ಮಯಾಂಕ್ ಸಿಡಿಲು .. ರಾಹುಲ್ ಮಿಂಚು… ಟೆವಾಟಿಯಾ ಬಿರುಗಾಳಿ.. ಸಂಜು ಸುಂಟರಗಾಳಿ..ಶಾರ್ಜಾ ದಲ್ಲಿ ರನ್ ಸ್ಫೋಟ..!
ಮಯಾಂಕ್ ಅಗರ್ ವಾಲ್ ಗುಡುಗು… ರಾಹುಲ್ ಮಿಂಚು, ಟೆವಾಟಿಯಾ ಬಿರುಗಾಳೀ, ಸಂಜು ಸುಂಟರಗಾಳಿಯಂತೆ ಬ್ಯಾಟ್ ಬೀಸಿದ್ರೆ, ಬೌಲರ್ ಗಳು ಪಾಡು ಮೇಘ ಸ್ಫೋಟಗೊಂಡಂತೆ ಆದಾಗ ಶಾರ್ಜಾದಲ್ಲಿ ಆಗಿದ್ದು ರನ್ ಸ್ಫೋಟ..
ಅಬ್ಬಾ.. ಒಂದು ವೇಳೆ ಮೈದಾನದಲ್ಲಿ ಪ್ರೇಕ್ಷಕರು ಇರುತ್ತಿದ್ರೆ ಬಹುಶಃ ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ಅಂತ ಕುಪ್ಪಳಿಸಿ ಕುಣಿಯುತ್ತಿದ್ದರೇನೋ.. ಯಾಕಂದ್ರೆ ಇಬ್ಬರು ಕನ್ನಡಿಗರ ಆಟ ಬೊಂಬಾಟ್ ಆಗಿತ್ತು. ಅದೇ ರೀತಿ ಮಯಾಂಕ್ ಅಗರ್ ವಾಲ್ ಮತ್ತು ರಾಹುಲ್ ಬ್ಯಾಟಿಂಗ್ ವೈಖರಿ ಆ ಮಟ್ಟದಲ್ಲಿತ್ತು. ಅದನ್ನು ವರ್ಣಿಸಲು ಸಾಧ್ಯವಿಲ್ಲ. ನೋಡಿ ಆನಂದಿಸಬೇಕು ಅಷ್ಟೇ..
ಹೌದು, ಮಯಾಂಕ್ ಅಗರ್ ವಾಲ್ ಅವರ ಆಟಕ್ಕೊಂದು ಸಲಾಂ.. ಕ್ಲಾಸ್ ಮತ್ತು ಮಾಸ್ ಆಟದ ಮೂಲಕ ರಾಯಲ್ಸ್ ಬೌಲರ್ ಗಳ ಮೇಲೆ ಸವಾರಿ ನಡೆಸಿದ್ರು. ಬೌಂಡರಿ ಮತ್ತು ಸಿಕ್ಸರ್ ಗಳಿಂದ ರಾಜಸ್ತಾನ ರಾಯಲ್ಸ್ ಬೌಲರ್ ಗಳಿಗೆ ತಲೆನೋವಾಗಿ ಪರಿಣಮಿಸಿದ್ರು.
ನಾಯಕ ಸ್ಟೀವನ್ ಸ್ಮಿತ್ ಅವರ ತಂತ್ರಗಾರಿಕೆ ಮಯಾಂಕ್ ಬ್ಯಾಟಿಂಗ್ ವೈಖರಿಗೆ ಅಡ್ಡಿಯಾಗಲೇ ಇಲ್ಲ. ಉನದ್ಕಾಟ್, ಅಂಕಿತ್ ರಜಪೂತ್, ಜೋಫ್ರಾ ಆರ್ಚರ್, ಶ್ರೇಯಸ್ ಗೋಪಾಲ್, ಟಾಮ್ ಕುರನ್ ಅವರ ಎಸೆತಗಳನ್ನು ಮನಬಂದಂತೆ ದಂಡಿಸಿದ್ರು. ರಾಯಲ್ಸ್ ತಂಡಕ್ಕೆ ಮಯಾಂಕ್ ಮತ್ತು ರಾಹುಲ್ ರಾಹು ಕೇತು ಗ್ರಹದಂತೆ ಕಾಡಿದ್ರು.
ಕೇವಲ 45 ಎಸೆತಗಳಲ್ಲಿ ಶತಕ ದಾಖಲಿಸಿದ್ದ ಮಯಾಂಕ್ ಅಗರ್ ವಾಲ್ ಐಪಿಎಲ್ ನಲ್ಲಿ ಚೊಚ್ಚಲ ಶತಕ ಸಿಡಿಸಿದ್ದ ಸಂಭ್ರಮದಲ್ಲೂ ತೇಲಾಡಿದ್ರು. ಅಲ್ಲದೆ ಕೆ.ಎಲ್. ರಾಹುಲ್ ಜೊತೆ 16.3 ಓವರ್ ಗಳಲ್ಲಿ 183 ರನ್ ಗಳ ಜೊತೆಯಾಟವನ್ನು ದಾಖಲೆಯನ್ನು ಬರೆದ್ರು. ಅಂತಿಮವಾಗಿ ಮಯಾಂಕ್ ಅಗರ್ ವಾಲ್ ಅವರು 106 ರನ್ ದಾಖಲಿಸಿ ಟಾಮ್ ಕುರನ್ಗೆ ವಿಕೆಟ್ ಒಪ್ಪಿಸಿದ್ರು. ಮಯಾಂಕ್ ಪೆವಿಲಿಯನ್ ಹಾದಿ ಹಿಡಿಯುವ ಮುನ್ನ 50 ಎಸೆತಗಳಲ್ಲಿ 10 ಬೌಂಡರಿ ಮತ್ತು ಏಳು ಸಿಕ್ಸರ್ ಗಳ ಸಹಾಯದಿಂದ 107 ರನ್ ಗಳಿಸಿದ್ರು.
ಇನ್ನೊಂದೆಡೆ ಕೆ.ಎಲ್. ರಾಹುಲ್ ಅವರ ಮನಮೋಹಕ ಆಟ ಮಯಾಂಕ್ ಆಟದ ಎದುರು ಮಂಕಾಗಿ ಹೋದ್ರೂ ತಂಡದ ರನ್ ಗತಿಯನ್ನು ಏರಿಸಲು ಸಹಕರಿಸಿದ್ರು. ರಾಹುಲ್ ಅವರು 54 ಎಸೆತಗಳಲ್ಲಿ 69 ರನ್ ದಾಖಲಿಸಿದ್ರು. ಇದ್ರಲ್ಲಿ ಏಳು ಬೌಂಡರಿ ಮತ್ತು ಒಂದು ಸಿಕ್ಸರ್ ಗಳನ್ನು ಸಿಡಿಸಿದ್ರು. ಅಂತಿಮವಾಗಿ ರಾಹುಲ್ ಅವರು ಅಂಕಿತ್ ರಜಪೂತ್ಗೆ ವಿಕೆಟ್ ಒಪ್ಪಿಸಿದ್ರು.
ಬಳಿಕ ಗ್ಲೇನ್ ಮ್ಯಾಕ್ಸ್ ವೆಲ್ ಅಜೇಯ 13 ರನ್ ಗಳಿಸಿದ್ರೆ, ನಿಕೊಲಾಸ್ ಪೂರನ್ ಅವರು ಮೂರು ಸಿಕ್ಸರ್ ಹಾಗೂ ಒಂದು ಬೌಂಡರಿಯ ನೆರವಿನಿಂದ ಅಜೇಯ 25 ರನ್ ಗಳಿಸಿದ್ರು. ಅಂತಿಮವಾಗಿ ಕಿಂಗ್ ಇಲೆವೆನ್ ಪಂಜಾಬ್ ತಂಡ ನಿಗದಿತ 20 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿತ್ತು.
ಗೆಲ್ಲಲು 224 ರನ್ ಗಳ ಸವಾಲನ್ನು ಬೆನ್ನಟ್ಟಿದ್ದ ರಾಜಸ್ತಾನ ರಾಯಲ್ಸ್ ತಂಡಕ್ಕೆ ಆರಂಭದಲ್ಲೇ ಜೋಸ್ ಬಟ್ಲರ್ 4 ರನ್ ಗಳಿಸ ಕೈಕೊಟ್ರು. ನಂತರ ಸ್ಟೀವನ್ ಸ್ಮಿತ್ ಮತ್ತು ಸಂಜು ಸಾಮ್ಸನ್ ಎರಡನೇ ವಿಕೆಟ್ ಗೆ 81 ರನ್ ಪೇರಿಸಿ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದ್ರು. ಈ ಹಂತದಲ್ಲಿ 50 ರನ್ ಗಳಿಸಿದ್ದ ಸ್ಟೀವನ್ ಸ್ಮಿತ್ ಪೆವಿಲಿಯನ್ ಹಾದಿ ಹಿಡಿದ್ರು.
ನಂತರ ಸಂಜು ಸಾಮ್ಸನ್ ಅವರು ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಕಿಂಗ್ಸ್ ಬೌಲರ್ ಗಳನ್ನು ತಲ್ಲಣಗೊಳಿಸಿದ್ರು. ಬೌಂಡರಿ ಸಿಕ್ಸರ್ ಗಳ ಮೂಲಕ ಗಮನ ಸೆಳೆದ ಸಂಜು ಸಾಮ್ಸನ್ ಅವರು 16.1 ಓವರ್ ನಲ್ಲಿ ಶಮಿಗೆ ವಿಕೆಟ್ ಒಪ್ಪಿಸಿದ್ರು. ಸಂಜು ಸಾಮ್ಸನ್ ಅವರು ಪೆವಿಲಿಯನ್ ಹಾದಿ ಹಿಡಿಯುವ ಮುನ್ನ 42 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಏಳು ಸಿಕ್ಸರ್ ಗಳ ಸಹಾಯದಿಂದ ಆಕರ್ಷಕ 85 ರನ್ ಗಳಿಸಿದ್ರು. ರಾಬಿನ್ ಉತ್ತಪ್ಪ (9 ರನ್) ಹಾಗೇ ಬಂದು ಹೋದ್ರು.
ಸಾಮ್ಸನ್ ಔಟಾಗುತ್ತಿದ್ದಂತೆ ಎಲ್ಲರೂ ಕಿಂಗ್ಸ್ ಪಂಜಾಬ್ ಗೆಲ್ಲುತ್ತೆ ಅಂತ ಅಂದುಕೊಂಡಿದ್ದರು. ಆದ್ರೆ ಅಲ್ಲಿ ನಡೆದಿದ್ದೇ ಬೇರೆ. ರಾಹುಲ್ ಟೆವಾಟಿಯಾ ಒಂದೇ ಓವರ್ ನಲ್ಲಿ ಐದು ಸಿಕ್ಸರ್ ಸಿಡಿಸಿ ಪಂದ್ಯದ ಗತಿಯನ್ನೇ ಬದಲಾಯಿಸಿದ್ರು. 31 ಎಸೆತಗಳಲ್ಲಿ ಏಳು ಸಿಕ್ಸರ್ ಸಿಡಿಸಿದ್ದ ರಾಹುಲ್ ಟೆವಾಟಿಯಾ 53 ರನ್ ದಾಖಲಿಸಿ ಪಂದ್ಯಕ್ಕೆ ಹೊಸ ತಿರುವು ನೀಡಿದ್ರು. ಕೊನೆಯಲ್ಲಿ ಜೋಫ್ರಾ ಆರ್ಚರ್ ಎರಡು ಸಿಕ್ಸರ್ ಮತ್ತು ಟಾಮ್ ಕುರನ್ ಒಂದು ಬೌಂಡರಿ ಸಿಡಿಸಿ ರಾಜಸ್ತಾನ ರಾಯಲ್ಸ್ ಗೆ ಅಚ್ಚರಿಯ ಜಯ ಒದಗಿಸಿಕೊಟ್ರು.
ಕಿಂಗ್ಸ್ ಇಲೆವೆನ್ ವಿರುದ್ಧ ನಾಲ್ಕು ವಿಕೆಟ್ ಗಳಿಂದ ಗೆದ್ದ ರಾಜಸ್ತಾನ ರಾಯಲ್ಸ್ ಐಪಿಎಲ್ ನಲ್ಲಿ ಹೊಸ ದಾಖಲೆಯನ್ನ ಬರೆಯಿತ್ತು. ರಾಹುಲ್ ಟೆವಾಟಿಯಾ ಅಚ್ಚರಿಯ ರೀತಿಯಲ್ಲಿ ಬ್ಯಾಟಿಂಗ್ ಮಾಡಿದ್ರೆ, ಸಂಜು ಸಾಮ್ಸನ್ ತನ್ನ ಸಾಮಥ್ರ್ಯ ಏನು ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ರು.