ಐಪಿಎಲ್ 2021- ಟೂರ್ನಿ ನಡೆಯುವ ಆ ಆರು ನಗರಗಳು ಯಾವೆಲ್ಲಾ..? ಮುಗಿಯದ ಗೊಂದಲ..!
2021ರ ಐಪಿಎಲ್ ಟೂರ್ನಿ ಶುರುವಾಗುವುದಕ್ಕೆ ಇನ್ನಿರುವುದು ಕೇವಲ ಒಂದೇ ಒಂದು ತಿಂಗಳು. ಐಪಿಎಲ್ ಫ್ರಾಂಚೈಸಿಗಳು ಮಹತ್ವದ ಟೂರ್ನಿಗೆ ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ.
ಆದ್ರೆ ಬಿಸಿಸಿಐ ಮಾತ್ರ ಫುಲ್ ಟೆನ್ಷನ್ ನಲ್ಲಿದೆ. ಟೂರ್ನಿಯ ವೇಳಾಪಟ್ಟಿ, ತಾಣಗಳನ್ನು ಅಂತಿಮಗೊಳಿಸಲು ಇನ್ನಿಲ್ಲದ ಕಸರತ್ತುಗಳನ್ನು ನಡೆಸುತ್ತಿದೆ.
ಈ ನಡುವೆ, ದೆಹಲಿ, ಅಲಹಬಾದ್, ಚೆನ್ನೈ, ಬೆಂಗಳೂರು ಕೊಲ್ಕತ್ತಾ ಮತ್ತು ಮುಂಬೈ ನಲ್ಲಿ ಟೂರ್ನಿಗಳನ್ನು ನಡೆಸಲು ಶಾರ್ಟ್ ಲೀಸ್ಟ್ ಮಾಡಿಕೊಂಡಿದೆ.
ಆದ್ರೆ ಮಹಾರಾಷ್ಟ್ರದಲ್ಲಿ ಕೋವಿಡ್ ಆತಂಕ ಹೆಚ್ಚಿರುವುದರಿಂದ ಮುಂಬೈ ನಲ್ಲಿ ಪಂದ್ಯಗಳನ್ನು ನಡೆಸುವುದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಕೂಡ ಕಾಡುತ್ತಿದೆ.
ಈ ನಡುವೆ, ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್, ಐಪಿಎಲ್ ಸಿಇಒ ಹೇಮಾಂಗ್ ಅಮಿನ್ ಸೇರಿದಂತೆ ಮುಂಬೈ ಕ್ರಿಕೆಟ್ ಕ್ಲಬ್ ನ ಇಬ್ಬರು ಸದಸ್ಯರು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗಿದ್ದಾರೆ.
ಮುಂಬೈ ನಲ್ಲಿ ಪಂದ್ಯ ಆಯೋಜನೆ ಮಾಡಲು ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಶರದ್ ಪವಾರ್ ಭರವಸೆ ನೀಡಿದ್ದಾರೆ.
ಇನ್ನೊಂದೆಡೆ ಪಂಜಾಬ್ ಕಿಂಗ್ಸ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ಮತ್ತು ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಬಿಸಿಸಿಐ ನಿರ್ಧಾರದ ಬಗ್ಗೆ ಅಸಮಾಧಾಣ ವ್ಯಕ್ತಪಡಿಸಿದ್ದಾರೆ. ಪಂಜಾಬ್ ನಲ್ಲಿ ಕೋವಿಡ್ ಆತಂಕ ಕಡಿಮೆ ಇದ್ರೂ ಚಂಢಿಗಢ ಮತ್ತು ಮೋಹಾಲಿಯಲ್ಲಿ ಐಪಿಎಲ್ ಪಂದ್ಯ ನಡೆಸಲು ಬಿಸಿಸಿಐ ನಿರ್ಧಾರ ಮಾಡಿಲ್ಲ. ಹೀಗಾಗಿ ಬಿಸಿಸಿಐ ತನ್ನ ನಿರ್ಧಾರವನ್ನು ಮತ್ತೆ ಪರಿಶೀಲನೆ ನಡೆಸುವಂತೆ ಇವರಿಬ್ಬರು ಮನವಿ ಮಾಡಿಕೊಂಡಿದ್ದರು.
ಒಟ್ಟಿನಲ್ಲಿ ಈ ಬಾರಿಯ ಐಪಿಎಲ್ ಟೂರ್ನಿ ಭಾರತದಲ್ಲೇ ನಡೆಯುತ್ತಿದೆ. ಶೇ. 50 ರಷ್ಟು ಪ್ರೇಕ್ಷಕರಿಗೆ ಪಂದ್ಯ ನೋಡುವ ಅವಕಾಶವನ್ನು ಬಿಸಿಸಿಐ ಕಲ್ಪಸುತ್ತಿದೆ.