ಕೆ.ಎಲ್. ರಾಹುಲ್ ಅಜೇಯ ಶತಕಕ್ಕೆ ನೆರವಾದ ವಿರಾಟ್ ಕೊಹ್ಲಿ..!
ಕೆ.ಎಲ್. ರಾಹುಲ್.. ಕ್ಲಾಸ್ ಆಟಗಾರನೂ ಹೌದು.. ಮಾಸ್ ಆಟಗಾರನೂ ಹೌದು. ಟೀಕೆಗಳು ಏನೇ ಇರಲಿ.. ಕ್ರೀಸ್ ಗೆ ಅಂಟಿಕೊಂಡು ಬಿಟ್ರೆ ಕೆ.ಎಲ್. ರಾಹುಲ್ ಅವರನ್ನು ತಡೆಯುವುದು ತುಂಬಾನೇ ಕಷ್ಟ.. ಅದು ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಮತ್ತೊಮ್ಮೆ ಸಾಬೀತಾಯ್ತು. ಆರ್ ಸಿಬಿಯ ಬೌಲಿಂಗ್ ಚಾಲೆಂಜ್ಗೆ ಸವಾಲು ಹಾಕುವಂತೆ ಬ್ಯಾಟ್ ಬೀಸಿದ್ದ ಕೆ.ಎಲ್. ರಾಹುಲ್ ವಿರಾಟನ ಮುಂದೆಯೇ ತನ್ನ ವಿರಾಟ ರೂಪ ಪ್ರದರ್ಶಿಸಿದ್ರು. ಪರಿಣಾಮ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಆರ್ ಸಿಬಿ ಮುಖಭಂಗ ಅನುಭವಿಸಬೇಕಾಯ್ತು.
ಹೌದು, “ರಾಹು” ಗ್ರಹ ಓಡಾಡುವಂತೆ ದುಬೈನಲ್ಲಿ ಕೆ.ಎಲ್. ರಾಹುಲ್ ಚೆಂಡನ್ನು ಮೈದಾನದ ಮೂಲೆ ಮೂಲೆಗೆ ಅಟ್ಟಾಡಿಸಿದ್ರು. ಆರ್ ಸಿಬಿ ಬೌಲರ್ ಗಳ ಮೇಲೆ ಒಂಚೂರು ದಯೆ ಕರುಣೆ ತೋರದೆ ಬ್ಯಾಟಿಂಗ್ ಮಾಡಿದ್ರು. ಏಳು ಸಿಕ್ಸರ್ ಮತ್ತು 14 ಬೌಂಡರಿಗಳನ್ನು ಸಿಡಿಸಿದ್ದ ರಾಹುಲ್ ಎದುರಿಸಿದ್ದ ಎಸೆತಗಳು 69. ದಾಖಲಿಸಿದ್ದ ರನ್ ಗಳು ಅಜೇಯ 132.
ಸಿಡಿಲಬ್ಬರದ ಬ್ಯಾಟಿಂಗ್ ನಡುವೆಯೂ ಕೆ.ಎಲ್. ರಾಹುಲ್ ಎರಡು ಜೀವದಾನಗಳನ್ನು ಪಡೆದುಕೊಂಡಿದ್ದರು. ಗೆಳೆಯನ ಆಟವನ್ನು ಮನಸಾರೆ ಆಸ್ವಾದಿಸುತ್ತಿದ್ದ ವಿರಾಟ್ ಕೊಹ್ಲಿ ರಾಹುಲ್ ಶತಕಕ್ಕೆ ನೆರವಾದ್ರು. ಶತಕದಂಚಿನಲ್ಲಿದ್ದಾಗ ವಿರಾಟ್ ಕೊಹ್ಲಿ ಒಂದಲ್ಲ ಎರಡು ಬಾರಿ ರಾಹುಲ್ ಅವರ ಕ್ಯಾಚ್ ಅನ್ನು ಕೈ ಚೆಲ್ಲಿದ್ರು. ಜವಾಬ್ದಾರಿ, ತಾಳ್ಮೆ ಹಾಗೂ ಆಕ್ರಮಣಕಾರಿಯಾಗಿ ಆಡುತ್ತಿದ್ದ ರಾಹುಲ್ 86 ರನ್ ಗಳಿಸುವ ತನಕ ಎದುರಾಳಿ ತಂಡಕ್ಕೆ ಔಟಾಗುವ ಅವಕಾಶವನ್ನೇ ನೀಡಲಿಲ್ಲ.
ಆದ್ರೆ 86 ಮತ್ತು 90 ರನ್ ಗಳಿಸಿದ್ದಾಗ ವಿರಾಟ್ ಕೊಹ್ಲಿ ಅವರು ರಾಹುಲ್ ನೀಡಿದ್ದ ಕ್ಯಾಚ್ ಅನ್ನು ಡ್ರಾಪ್ ಮಾಡಿದ್ರು. ಇದರ ಅವಕಾಶವನ್ನು ಪಡೆದುಕೊಂಡ ರಾಹುಲ್ ಡೇಲ್ ಸ್ಟೈನ್ ಅವರ ಎಸೆತಗಳನ್ನು ಸಿಕ್ಸರ್ ಮತ್ತು ಬೌಂಡರಿ ಬಾರಿಸುವ ಮೂಲಕ ಶತಕದ ಸಂಭ್ರಮದಲ್ಲಿ ತೇಲಾಡಿದ್ರು.
ಪಂದ್ಯದ ಆರಂಭದಿಂದ ಅಂತ್ಯದ ತನಕ ಸಂಪೂರ್ಣವಾಗಿ ತನ್ನ ಹಿಡಿತದಲ್ಲಿಟ್ಟುಕೊಂಡ ರಾಹುಲ್ ಕೊನೆಯ ನಾಲ್ಕು ಓವರ್ ಗಳಲ್ಲಿ 74 ರನ್ ಸಿಡಿಸಿದ್ರು. ಇದ್ರಲ್ಲಿ ಕರುಣ್ ನಾಯರ್ ಅಜೇಯ 15 ರನ್ ಗಳಿಸಿದ್ರು.