ಮಯಾಂಕ್ ಗುಡುಗು… ರಾಹುಲ್ ಮಿಂಚು… ಶಾರ್ಜಾ ದಲ್ಲಿ ಹರಿಯಿತು ರನ್ ಮಳೆ..
ಮಯಾಂಕ್ ಅಗರ್ ವಾಲ್ ಗುಡುಗು… ರಾಹುಲ್ ಮಿಂಚಿಗೆ ರಾಯಲ್ಸ್ ಬೌಲರ್ ಪಾಳೆಯದಲ್ಲಿ ಮೇಘ ಸ್ಫೋಟಗೊಂಡಾಗ ಶಾರ್ಜಾದಲ್ಲಿ ಸುರಿದಿದ್ದು ರನ್ ಮಳೆ.. ರನ್ ಮಳೆ.. ರನ್ ಮಳೆ..
ಅಬ್ಬಾ.. ಒಂದು ವೇಳೆ ಮೈದಾನದಲ್ಲಿ ಪ್ರೇಕ್ಷಕರು ಇರುತ್ತಿದ್ರೆ ಬಹುಶಃ ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ಅಂತ ಕುಪ್ಪಳಿಸಿ ಕುಣಿಯುತ್ತಿದ್ದರೇನೋ.. ಯಾಕಂದ್ರೆ ಇಬ್ಬರು ಕನ್ನಡಿಗರ ಆಟ ಬೊಂಬಾಟ್ ಆಗಿತ್ತು. ಅದೇ ರೀತಿ ಮಯಾಂಕ್ ಅಗರ್ ವಾಲ್ ಮತ್ತು ರಾಹುಲ್ ಬ್ಯಾಟಿಂಗ್ ವೈಖರಿ ಆ ಮಟ್ಟದಲ್ಲಿತ್ತು. ಅದನ್ನು ವರ್ಣಿಸಲು ಸಾಧ್ಯವಿಲ್ಲ. ನೋಡಿ ಆನಂದಿಸಬೇಕು ಅಷ್ಟೇ..
ಹೌದು, ಮಯಾಂಕ್ ಅಗರ್ ವಾಲ್ ಅವರ ಆಟಕ್ಕೊಂದು ಸಲಾಂ.. ಕ್ಲಾಸ್ ಮತ್ತು ಮಾಸ್ ಆಟದ ಮೂಲಕ ರಾಯಲ್ಸ್ ಬೌಲರ್ ಗಳ ಮೇಲೆ ಸವಾರಿ ನಡೆಸಿದ್ರು. ಬೌಂಡರಿ ಮತ್ತು ಸಿಕ್ಸರ್ ಗಳಿಂದ ರಾಜಸ್ತಾನ ರಾಯಲ್ಸ್ ಬೌಲರ್ ಗಳಿಗೆ ತಲೆನೋವಾಗಿ ಪರಿಣಮಿಸಿದ್ರು.
ನಾಯಕ ಸ್ಟೀವನ್ ಸ್ಮಿತ್ ಅವರ ತಂತ್ರಗಾರಿಕೆ ಮಯಾಂಕ್ ಬ್ಯಾಟಿಂಗ್ ವೈಖರಿಗೆ ಅಡ್ಡಿಯಾಗಲೇ ಇಲ್ಲ. ಉನದ್ಕಾಟ್, ಅಂಕಿತ್ ರಜಪೂತ್, ಜೋಫ್ರಾ ಆರ್ಚರ್, ಶ್ರೇಯಸ್ ಗೋಪಾಲ್, ಟಾಮ್ ಕುರನ್ ಅವರ ಎಸೆತಗಳನ್ನು ಮನಬಂದಂತೆ ದಂಡಿಸಿದ್ರು. ರಾಯಲ್ಸ್ ತಂಡಕ್ಕೆ ಮಯಾಂಕ್ ಮತ್ತು ರಾಹುಲ್ ರಾಹು ಕೇತು ಗ್ರಹದಂತೆ ಕಾಡಿದ್ರು.
ಕೇವಲ 45 ಎಸೆತಗಳಲ್ಲಿ ಶತಕ ದಾಖಲಿಸಿದ್ದ ಮಯಾಂಕ್ ಅಗರ್ ವಾಲ್ ಐಪಿಎಲ್ ನಲ್ಲಿ ಚೊಚ್ಚಲ ಶತಕ ಸಿಡಿಸಿದ್ದ ಸಂಭ್ರಮದಲ್ಲೂ ತೇಲಾಡಿದ್ರು. ಅಲ್ಲದೆ ಕೆ.ಎಲ್. ರಾಹುಲ್ ಜೊತೆ 16.3 ಓವರ್ ಗಳಲ್ಲಿ 183 ರನ್ ಗಳ ಜೊತೆಯಾಟವನ್ನು ದಾಖಲೆಯನ್ನು ಬರೆದ್ರು. ಅಂತಿಮವಾಗಿ ಮಯಾಂಕ್ ಅಗರ್ ವಾಲ್ ಅವರು 106 ರನ್ ದಾಖಲಿಸಿ ಟಾಮ್ ಕುರನ್ಗೆ ವಿಕೆಟ್ ಒಪ್ಪಿಸಿದ್ರು. ಮಯಾಂಕ್ ಪೆವಿಲಿಯನ್ ಹಾದಿ ಹಿಡಿಯುವ ಮುನ್ನ 50 ಎಸೆತಗಳಲ್ಲಿ 10 ಬೌಂಡರಿ ಮತ್ತು ಏಳು ಸಿಕ್ಸರ್ ಗಳ ಸಹಾಯದಿಂದ 107 ರನ್ ಗಳಿಸಿದ್ರು.
ಇನ್ನೊಂದೆಡೆ ಕೆ.ಎಲ್. ರಾಹುಲ್ ಅವರ ಮನಮೋಹಕ ಆಟ ಮಯಾಂಕ್ ಆಟದ ಎದುರು ಮಂಕಾಗಿ ಹೋದ್ರೂ ತಂಡದ ರನ್ ಗತಿಯನ್ನು ಏರಿಸಲು ಸಹಕರಿಸಿದ್ರು. ರಾಹುಲ್ ಅವರು 54 ಎಸೆತಗಳಲ್ಲಿ 69 ರನ್ ದಾಖಲಿಸಿದ್ರು. ಇದ್ರಲ್ಲಿ ಏಳು ಬೌಂಡರಿ ಮತ್ತು ಒಂದು ಸಿಕ್ಸರ್ ಗಳನ್ನು ಸಿಡಿಸಿದ್ರು. ಅಂತಿಮವಾಗಿ ರಾಹುಲ್ ಅವರು ಅಂಕಿತ್ ರಜಪೂತ್ಗೆ ವಿಕೆಟ್ ಒಪ್ಪಿಸಿದ್ರು.
ಬಳಿಕ ಗ್ಲೇನ್ ಮ್ಯಾಕ್ಸ್ ವೆಲ್ ಅಜೇಯ 13 ರನ್ ಗಳಿಸಿದ್ರೆ, ನಿಕೊಲಾಸ್ ಪೂರನ್ ಅವರು ಮೂರು ಸಿಕ್ಸರ್ ಹಾಗೂ ಒಂದು ಬೌಂಡರಿಯ ನೆರವಿನಿಂದ ಅಜೇಯ 25 ರನ್ ಗಳಿಸಿದ್ರು. ಅಂತಿಮವಾಗಿ ಕಿಂಗ್ ಇಲೆವೆನ್ ಪಂಜಾಬ್ ತಂಡ ನಿಗದಿತ 20 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿತ್ತು.