ಐಪಿಎಲ್ 2021- ವೇಳಾಪಟ್ಟಿ ಪ್ರಕಟ.. ಮೊದಲ ಪಂದ್ಯದಲ್ಲಿ ಆರ್ ಸಿಬಿ – ಮುಂಬೈ ಇಂಡಿಯನ್ಸ್ ಕಾದಾಟ
14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಏಪ್ರಿಲ್ 9ರಿಂದ ಮೇ 30ರವರೆಗೆ 2021ರ ಐಪಿಎಲ್ ಧಮಾಕಾ ನಡೆಯಲಿದೆ.
ಏಪ್ರಿಲ್ 9, ಶುಕ್ರವಾರದಂದು ನಡೆಯಲಿರುವ 14ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ.
ಇನ್ನು ಚೆನ್ನೈನಲ್ಲಿ ಉದ್ಘಾಟನಾ ಪಂದ್ಯ ನಡೆದ್ರೆ, ಫೈನಲ್ ಪಂದ್ಯ ಮೇ 30ರಂದು ಗುಜರಾತಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಏಪ್ರಿಲ್ 10ರಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ತಂಡಗಳು ಹೋರಾಟ ನಡೆಸಲಿವೆ.
ಬೆಂಗಳೂರು, ದೆಹಲಿ, ಚೆನ್ನೈ, ಅಹಮದಾಬಾದ್, ಮುಂಬೈ ಕೊಲ್ಕತ್ತಾಗಳಲ್ಲಿ ಈ ಬಾರಿಯ ಪಂದ್ಯಗಳು ಆಯೋಜನೆಗೊಳ್ಳಲಿವೆ.
ಲೀಗ್ ಹಂತದಲ್ಲಿ ಪ್ರತಿ ತಂಡಗಳು ನಾಲ್ಕು ತಾಣಗಳಲ್ಲಿ ಆಡಲಿವೆ. ಒಟ್ಟು 56 ಲೀಗ್ ಪಂದ್ಯಗಳಲ್ಲಿ ಚೆನ್ನೈ, ಮುಂಬೈ, ಕೊಲ್ಕತ್ತಾ ಮತ್ತು ಬೆಂಗಳೂರಿನಲ್ಲಿ ತಲಾ ಹತ್ತು ಪಂದ್ಯಗಳು ನಡೆಯಲಿವೆ. ಇನ್ನುಳಿದಂತೆ ದೆಹಲಿ ಮತ್ತು ಅಹಮದಾಬಾದ್ ನಲ್ಲಿ ತಲಾ ಎಂಟು ಪಂದ್ಯಗಳು ನಡೆಯಲಿವೆ.
ಈ ಬಾರಿಯ ಟೂರ್ನಿಯ ಇನ್ನೊಂದು ವಿಶೇಷತೆ ಅಂದ್ರೆ ಎಲ್ಲಾ ತಂಡಗಳು ತಟಸ್ಥ ತಾಣಗಳಲ್ಲಿ ತನ್ನ ಪಂದ್ಯಗಳನ್ನು ಆಡಲಿವೆ.
ಇನ್ನು ಲೀಗ್ ಹಂತದಲ್ಲಿ ಪ್ರತಿ ತಂಡಗಳು ಮೂರು ಬಾರಿ ಮಾತ್ರ ಬೇರೆ ತಾಣಗಳಲ್ಲಿ ಪ್ರಯಾಣ ಬೆಳೆಸಲಿವೆ. ವಿಶೇಷತೆ ಅಂದ್ರೆ ಈ ಬಾರಿಯ ಐಪಿಎಲ್ ಟೂರ್ನಿಗೆ ಮತ್ತೆ ವಿವೋ ಕಂಪೆನಿ ಪ್ರಾಯೋಜಕತ್ವ ವಹಿಸಲಿದೆ. ಜೈವಿಕ ಸುರಕ್ಷತೆಯಡಿಯಲ್ಲಿ ಪಂದ್ಯಗಳನ್ನು ಆಯೋಜನೆ ಮಾಡಲಾಗುವುದು. ಆರಂಭದಲ್ಲಿ ಪ್ರೇಕ್ಷಕರಿಗೆ ಅವಕಾಶವಿಲ್ಲ. ಆ ನಂತರ ಅವಕಾಶ ನೀಡುವುದರ ಬಗ್ಗೆ ಚಿಂತನೆ ನಡೆಸಲಾಗುವುದು.
ಇನ್ನು ಪಂದ್ಯಗಳು ಮಧ್ಯಾಹ್ನ 3.30ಕ್ಕೆ ಹಾಗೂ ರಾತ್ರಿ 7.30ಕ್ಕೆ ಆರಂಭವಾಗಲಿವೆ. ಆರು ತಂಡಗಳು ತಲಾ ಮೂರು ಮಧ್ಯಾಹ್ನದ ಪಂದ್ಯಗಳನ್ನು ಆಡಿದ್ರೆ, ಎರಡು ತಂಡಗಳು ತಲಾ ಮಧ್ಯಾಹ್ನದ ಪಂದ್ಯಗಳನ್ನು ಆಡಲಿವೆ.