ಧೋನಿಯ ಸಿಕ್ಸ್… ಚೆಂಡು ಮೈದಾನದಿಂದ ಹೊರಕ್ಕೆ.. ಅಭಿಮಾನಿಯ ಕೈಯಲ್ಲಿ ಮಹಿಯ ಮಹಿಮೆ..!
2020ರ ಯುಎಇ ಐಪಿಎಲ್ ಟೂರ್ನಿಯ ನಾಲ್ಕನೇ ಪಂದ್ಯ ಜಿದ್ದಾಜಿದ್ದಿನಿಂದಲೇ ಅಂತ್ಯಗೊಂಡಿತ್ತು. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ತಾನ ರಾಯಲ್ಸ ತಂಡಗಳ ನಡುವಿನ ಪಂದ್ಯದಲ್ಲಿ ಸಿಕ್ಸರ್ಗಳ ಸುರಿಮಳೆಯೇ ಆಗಿದೆ. ಉಭಯ ತಂಡಗಳು ಒಟ್ಟು ದಾಖಲಿಸಿದ್ದ ರನ್ ಗಳು 416. ದಾಖಲಾದ ಸಿಕ್ಸರ್ ಗಳು ಒಟ್ಟು 33. 18 ಬೌಂಡರಿಗಳು ಬಂದಿವೆ.
ಹಲವು ಏರಿಳಿತಗಳ ನಡುವೆ ರೋಚಕವಾಗಿ ಸಾಗಿದ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡ 16 ರನ್ ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿದೆ. ಈ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡ 17 ಸಿಕ್ಸರ್ ಗಳನ್ನು ಸಿಡಿಸಿದ್ರೆ, ಸಿಎಸ್ಕೆ ತಂಡದಿಂದ 16 ಸಿಕ್ಸರ್ಗಳು ಬಂದಿವೆ.
ರಾಜಸ್ತಾನ ರಾಯಲ್ಸ್ ತಂಡದ ಪರ ಸಂಜು ಸಾಮ್ಸನ್ ಅವರು 9 ಸಿಕ್ಸರ್ ಗಳನ್ನು ಸಿಡಿಸಿದ್ರೆ, ಸ್ಟೀವನ್ ಸ್ಮಿತ್ ನಾಲ್ಕು ಸಿಕ್ಸರ್ ಹಾಗೂ ಜೋಫ್ರಾ ಆರ್ಚರ್ ಸತತ ನಾಲ್ಕು ಸಿಕ್ಸರ್ಗಳನ್ನು ಸಿಡಿಸಿದ್ದಾರೆ.
ಇನ್ನು ಸಿಎಸ್ಕೆ ತಂಡದಿಂದ ಶೇನ್ ವಾಟ್ಸನ್ ನಾಲ್ಕು ಹಾಗೂ ಡುಪ್ಲೇಸಸ್ ಅವರು ಏಳು ಸ್ಯಾಮ್ ಕುರನ್ ಎರಡು ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಆದ್ರೆ ಇವೆಲ್ಲಕ್ಕಿಂತ ಹೆಚ್ಚು ಗಮನ ಸೆಳೆದಿರುವುದು ಧೋನಿಯ ಮೂರು ಸಿಕ್ಸರ್ಗಳು. ಕೊನೆಯ ಓವರ್ ನಲ್ಲಿ ಟಾಮ್ ಕುರನ್ ಅವರ ಮೂರು, ನಾಲ್ಕು ಮತ್ತು ಐದನೇ ಎಸೆತಗಳನ್ನು ಸಿಕ್ಸರ್ ಆಗಿ ಪರಿವರ್ತಿಸಿದ್ರು.
ಈ ಪೈಕಿ ಒಂದು ಸಿಕ್ಸರ್ ಶಾರ್ಜಾ ಕ್ರೀಡಾಂಗಣವನ್ನು ದಾಟಿ ಚೆಂಡು ರಸ್ತೆಗೆ ಬಿದ್ದಿದೆ. ಆ ಚೆಂಡನ್ನು ಕ್ರಿಕೆಟ್ ಅಭಿಮಾನಿಯೊಬ್ಬ ತೆಗೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ಈ ದೃಶ್ಯವನ್ನು ಗಮನಿಸಿದ್ದ ವೀಕ್ಷಕ ವಿವರಣೆಕಾರರು, ಈ ಚೆಂಡನ್ನು ಅಭಿಮಾನಿಯು ಖಂಡಿತವಾಗಿ ಕೊಡುವುದಿಲ್ಲ. ಜೀವ ಮಾನದಲ್ಲಿ ಸಿಕ್ಕ ಅತ್ಯಮೂಲ್ಯ ಬಹುಮಾನ ಅಂತ ಆ ಚೆಂಡನ್ನು ತನ್ನಲ್ಲೇ ಇಟ್ಟುಕೊಳ್ಳುತ್ತಾನೆ ಅಂತ ಬಣ್ಣಿಸಿದ್ದಾರೆ.
ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದ ಧೋನಿಗೆ ತಂಡವನ್ನು ಗೆಲ್ಲಿಸಿಕೊಡುವಂತಹ ಜವಾಬ್ದಾರಿ ಇತ್ತು. ಕೊನೆಯ ನಾಲ್ಕು ಓವರ್ ಗಳಲ್ಲಿ ಸಿಎಸ್ಕೆ ತಂಡಕ್ಕೆ 79 ರನ್ ಗಳು ಬೇಕಿದ್ದವು. ಇನ್ನು ಕೊನೆಯ ಆರು ಎಸೆತಗಳಲ್ಲಿ ಸಿಎಸ್ಕೆ ತಂಡಕ್ಕೆ 38 ರನ್ ಗಳು ಬೇಕಿದ್ದವು. ಆದ್ರೆ ಸಿಎಸ್ಕೆ 21 ರನ್ ಗಳಿಸಲಷ್ಟೇ ಶಕ್ತವಾಯ್ತು. ಧೋನಿ ಕೊನೆಯ ಓವರ್ ನಲ್ಲಿ 20 ರನ್ ಗಳಿಸಿದ್ದು. ಒಟ್ಡಾರೆ ಧೋನಿ 17 ಎಸೆತಗಳಲ್ಲಿ ಅಜೇಯ 29 ರನ್ ದಾಖಲಿಸಿದ್ರು.
ಇನ್ನು ಈ ಪಂದ್ಯ ಮತ್ತೊಂದು ಐತಿಹಾಸಿಕ ದಾಖಲೆ ಸಮಗೊಳಿಸಿದ್ದ ಹೆಗ್ಗಳಿಕೆಗೂ ಪಾತ್ರವಾಯ್ತು. 2018ರಲ್ಲಿ ಸಿಎಸ್ಕೆ ಮತ್ತು ಆರ್ಸಿಬಿ ತಂಡಗಳ ನಡುವಿನ ಪಂದ್ಯದಲ್ಲಿ 33 ಸಿಕ್ಸರ್ ಗಳು ದಾಖಲಾಗಿದ್ದವು.