ಐಪಿಎಲ್ 2020- ಆರ್ ಸಿಬಿ ಆರ್ಭಟಕ್ಕೆ ಸಿಎಸ್ ಕೆ ತತ್ತರ
ಐಪಿಎಲ್ ಟೂರ್ನಿಯ 25ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 37 ರನ್ ಗಳಿಂದ ಗೆಲುವಿನ ನಗೆ ಬೀರಿದೆ.
ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟೂರ್ನಿಯ ಮೊದಲ ಸುತ್ತಿನ ಏಳು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಸೋತಾಂತಾಗಿದೆ.
ಕೇವಲ ಎರಡು ಪಂದ್ಯಗಳನ್ನು ಮಾತ್ರ ಗೆದ್ದುಕೊಂಡಿದೆ.
ಮತ್ತೊಂದೆಡೆ ಸೋಲಿನಿಂದ ಹೊರಬರುತ್ತಿರುವ ಆರ್ ಸಿಬಿ ತಂಡ ಟೂರ್ನಿಯಲ್ಲಿ ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದೆ.
ದುಬೈ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್‍ಸಿಬಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು.
ಆದ್ರೆ ಆರಂಭದಲ್ಲೇ ಆರೋನ್ ಫಿಂಚ್ 2 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದ್ರು.
ಬಳಿಕ ದೇವದತ್ತ್ ಪಡಿಕ್ಕಲ್ ಜೊತೆ ಸೇರಿಕೊಂಡ ವಿರಾಟ್ ಕೊಹ್ಲಿ ಚೆನ್ನೈ ಬೌಲರ್ ಗಳಿಗೆ ಸವಾಲಾಗಿ ಪರಿಣಮಿಸಿದ್ರು.
ಈ ನಡುವೆ ದೇವದತ್ತ್ ಪಡಿಕ್ಕಲ್ ಅವರು 33 ರನ್‍ಗೆ ಔಟಾದ್ರು, ಎಬಿಡಿ ವಿಲಿಯರ್ಸ್ ಶೂನ್ಯ ಸುತ್ತಿದ್ರು.
ಹಾಗೇ ವಾಷಿಂಗ್ಟನ್ ಸುಂದರ್ 10 ರನ್‍ಗೆ ತನ್ನ ಹೋರಾಟವನ್ನು ಮುಗಿಸಿದ್ರು. ನಂತರ ವಿರಾಟ್ ಕೊಹ್ಲಿ ಮತ್ತು ಶಿವಮ್ ದುಬೆ ಐದನೇ ವಿಕೆಟ್‍ಗೆ 33 ಎಸೆತಗಳಲ್ಲಿ 77 ರನ್ ಗಳನ್ನು ಕಲೆ ಹಾಕಿದ್ರು.
ವಿರಾಟ್ ಕೊಹ್ಲಿ 52 ಎಸೆತಗಳಲ್ಲಿ 4 ಬೌಂಡರಿ ಮತ್ತುನಾಲ್ಕು ಸಿಕ್ಸರ್ ಗಳ ಸಹಾಯದಿಂದ ಅಜೇಯ 90 ರನ್ ದಾಖಲಿಸಿದ್ರು.
ಶಿವಮ್ ದುಬೆ 14 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ನ ಸಹಾಯದಿಂದ ಅಜೇಯ 22 ರನ್ ಗಳಿಸಿದ್ರು.
ಗೆಲ್ಲಲು 170 ರನ್ ಗಳ ಸವಾಲನ್ನು ಬೆನ್ನಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟ್ಸ್ ಮೆನ್ ಗಳಿಗೆ ಆರ್‍ಸಿಬಿ ಬೌಲರ್ ಗಳು ದುಃಸ್ವಪ್ನವಾಗಿ ಕಾಡಿದ್ರು.
ಫಾಪ್ ಡುಪ್ಲೇಸಸ್ 8 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದ್ರೆ, ಶೇನ್ ವಾಟ್ಸನ್ ಹೋರಾಟ 14 ರನ್ ಗೆ ಅಂತ್ಯಗೊಂಡಿತ್ತು.
ಎನ್. ಜಗದೀಶ್ 33 ರನ್ ಗಳಿಸಿ ರನೌಟಾದ್ರೆ, ಧೋನಿ 10 ರನ್‍ಗೆ ಸುಸ್ತಾದ್ರು. ಹಾಗೇ ಸ್ಯಾಮ್ ಕುರನ್ ಡಕೌಟಾದ್ರೆ, ಅಂಬಟಿ ರಾಯುಡು 42 ರನ್ ಗಳಿಸಿ ಉಡನಾಗೆ ವಿಕೆಟ್ ಒಪ್ಪಿಸಿದ್ರು.
ಇನ್ನು ರವೀಂದ್ರ ಜಡೇಜಾ ಮತ್ತು ಡ್ವೇನ್ ಬ್ರೇವೋ ಕೂಡ ಹೆಚ್ಚು ಕ್ರೀಸ್ ನಲ್ಲಿ ನಿಲ್ಲಲಿಲ್ಲ.
ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ಎಂಟು ವಿಕೆಟ್ ಕಳೆದುಕೊಂಡು 132 ರನ್ ಗಳಿಸಲಷ್ಟೇ ಶಕ್ತವಾಯ್ತು.
ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.