ಐಪಿಎಲ್ 2020- ಶುಬ್ಮನ್ ಗಿಲ್ ಆಟದ ಮುಂದೆ ಮಂಕಾದ ಸನ್ ರೈಸರ್ಸ್
ಶುಬ್ಮನ್ ಗಿಲ್ ಮತ್ತು ಇಯಾನ್ ಮೊರ್ಗಾನ್ ಅವರ ಮನಮೋಹಕ ಆಟದ ನೆರವನ್ನು ಪಡೆದ ಕೊಲ್ಕತ್ತಾ ನೈಟ್ ರೈಡಸ್ ತಂಡ 2020ರ ಐಪಿಎಲ್ ಟೂರ್ನಿಯ ಎಂಟನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಬಾದ್ ತಂಡವನ್ನು ಏಳು ವಿಕೆಟ್ ಗಳಿಂದ ಪರಾಭವಗೊಳಿಸಿತು.
ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸನ್ ರೈಸರ್ಸ್ ಹೈದ್ರಬಾದ್ ತಂಡ ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆರಂಭದಿಂದಲೇ ಡೇವಿಡ್ ವಾರ್ನರ್ ಮಿಂಚನ ಆಟವನ್ನಾಡಿದ್ರು. ಆದ್ರೆ ಜೋನಿ ಬೇರ್ ಸ್ಟೋವ್ 5 ರನ್ ಗಳಿಸಿ ನಿರಾಸೆ ಮೂಡಿಸಿದ್ರು. ಬಳಿಕ ಡೇವಿಡ್ ವಾರ್ನರ್ ಮತ್ತು ಮನೀಷ್ ಪಾಂಡೆ ತಂಡಕ್ಕೆ ಆಧಾರವಾದ್ರು. ಈ ಹಂತದಲ್ಲಿ ಡೇವಿಡ್ ವಾರ್ನರ್ 36 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದ್ರು.
ನಂತರ ಪಾಂಡೆ ಮತ್ತು ವೃದ್ದಿಮಾನ್ ಶಾಹ ಅವರು ತಂಡದ ರನ್ ಗತಿಯನ್ನು ಏರಿಸಲು ಮುಂದಾದ್ರು. ಬಿರುಸಿನ ಆಟವನ್ನಾಡಿದ್ದ ಮನೀಷ್ ಪಾಂಡೆ 38 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ಸಹಾಯದಿಂದ ಆಕರ್ಷಕ 51 ರನ್ ಗಳಿಸಿ ರಸೇಲ್ಗೆ ವಿಕೆಟ್ ಒಪ್ಪಿಸಿದ್ರು. ವೃದ್ದಿಮಾನ್ ಶಾಹ ಅವರು 30 ರನ್ ದಾಖಲಿಸಿ ರನೌಟಾದ್ರು. ಅಂತಿಮವಾಗಿ ಸನ್ ರೈಸರ್ಸ್ ಹೈದ್ರಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತು.
ಸವಾಲನ್ನು ಬೆನ್ನಟ್ಟಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಆರಂಭದಲ್ಲೇ ಆಘಾತ ಅನುಭವಿಸಿತ್ತು. ಆರಂಭಿಕ ಸುನೀಲ್ ನರೇನ್ ಶೂನ್ಯ ಸುತ್ತಿದ್ರೆ, ನಿತೇಶ್ ರಾಣ 26 ರನ್ ಗಳಿಸಿ ತನ್ನ ಹೋರಾಟವನ್ನು ಮುಗಿಸಿದ್ರು. ನಾಯಕ ದಿನೇಶ್ ಕಾರ್ತೀಕ್ ಕೂಡ ಶೂನ್ಯ ಸುತ್ತಿದ್ರು.
ಈ ನಡುವೆ ಆರಂಭಿಕ ಶುಬ್ಮನ್ ಗಿಲ್ ಅವರ ಭರ್ಜರಿ ಆಟ ಸನ್ ರೈಸರ್ಸ್ ಹೈದ್ರಬಾದ್ ತಂಡದ ಗೆಲುವಿನ ಆಸೆಯನ್ನು ಕಮರಿಹೋಗುವಂತೆ ಮಾಡಿತ್ತು. ಮತ್ತೊಂದೆಡೆ ಅನುಭವಿ ಆಟಗಾರ ಇಯಾನ್ ಮೊರ್ಗಾನ್ ಜವಾಬ್ದಾರಿಯುತ ಆಟ ಪ್ರದರ್ಶಿಸಿದ್ರು. ಶುಬ್ಮನ್ ಗಿಲ್ ಮತ್ತು ಮೊರ್ಗಾನ್ ನಾಲ್ಕನೇ ವಿಕೆಟ್ಗೆ ಅಜೇಯ 92 ರನ್ ಕಲೆ ಹಾಕಿ ತಂಡವನ್ನು ಗೆಲುವಿನ ದಡ ಸೇರಿಸಿದ್ರು. ಕೆಕೆಆರ್ ತಂಡ 18ನೇ ಓವರ್ ನಲ್ಲಿ ಮೂರು ವಿಕೆಟ್ ಕಳೆದುಕೊಂಡು 145 ರನ್ ಗಳಿಸಿತು. ಶುಬ್ಮನ್ ಗಿಲ್ 62 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ಸಹಾಯದಿಂದ ಅಜೇಯ 70 ರನ್ ಸಿಡಿಸಿದ್ರೆ, ಮೊರ್ಗಾನ್ 29 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ನೆರವಿನಿಂದ ಅಜೇಯ 42 ರನ್ ದಾಖಲಿಸಿದ್ರು. ಶುಬ್ಮನ್ ಗಿಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.