ಐಪಿಎಲ್ 2021 ಭಾಗ -2 : ಸೆಪ್ಟಂಬರ್ 19ರಂದು ಶುರು.. ಅಕ್ಟೋಬರ್ 15ರಂದು ಫೈನಲ್..!
ಮುಂಬರುವ ಸೆಪ್ಟಂಬರ್ 19ರಿಂದ ಅಕ್ಟೋಬರ್ 15ರವರೆಗೆ 14ನೇ ಆವೃತಿಯ ಐಪಿಎಲ್ ಟೂರ್ನಿಯ ಮುಂದುವರಿದ ಪಂದ್ಯಗಳು ನಡೆಯಲಿವೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ.
ಸೆಪ್ಟಂಬರ್ 19ರಂದು ಯುಎಇನಲ್ಲಿ ಮುಂದುವರಿದ ಐಪಿಎಲ್ ಟೂರ್ನಿಯ ಮೊದಲ ಪಂದ್ಯ ನಡೆದ್ರೆ, ಅಕ್ಟೋಬರ್ 19ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಕುರಿತಂತೆ ಬಿಸಿಸಿಐ ಯುನೈಟೆಡ್ ಅರಬ್ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಜೊತೆ ಚರ್ಚಿಸಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಪಂದ್ಯಗಳು ಶಾರ್ಜಾ, ಅಬುಧಾಬಿ ಮತ್ತು ದುಬೈ ನಲ್ಲಿ ನಡೆಯಲಿದೆ ಎಂದು ಬಿಸಿಸಿಐ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒಟ್ಟು 25 ದಿನಗಳ ಕಾಲ ಪಂದ್ಯಗಳು ನಡೆಯಲಿದ್ದು, ಪಂದ್ಯಗಳ ವೇಳಾಪಟ್ಟಿಯನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ಬಿಸಿಸಿಐನ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.
ಇನ್ನು ಟೂರ್ನಿಯಲ್ಲಿ ವಿದೇಶಿ ಆಟಗಾರರ ಭಾಗವಹಿಸುವ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬರುತ್ತಿವೆ. ಬಿಸಿಸಿಐ ಈ ಬಗ್ಗೆ ಕೂಡ ಚಿಂತನೆ ನಡೆಸುತ್ತಿದೆ. ಈಗಾಗಲೇ ವಿದೇಶಿ ಕ್ರಿಕೆಟ್ ಮಂಡಳಿಗಳ ಜೊತೆ ಮಾತುಕತೆ ಕೂಡ ನಡೆಸಲಾಗಿದೆ. ಸದ್ಯ ತಂಡದಲ್ಲಿರುವ ಕೆಲವು ವಿದೇಶಿ ಆಟಗಾರರು ಲಭ್ಯರಿರುತ್ತಾರೆ. ಅಲಭ್ಯರಾಗುವ ವಿದೇಶಿ ಆಟಗಾರರಿಗೆ ಬದಲಿ ವ್ಯವಸ್ಥೆಯನ್ನು ಕೂಡ ಮಾಡಲಾಗುವುದು.
ಒಟ್ಟಿನಲ್ಲಿ ಬಿಸಿಸಿಐನ ದೊಡ್ಡ ತಲೆನೋವು ನಿವಾರಣೆಯಾಗಿದೆ. ಐಪಿಎಲ್ ಸ್ಥಗಿತಗೊಂಡಿರುವುದರಿಂದ ಬಿಸಿಸಿಐ ಬೊಕ್ಕಸಕ್ಕೆ ಸುಮಾರು 2500 ಕೋಟಿ ನಷ್ಟವಾಗುವ ಸಾಧ್ಯತೆ ಇತ್ತು. ಇದೀಗ ಬಿಸಿಸಿಐ ಅದನ್ನು ಸರಿದೂಗಿಸುವ ವ್ಯವಸ್ಥೆಯನ್ನು ಮಾಡಿಕೊಂಡಿದೆ.
ಇದೇ ವೇಳೆ, ಬಿಸಿಸಿಐ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಆಯೋಜನೆ ಮಾಡೋದು ದೊಡ್ಡ ಸವಾಲಿನ ಪ್ರಶ್ನೆಯಾಗಿದೆ. ಭಾರತದಲ್ಲಿ ಕೋವಿಡ್ ಪ್ರಕರಣಗಳ ಆತಂಕದಿಂದ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಯುಎಇನಲ್ಲಿ ಆಯೋಜನೆ ಮಾಡಲು ಪ್ಲಾನ್ ಕೂಡ ಮಾಡಿಕೊಂಡಿದೆ.