ದುಬೈ : 13 ನೇ ಆವೃತ್ತಿಯ ಇಂದಿನ ಎರಡನೇ ಪಂದ್ಯದಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿರುವ ಕಿಂಗ್ಸ್ 11 ಪಂಜಾಬ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಗೆಲುವಿಗಾಗಿ ಸೆಣೆಸಾಟ ನಡೆಸಲಿವೆ.
ಟೂರ್ನಿಯಲ್ಲಿ ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಿದ್ದ ಸಿಎಸ್ ಕೆ ಹ್ಯಾಟ್ರಿಕ್ ಸೋಲುಂಡು ಕಂಗಾಲಾಗಿದೆ. ಇತ್ತ ಅತ್ಯುತ್ತಮ ಪ್ರದರ್ಶನ ಹೊರತಾಗಿ ಕಿಂಗ್ಸ್ 11 ಪಂಜಾಬ್ ತಂಡ ಗೆಲುವಿನ ಅಂಚಿನಲ್ಲಿ ಪಂದ್ಯವನ್ನು ಕೈ ಚೆಲ್ಲುತ್ತಿದೆ. 
ತಂಡಗಳ ಬಲಾಬಲ ಹೀಗಿದೆ
ಐಪಿಎಲ್ ಇತಿಹಾಸದಲ್ಲೇ ಧೋನಿ ಸಾರಥ್ಯದ ಚೆನ್ನೈ ತಂಡ ಬಲಿಷ್ಠ ತಂಡ ಎಂದು ಗುರುತಿಸಿಕೊಂಡಿದೆ. ಆದ್ರೆ ಈ ಆವೃತ್ತಿಯಲ್ಲಿ ಸೋಲಲೆಂದೇ ಆಟವಾಡುತ್ತಿರುವ ರೀತಿ ಚೆನ್ನೈ ಪ್ರದರ್ಶನವಿದೆ.
ಇದನ್ನೂ ಓದಿ : IPL2020 | 3ನೇ ಗೆಲುವಿಗಾಗಿ ಮುಂಬೈ- ಹೈದರಾಬಾದ್ ಗುದ್ದಾಟ
ಇತ್ತ ಕನ್ನಡಿಗರಿಂದಲೇ ತುಂಬಿರುವ ಪಂಜಾಬ್ ತಂಡ ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ. ಪಂದ್ಯ ಸೋತರು ತಂಡ ಎಲ್ಲರ ಗಮನ ಸೆಳೆಯುತ್ತಿದೆ.
ಚೆನ್ನೈ ಸೂಪರ್ ಕಿಂಗ್ಸ್
ಸಿಎಸ್ ಕೆ ತಂಡದ ಬಲ ಎಂದ್ರೆ ಅದು ಸಂಘಟಿತ ಹೋರಾಟ. ಎಂತಹದ್ದೇ ಪರಿಸ್ಥಿತಿ ಬಂದರೂ ಗೆಲುವಿಗಾಗಿ ಹೋರಾಡೋದು ಚೆನ್ನೈ ತಂಡದ ತಾಕತ್ತು. ಆದ್ರೆ ಈ ಬಾರಿ ಸಿಎಸ್ ಕೆ ಗಾಂಡೀವಿ ಇಲ್ಲದ ಅರ್ಜುನ ರೀತಿ ಪ್ರದರ್ಶನ ನೀಡುತ್ತಿದೆ. 
ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ಆರಂಬಿಕ ಆಟಗಾರರು ವಿಫಲರಾಗುತ್ತಿದ್ದಾರೆ. ಬ್ಯಾಟಿಂಗ್ ನಲ್ಲಿ ವಾಟ್ಸನ್ ಪದೇ ಪದೆ ವೈಫಲ್ಯ ಅನುಭವಿಸುತ್ತಿರುವುದು ತಂಡಕ್ಕೆ ತಲೆನೋವು ತರಿಸಿದೆ. ಗಾಯದ ನಂತರ ಕಂಬ್ಯಾಕ್ ಮಾಡಿರುವ ರಾಯುಡು ಕಳೆದ ಪಂದ್ಯದಲ್ಲಿ ಅಬ್ಬರಿಸಲಿಲ್ಲ. ಡು ಪ್ಲೆಸಿಸ್ ಮತ್ತು ನಾಯಕ ಧೋನಿಯನ್ನು ಹೊರತುಪಡಿಸಿ ಯಾವೊಬ್ಬ ಆಟಗಾರರೂ ಹೇಳಿಕೊಳ್ಳುವಂತ ಉತ್ತಮ ಪ್ರದರ್ಶನ ತೋರುತ್ತಿಲ್ಲ. ಆದರೆ ಕಳೆದ ಪಂದ್ಯದಲ್ಲಿ 50 ರನ್ ಸಿಡಿದ್ದ ಜಡೇಜಾ ಮೇಲೆ ತಂಡ ಭರವಸೆ ಹೊಂದಿದೆ.
ಬೌಲಿಂಗ್ ವಿಚಾರಕ್ಕೆ ಬಂದ್ರೆ ಸಿಎಸ್ ಕೆ ಆಟಗಾರರು ಸಾಕಷ್ಟು ಸುಧಾರಿಸಬೇಕಿದೆ. ಜಡೇಜಾ, ಪೀಯೂಷ್ ಚಾವ್ಲಾ, ದೀಪಕ್ ಚಹಾರ್, ಶಾರ್ದೂಲ್ ಠಾಕೂರ್ ದುಬಾರಿಯಾಗುತ್ತಿದ್ದಾರೆ.
ಕಿಂಗ್ಸ್ 11 ಪಂಜಾಬ್
ಕನ್ನಡಿಗ ಕೆ.ಎಲ್. ರಾಹುಲ್ ನೇತೃತ್ವದ ಪಂಜಾಬ್ ತಂಡ, ಸಮರ್ಥ ಆಟಗಾರರನ್ನ ಹೊಂದಿದ್ದರೂ ಗೆಲುವು ಸಾಧಿಸಲು ಆಗುತ್ತಿಲ್ಲ. ಕಳೆದ ಪಂದ್ಯವನ್ನು ಹೊರತುಪಡಿಸಿದ್ರೆ ರಾಹುಲ್, ಮಾಯಾಂಕ್ ಅಗರ್ವಾಲ್ ಇಬ್ಬರು ಬೊಂಬಾಟ್ ಪ್ರದರ್ಶನ ನೀಡಿದ್ದಾರೆ. ಇವರಿಗೆ ಮ್ಯಾಕ್ಸ್ ವೆಲ್, ಕರುಣ್ ನಾಯರ್, ಪೊರನ್ ಸಾಥ್ ನೀಡಬೇಕಿದೆ.
ಪಂಜಾಬ್ ಬೌಲಿಂಗ್ ವಿಭಾಗದಲ್ಲಿ ಶೆಲ್ಡನ್ ಕಾಟ್ರೆಲ್ ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ರು. ಆದ್ರೆ ಮೊಹಮ್ಮದ್ ಶಮಿ, ರವಿ ಬಿಷ್ನೋಯಿ, ನೀಶಮ್, ಕೆ.ಗೌತಮ್ ದುಬಾರಿಯಾಗುತ್ತಿದ್ದು, ಸುಧಾರಿಸಬೇಕಿದೆ.
ಚೆನ್ನೈ ತಂಡದ್ದೇ ಮೇಲು ಗೈ
ಐಪಿಎಲ್ ಮೊದಲ ಆವೃತ್ತಿಯಿಂದ ಇಲ್ಲಿಯವರೆಗೆ ಈ ಎರಡು ತಂಡಗಳು 22 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ 9 ಪಂದ್ಯಗಳಲ್ಲಿ ಪಂಜಾಬ್ ಗೆಲುವು ಸಾಧಿಸಿದ್ರೆ, 13 ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಸಿಎಸ್ ಕೆ ಮೇಲುಗೈ ಸಾಧಿಸಿದೆ.
ದುಬೈ ಅಂಗಳದಲ್ಲಿ ಮ್ಯಾಚ್ ನಡೆಯುತ್ತಿರುವುದರಿಂದ ಮೊದಲು ಬ್ಯಾಟ್ ಮಾಡೋದು ಉತ್ತಮ.








