IPL 2022 Auction- ಕ್ರಿಕೆಟ್ ದೇವ್ರ ಅಭಯ…! ಕೊನೆ ಕ್ಷಣದಲ್ಲಿ ಅಂಬಾನಿ ಗೂಡು ಸೇರಿಕೊಂಡ ಅರ್ಜುನ್ ತೆಂಡುಲ್ಕರ್
ಕ್ರಿಕೆಟ್ ದೇವ್ರು ಸಚಿನ್ ತೆಂಡುಲ್ಕರ್ ಅವರ ಅಭಯವೋ ಏನೋ ಗೊತ್ತಿಲ್ಲ.. ಸಚಿನ್ ಮೇಲಿನ ಪ್ರೀತಿ, ಅಭಿಮಾನ, ಗೌರವವೋ ಏನೋ ಗೊತ್ತಿಲ್ಲ .. ಮುಂಬೈ ಇಂಡಿಯನ್ಸ್ ತಂಡ ಕೊನೆಯ ಕ್ಷಣದಲ್ಲಿ ಹತ್ತು ಲಕ್ಷ ರೂಪಾಯಿ ಹೆಚ್ಚು ಖರ್ಚು ಮಾಡುವಂತಾಗಿದೆ.
ಇದಕ್ಕೆ ಕಾರಣ ಅರ್ಜುನ್ ತೆಂಡುಲ್ಕರ್. ಹೌದು, ಐಪಿಎಲ್ ಹರಾಜಿನ ಕೊನೆಯ ಕ್ಷಣದಲ್ಲಿ ಅರ್ಜುನ್ ತೆಂಡುಲ್ಕರ್ ಅವರನ್ನು ಎರಡನೇ ಬಾರಿ ಮುಂಬೈ ಇಂಡಿಯನ್ಸ್ ಖರೀದಿ ಮಾಡಿದೆ.
ಹಾಗೇ ನೋಡಿದ್ರೆ ಸಚಿನ್ ತೆಂಡುಲ್ಕರ್ ಮಗ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಳ್ಳುತ್ತಾರೆ ಅನ್ನೋದು ನಿರೀಕ್ಷಿತವಾಗಿತ್ತು. ಮೂಲ ಬೆಲೆ 20 ಲಕ್ಷ ರೂಪಾಯಿಗೆ 22ರ ಹರೆಯದ ಆಲ್ ರೌಂಡರ್ ಅರ್ಜುನ್ ತೆಂಡುಲ್ಕರ್ ತಮ್ಮ ಬಳಿಯೇ ಇರುತ್ತಾರೆ ಎಂಬ ನಂಬಿಕೆ ಮುಂಬೈ ಇಂಡಿಯನ್ಸ್ ತಂಡದ್ದಾಗಿತ್ತು.
ಆದ್ರೆ ಅರ್ಜುನ್ ತೆಂಡುಲ್ಕರ್ ಗೆ ಅಚ್ಚರಿಯ ರೀತಿಯ ಡಿಮ್ಯಾಂಡ್ ಬಂತು. ಗುಜರಾತ್ ಟೈಟಾನ್ಸ್ ತಂಡ 25 ಲಕ್ಷ ರೂಪಾಯಿಗೆ ಬಿಡ್ಡಿಂಗ್ ಮಾಡಿತ್ತು. ಆಗ ಮುಂಬೈ ಇಂಡಿಯನ್ಸ್ ತಂಡ 30 ಲಕ್ಷ ರೂಪಾಯಿ ಕೊಟ್ಟು ಅರ್ಜುನ್ ತೆಂಡುಲ್ಕರ್ ಅವರನ್ನು ಖರೀದಿ ಮಾಡಿದೆ.
ಈ ಮೂಲಕ ಅರ್ಜುನ್ ತೆಂಡುಲ್ಕರ್ ಗೆ ಕಳೆದ ಬಾರಿಗಿಂತ 10 ಲಕ್ಷ ರೂಪಾಯಿ ಹೆಚ್ಚು ದುಡ್ಡು ಸಿಕ್ಕಿದೆ. ಕಳೆದ ಬಾರಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ರೂ ಅರ್ಜುನ್ ತೆಂಡುಲ್ಕರ್‍ಗೆ ಆಡುವ ಅವಕಾಶಗಳು ಸಿಗಲಿಲ್ಲ. ಜೊತೆಗೆ ಗಾಯಗೊಂಡಿದ್ದರು.
ಆದ್ರೆ ಈ ಬಾರಿ ಫಿಟ್ ಆಗಿದ್ದಾರೆ. ಸದ್ಯ ಮುಂಬೈ ರಣಜಿ ತಂಡದಲ್ಲೂ ಇದ್ದಾರೆ. ಅಷ್ಟೇ ಅಲ್ಲ, ಇಂಗ್ಲೆಂಡ್ ತಂಡದ ನೆಟ್ ಬೌಲರ್ ಆಗಿ ಅಭ್ಯಾಸ ಮಾಡಿದ್ದಾರೆ.
ಅಪ್ಪ ಸಚಿನ್ ತೆಂಡುಲ್ಕರ್ ವಿಶ್ವ ಕ್ರಿಕೆಟ್ ನ ಸಾಮ್ರಾಟನಾಗಿ ಮೆರೆದಿದ್ದು ಈಗ ಇತಿಹಾಸ. ಅದೇ ರೀತಿ ಅರ್ಜುನ್ ತೆಂಡುಲ್ಕರ್ ಕೂಡ ಕನಸು ಕಾಣುತ್ತಿದ್ದಾರೆ. ಆದ್ರೆ ಅಪ್ಪನ ಹಾಗೇ ಪ್ರತಿಭೆ ಆ ದೇವ್ರು ಕೊಟ್ಟಿಲ್ಲ. ಹಾಗಂತ ಅಪ್ಪನ ಹೆಸರಿನ ಮೇಲೆ ಕ್ರಿಕೆಟ್ ಆಡುತ್ತಿಲ್ಲ. ಕಠಿಣ ಅಭ್ಯಾಸ ಮಾಡುತ್ತಿದ್ದಾರೆ. ಆದ್ರೆ ಸಚಿನ್ ತೆಂಡುಲ್ಕರ್ ನಷ್ಟು ಅದೃಷ್ಟವಂತ ಅರ್ಜುನ್ ತೆಂಡುಲ್ಕರ್ ಅಲ್ಲ. ಸಚಿನ್ ಗೆ ಕ್ರಿಕೆಟ್ ಆಟ ಅನ್ನೋದು ದೇವ್ರು ಕೊಟ್ಟ ವರ. ಆದ್ರೆ ಅರ್ಜುನ್ ತೆಂಡುಲ್ಕರ್ ಗೆ ಕ್ರಿಕೆಟ್ ದೇವ್ರ ವರ ಅಷ್ಟೇ.