ಕೆಕೆಆರ್ ಗೆಲುವಿಗೆ ಸ್ಫೂರ್ತಿಯಾದ ಕಿಂಗ್ ಖಾನ್ ಶಾರೂಕ್ ಖಾನ್
ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್ ಟೂರ್ನಿಯ 12ನೇ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡವನ್ನು 37 ರನ್ ಗಳಿಂದ ಪರಾಭವಗೊಳಿಸಿತು.
ಹಾಗೇ ನೋಡಿದ್ರೆ ಕೆಕೆಆರ್ ತಂಡಕ್ಕಿಂತ ರಾಜಸ್ತಾನ ರಾಯಲ್ಸ್ ಗೆಲುವಿನ ಫೇವರಿಟ್ ತಂಡವಾಗಿತ್ತು. ಆದ್ರೆ ಕೆಕೆಆರ್ ತಂಡದ ಯುವ ಬೌಲರ್ ಗಳು ಸ್ಟೀವನ್ ಸ್ಮಿತ್ ಪಡೆಯನ್ನು ಅಚ್ಚರಿಗೊಳಿಸುವಂತೆ ಬೌಲಿಂಗ್ ಮಾಡಿದ್ರು. ರಾಯಲ್ಸ್ ತಂಡದ ಸ್ಟಾರ್ ಬ್ಯಾಟ್ಸ್ ಮೆನ್ ಗಳಿಗೆ ಶಾಕ್ ನೀಡಿದ್ದ ಕೆಕೆಆರ್ ಬೌಲರ್ ಗಳು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಅಂದ ಹಾಗೇ ಕೆಕೆಆರ್ ತಂಡದ ಈ ಗೆಲುವಿಗೆ ಸ್ಫೂರ್ತಿಯಾಗಿದ್ದು ತಂಡದ ಸಹ ಮಾಲೀಕ ಕಿಂಗ್ ಖಾನ್ ಶಾರೂಕ್ ಖಾನ್.
ಶಾರೂಕ್ ಖಾನ್ ತನ್ನ ತಂಡವನ್ನು ಹುರಿದುಂಬಿಸಲು ತನ್ನ ಪತ್ನಿ ಹಾಗೂ ಮಗನ ಜೊತೆ ದುಬೈಗೆ ಹೋಗಿದ್ದರು. ಪ್ರೇಕ್ಷಕರ ಗ್ಯಾಲರಿಯಲ್ಲಿ ಮಾಸ್ಕ್ ಹಾಕೊಂಡು ತನ್ನ ಮಗ ಮತ್ತು ಪತ್ನಿಯ ಜೊತೆ ಶಾರೂಕ್ ಖಾನ್ ಪಂದ್ಯ ವೀಕ್ಷಿಸಿದ್ರು.
ಕೆಕೆಆರ್ ತಂಡ ಈಗಾಗಲೇ ಮೂರು ಪಂದ್ಯಗಳನ್ನು ಆಡಿದೆ. ಈ ಪೈಕಿ ಮೊದಲ ಪಂದ್ಯವನ್ನು ಸೋತಿರುವ ರೈಡರ್ಸ್ ತಂಡ ನಂತರ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದುಕೊಂಡಿದೆ.
ಇನ್ನು ಶಾರೂಕ್ ಖಾನ್ ಪಂದ್ಯವನ್ನು ವೀಕ್ಷಣೆ ಮಾಡ್ತಾರೆ ಅಂತ ಕೆಕೆಆರ್ ತಂಡ ಕಾರ್ಯನಿರ್ವಹಣಾಧಿಕಾರಿ ವೆಂಕಿ ಮೈಸೂರು ಫೇಸ್ ಬುಕ್ ನಲ್ಲಿ ಖಚಿತ ಪಡಿಸಿದ್ದರು. ಅಲ್ಲದೆ ಶಾರೂಕ್ ಖಾನ್ ಪಂದ್ಯ ವೀಕ್ಷಣೆ ಮಾಡುವ ಮೂಲಕ ತಂಡಕ್ಕೆ ಸ್ಫೂರ್ತಿ ತುಂಬಲಿದ್ದಾರೆ ಎಂದು ಸಹ ಹೇಳಿದ್ದರು.








