ಐಪಿಎಲ್ 2021- ಇಶಾನ್ ಕಿಶಾನ್ ಬ್ಯಾಟಿಂಗ್ ಹಿಂದಿನ ಶಕ್ತಿ ಮಹೇಲಾ ಜಯವರ್ಧನೆ…!
ಇಶಾನ್ ಕಿಶಾನ್. ಟೀಮ್ ಇಂಡಿಯಾದ ಭವಿಷ್ಯದ ಆಟಗಾರ. ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಟಗಾರ. ಸಿಕ್ಕ ಅವಕಾಶಗಳನ್ನು ಸರಿಯಾಗಿಯೇ ಬಳಸಿಕೊಳ್ಳುತ್ತಿರುವ ಇಶಾನ್ ಕಿಶಾನ್ ಅವರ ಕ್ರಿಕೆಟ್ ಪ್ರತಿಭೆಯನ್ನು ಅನಾವರಣಗೊಳಿಸಲು ಮುಂಬೈ ಇಂಡಿಯನ್ಸ್ ಕೋಚ್ ಮಹೇಲಾ ಜಯವರ್ಧನೆ ಪ್ರಮುಖ ಪಾತ್ರ ವಹಿಸಿದ್ದರು.
ಹೌದು, ಈ ವಿಚಾರವನ್ನು ಸ್ವತಃ ಮಹೇಲಾ ಜಯವರ್ಧನೆಯವರೇ ಹೇಳಿಕೊಂಡಿದ್ದಾರೆ.
2018ರಲ್ಲಿ ಇಶಾನ್ ಕಿಶಾನ್ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದರು. ಅದು ಕೂಡ 6.2 ಕೋಟಿ ರೂಪಾಯಿಗೆ. ಹೀಗಾಗಿ ಇಶಾನ್ ಕಿಶಾನ್ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿತ್ತು ಮುಂಬೈ ಇಂಡಿಯನ್ಸ್.
IPL 2021: How Mahela Jayawardene made Ishan Kishan more consistent
ಆದ್ರೆ ಇಶಾನ್ ಕಿಶಾನ್ ಅವರ ಮೇಲಿನ ನಿರೀಕ್ಷೆಗಳು ಕೆಲವೇ ದಿನಗಳಲ್ಲಿ ಹುಸಿಯಾಗಿದ್ದವು. ಯಾಕಂದ್ರೆ ಇಶಾನ್ ಕಿಶಾನ್ ತುಂಬಾನೇ ಸೋಂಬೇರಿಯಾಗಿದ್ದರು. ಯಾವಾಗಲೂ ಗೇಮ್ಸ್ ಆಟಗಳಲ್ಲಿ ನಿರತರಾಗಿದ್ದರು. ನೆಟ್ಸ್ ನಲ್ಲಿ ತಾಲೀಮ್ ನಡೆಸುತ್ತಿರುವಾಗ ಏಕಾಗ್ರತೆ ಇರಲಿಲ್ಲ. ಬೇಕಾಬಿಟ್ಟಿ ಅಭ್ಯಾಸ ನಡೆಸುತ್ತಿದ್ದರು. ಇದು ಮುಂಬೈ ಇಂಡಿಯನ್ಸ್ ತಂಡದ ಸಿಬ್ಬಂದಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು.
ನೆಟ್ ಅಭ್ಯಾಸದ ವೇಳೆ ಇಶಾನ್ ಕಿಶಾನ್ ಏನು ಮಾಡುತ್ತಿದ್ದರು ಎಂಬುದರ ಅರಿವೇ ಅವರಿಗಿರಲಿಲ್ಲ. ತಾಳ್ಮೆ, ಏಕಾಗ್ರತೆ, ಶಿಸ್ತುಗಳು ಇರಲಿಲ್ಲ. ಆತನ ಮನಸ್ಸು ಎಲ್ಲೋ ಇರುತ್ತಿತ್ತು. ಬ್ಯಾಟಿಂಗ್ ಮಾಡುವಾಗ ಫುಟ್ ವರ್ಕ್‍ಗಳ ಮೇಲೆ ಗಮನ ಹರಿಸುತ್ತಿರಲಿಲ್ಲ. ಇದನ್ನೆಲ್ಲಾ ಗಮನಿಸುತ್ತಿದ್ದ ನಾನು ಹಲವು ಬಾರಿ ಆತನನ್ನು ನೆಟ್ಸ್ ನಿಂದ ಹೊರಗಡೆ ಕಳುಹಿಸುತ್ತಿದ್ದೆ. ನೀವು ಏನು ಯೋಚನೆ ಮಾಡಿಕೊಂಡು ಅಭ್ಯಾಸ ನಡೆಸುತ್ತಿದ್ದೀರಿ. ನಿಮಗೆ ಇಷ್ಟವಿಲ್ಲ ಅಂದ್ರೆ ಹೊರಗಡೆ ನಡೀರಿ. ನಾನು ನಿಮಗೆ ನೀಡುವ ಅರ್ಧಗಂಟೆಯ ಸಮಯವನ್ನು ಬೇರೆ ಆಟಗಾರರಿಗೆ ನೀಡುತ್ತೇನೆ ಎಂದು ಜಯವರ್ಧನೆ ಇಶಾನ್ ಕಿಶಾನ್ ಅವರಿಗೆ ವಾರ್ನಿಂಗ್ ನೀಡಿರುವುದನ್ನು ಹೇಳಿಕೊಂಡಿದ್ದಾರೆ.
2018ರ ಐಪಿಎಲ್ ನಲ್ಲಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಇಶಾನ್ ಕಿಶಾನ್ ತನ್ನ ಪ್ರತಿಭೆ ಸಾಮಥ್ರ್ಯವನ್ನು ಪ್ರದರ್ಶಿಸಿದ್ರು ಎನ್ನುವ ಜಯವರ್ಧನೆ, ಆ ಪಂದ್ಯಕ್ಕೆ ಇಶಾನ್ ಕಿಶಾನ್ ನಾಲ್ಕನೇ ಕ್ರಮಾಂಕದಲ್ಲಿ ಆಡಲು ಅವಕಾಶ ನೀಡಿದ್ದೇವು. ಅದನ್ನು ಅವರು ಸರಿಯಾಗಿಯೇ ಬಳಸಿಕೊಂಡ್ರು. 21 ಎಸೆತಗಳಲ್ಲಿ 62 ರನ್ ಕೂಡ ಸಿಡಿಸಿದ್ದರು. ಅಂದು ನನಗೆ ಆತನ ಆಟದ ಬಗ್ಗೆ ನಿಖರತೆ ಸಿಕ್ಕಿತ್ತು. ಆತ ಜಾಸ್ತಿ ಯೋಚನೆ ಮಾಡುತ್ತಿದ್ರೆ ಏಕಾಗ್ರತೆ ಕಡಿಮೆ ಮಾಡಿಕೊಳ್ಳುತ್ತಾನೆ ಎಂದು. ಆತನ ಬ್ಯಾಟಿಂಗ್ ಸುಧಾರಣೆಗೆ ಮುಂಬೈ ಇಂಡಿಯನ್ಸ್ ತಂಡದ ಸಿಬ್ಬಂದಿಗಳು ಸಾಕಷ್ಟು ಶ್ರಮ ಪಟ್ಟಿದ್ದಾರೆ ಎಂಬ ವಿಷಯವನ್ನು ಜಯವರ್ಧನೆ ಹೇಳಿದ್ದಾರೆ.
ಒಟ್ಟಿನಲ್ಲಿ ಒಬ್ಬ ಕೋಚ್, ಆಟಗಾರನ ಮೇಲೆ ಯಾವ ರೀತಿ ಗಾಢವಾದ ಪರಿಣಾಮ ಬೀರುತ್ತಾನೆ ಎಂಬುದು ಇಶಾನ್ ಕಿಶಾನ್ ವಿಚಾರದಲ್ಲಿ ಗೊತ್ತಾಗುತ್ತದೆ. ಇವತ್ತು ಇಶಾನ್ ಕಿಶಾನ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡಿರಬಹುದು. ಆದ್ರೆ ಅದರ ಹಿಂದಿನ ಶಕ್ತಿ ಮುಂಬೈ ಇಂಡಿಯನ್ಸ್ ತಂಡದ ಹೆಡ್ ಕೋಚ್ ಮತ್ತು ಸಿಬ್ಬಂದಿಗಳು ಎಂಬುದು ಮಾತ್ರ ಸುಳ್ಳಲ್ಲ.