ಮೂರನೇ ಗೆಲುವು ದಾಖಲಿಸಿತು. ಭರ್ಜರಿ ಬ್ಯಾಟಿಂಗ್ ಮಾಡಿದ್ದ ರಾಹುಲ್ ತ್ರಿಪಾಠಿ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.








