ಐಪಿಎಲ್ 2021 – ಅರ್ಜುನ್ ತೆಂಡುಲ್ಕರ್ ಗಾಯ – ಸಿಮರ್ಜೀತ್ ಸಿಂಗ್ ಮುಂಬೈ ತಂಡಕ್ಕೆ ಸೇರ್ಪಡೆ
ಮುಂಬೈ ಇಂಡಿಯನ್ಸ್ ತಂಡದ ಯುವ ಆಲ್ ರೌಂಡರ್ ಅರ್ಜುನ್ ತೆಂಡುಲ್ಕರ್ ಅಭ್ಯಾಸದ ವೇಳೆ ಗಾಯಗೊಂಡಿದ್ದಾರೆ. ಹೀಗಾಗಿ 2021ರ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವಾಗ ಅರ್ಜುನ್ ತೆಂಡುಲ್ಕರ್ ಗಾಯಗೊಂಡಿದ್ದಾರೆ. ಮುಂಬೈ ವೇಗಿ ಮಾರ್ಕೊ ಜೆನ್ಸೆನ್ ಅವರ ಯಾರ್ಕರ್ ಎಸೆತಕ್ಕೆ ಜ್ಯೂನಿಯರ್ ತೆಂಡುಲ್ಕರ್ ಗಾಯಗೊಂಡಿರುವುದಾಗಿ ಮುಂಬೈ ಇಂಡಿಯನ್ಸ್ ಟೀಮ್ ಮ್ಯಾನೇಜ್ ಮೆಂಟ್ ಹೇಳಿದೆ.
ಅರ್ಜುನ್ ತೆಂಡುಲ್ಕರ್ ಬದಲಿಗೆ ದೆಹಲಿಯ ಯುವ ವೇಗಿ ಸಿಮರ್ ಜೀತ್ ಸಿಂಗ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಸಿಮರ್ ಜೀತ್ ಸಿಂಗ್ ಅವರು ಈಗಾಗಲೇ ಕ್ವಾರಂಟೈನ್ ಅವಧಿಯನ್ನು ಮುಗಿಸಿದ್ದು, ತಂಡದೊಳಗೆ ಸೇರ್ಪಡೆಯಾಗಿದ್ದಾರೆ. ಅಲ್ಲದೆ ಅಭ್ಯಾಸದಲ್ಲೂ ನಿರತರಾಗಿದ್ದಾರೆ.
ಸಿಮರ್ ಜೀತ್ ಸಿಂಗ್ ಅವರು ಈಗಾಗಲೇ 15 ಟಿ- 20 ಪಂದ್ಯಗಳನ್ನು ಆಡಿದ್ದಾರೆ. ಕಳೆದ ಶ್ರೀಲಂಕಾ ಸರಣಿಯ ವೇಳೆ ಟೀಮ್ ಇಂಡಿಯಾದ ನೆಟ್ ಬೌಲರ್ ಆಗಿಯೂ ಕಾಣಿಸಿಕೊಂಡಿದ್ದರು.
23ರ ಹರೆಯದ ಸಿಮರ್ ಜೀತ್ ಸಿಂಗ್ ಅವರು 2018ರಲ್ಲಿ ದೆಹಲಿ ಪರ ಪ್ರಥಮ ದರ್ಜೆ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. 10 ಪ್ರಥಮ ದರ್ಜೆ ಪಂದ್ಯಗಳ್ಲಿ 37 ವಿಕೆಟ್, 19 ಲಿಸ್ಟ್ ಎ ಪಂದ್ಯಗಳಲ್ಲಿ 19 ವಿಕೆಟ್ ಹಾಗೂ 15 ಟಿ-20 ಪಂದ್ಯಗಳಲ್ಲಿ 20 ವಿಕೆಟ್ ಗಳನ್ನು ಪಡೆದುಕೊಂಡಿದ್ದಾರೆ.
ಇನ್ನು ಅರ್ಜುನ್ ತೆಂಡುಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ 20 ಲಕ್ಷ ರೂಪಾಯಿಗೆ ಖರೀದಿ ಮಾಡಿತ್ತು. ಆದ್ರೆ ಅರ್ಜುನ್ ತೆಂಡುಲ್ಕರ್ ಅವರಿಗೆ ಆಡುವ 11ರ ಬಳಗದಲ್ಲಿ ಇನ್ನೂ ಅವಕಾಶ ಸಿಕ್ಕಿರಲಿಲ್ಲ. ಇದೀಗ ಗಾಯಗೊಂಡಿರುವುದರಿಂದ ಅರ್ಜುನ್ ತೆಂಡುಲ್ಕರ್ ಅವರು ಐಪಿಎಲ್ ಗೆ ಪದಾರ್ಪಣೆ ಮಾಡಲು ಇನ್ನೊಂದು ವರ್ಷ ಕಾಯಲೇಬೇಕು.