ಶಾರ್ಜಾ: ಶಾರ್ಜಾ ಅಂಗಳದಲ್ಲಿ ಮುಂಬೈ ಇಂಡಿಯನ್ ತಂಡದ ಬ್ಯಾಟ್ಸ್ ಮೆನ್ ಗಳು ಅಬ್ಬರಿಸಿದ್ದಾರೆ.
ಮುಂಬೈ ದಾಂಡಿಗರ ಆರ್ಭಟಕ್ಕೆ ಸನ್ ರೈಸರ್ಸ್ ಹೈದರಾಬಾದ್ ಬೌಲರ್ ಗಳು ಶೈನ್ ಆಗಲೇ ಇಲ್ಲ.
ಪರಿಣಾಮ ಹೈದರಾಬಾದ್ ತಂಡಕ್ಕೆ ಪಂದ್ಯ ಗೆಲ್ಲಲು ಮುಂಬೈ 209 ರನ್ ಗಳ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಗೆ ಬ್ಲೂ ಆರ್ಮಿಗೆ ಆರೆಂಜ್ ಆರ್ಮಿ ಮೊದಲ ಓವರ್ ನಲ್ಲಿ ಮುಂಬೈ ನಾಯಕ ರೋಹಿತ್ ಶರ್ಮಾ ಅವರನ್ನು ಔಟ್ ಮಾಡಿ ಮೇಲುಗೈ ಸಾಧಿಸಿತು.
ಆದ್ರೆ ಡಿ ಕಾಕ್ ಜೊತೆ ಕೂಡಿದ ಸೂರ್ಯಕುಮಾರ್ ಯಾದವ್ ಸಮಯೋಚಿತ ಆಟವಾಡಿದರು.
ಆದರೆ 5ನೇ ಓವರಿನ 4ನೇ ಬಾಲಿನಲ್ಲಿ ಸಿದ್ದಾರ್ಥ್ ಕೌಲ್ ಎಸೆದ ಎಸೆತವನ್ನು ಬೌಂಡರಿಗಟ್ಟುವ ತವಕದಲ್ಲಿ 27 ರನ್ ಗಳಿಸಿ ಸೂರ್ಯಕುಮಾರ್ ಯಾದವ್ ಔಟ್ ಆದರು.
ಪವರ್ ಪ್ಲೇ ಮುಕ್ತಾಯದ ವೇಳೆ ಮುಂಬೈ ಎರಡು ವಿಕೆಟ್ ಕಳೆದುಕೊಂಡು 48 ರನ್ ಸೇರಿಸಿತು.
6 ಓವರ್ ನಂತರ ಸ್ಫೋಟಕ ಆಟಕ್ಕೆ ಮುಂದಾದ ಕ್ವಿಂಟನ್ ಡಿ ಕಾಕ್ ಮತ್ತು ಇಶಾನ್ ಕಿಶನ್ 10 ಓವರ್ ಮುಕ್ತಾಯದ ವೇಳೆಗೆ ತಂಡವನ್ನು 90ರ ಗಡಿ ಮುಟ್ಟಿಸಿದರು.
ಇದನ್ನೂ ಓದಿ : ಕಿಂಗ್ಸ್ 11 ವರ್ಸಸ್ ಸೂಪರ್ ಕಿಂಗ್ಸ್ : ಸೋಲಿನ ಸುಳಿಯಿಂದ ಮುಕ್ತಿ ಯಾರಿಗೆ?
ಈ ವೇಳೆ ದಾಳಿಗೆ ಇಳಿದ ಸ್ಪಿನ್ನರ್ ರಶೀದ್ ಖಾನ್ 67 ರನ್ ಬಾರಿಸಿ ಮುನ್ನುಗ್ಗುತ್ತಿದ್ದ ಡಿ ಕಾಕ್ ಗೆ ಪೆವೀಲಿಯನ್ ದಾರಿ ತೋರಿಸಿದರು.
ಡಿ ಕಾಕ್ ಬೆನ್ನಲ್ಲೆ ಕಿಶನ್ ಕೂಡ ಮನೀಶ್ ಪಾಂಡೆಗೆ ಕ್ಯಾಚ್ ನೀಡಿ ಔಟ್ ಆದರು.
ಈ ಸಂಕಷ್ಟದ ಸ್ಥಿತಿಯಲ್ಲಿ ಕ್ರೀಸ್ ಗೆ ಬಂದ ಬಿಗ್ ಹಿಟ್ಟರ್ ಗಳಾದ ಕಿರನ್ ಪೊಲಾರ್ಡ್ ಮತ್ತು ಹಾರ್ದಿಕ್ ಪಾಂಡ್ಯ ಹೈದರಾಬಾದ್ ಬೌಲರ್ ಗಳನ್ನು ಯದ್ವಾತದ್ವಾ ದಂಡಿಸಿದರು.
ರೈಸರ್ಸ್ ಬೌಲರ್ ಗಳ ಮೇಲೆ ದಂಡಯಾತ್ರೆ ನಡೆಸಿ ಈ ಪ್ರಳಯಾಂತಕರು 25 ಬಾಲಿಗೆ 41 ರನ್ ಗಳನ್ನು ಚಚ್ಚಿದರು.
ಆದರೆ ಇನ್ನಿಂಗ್ಸ್ ನ ಕೊನೆಯ ಓವರಿನ ಎರಡನೇ ಬಾಲಿನಲ್ಲಿ ಹಾರ್ದಿಕ್ ಪಾಂಡ್ಯ ಅವರು 28 ರನ್ ಗಳಿಸಿ ಔಟ್ ಆದರು.
ಕೊನೆಯ ನಾಲ್ಕು ಬಾಲಿಗೆ ಕ್ರುನಾಲ್ ಪಾಂಡ್ಯ 20 ರನ್ ಸಿಡಿಸಿದರು. ಪರಿಣಾಮ ಮುಂಬೈ ನಿಗದಿತ 20 ಓವರ್ ಗಳಲ್ಲಿ 208 ರನ್ ಗಳಿಸಿತು.
ಹೈದರಾಬಾದ್ ಪರ ಸಂದೀಪ್ ಶರ್ಮಾ, ಸಿದ್ಧಾರ್ಥ ಕೌಲ್ ತಲಾ ಎರಡು ವಿಕೆಟ್, ರಶೀರ್ ಖಾನ್ 1 ವಿಕೆಟ್ ಪಡೆದರು.








