IPL 2022 ರಿಂಕು ಸಿಂಗ್ ಬಗ್ಗೆ ಬ್ರೆಂಡನ್ ಮೆಚ್ಚುಗೆ
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಯುವ ಆಟಗಾರ ರಿಂಕು ಸಿಂಗ್ ಅವರನ್ನು ಹಾಡಿ ಹೊಗಳಿದ್ದಾರೆ. ಭವಿಷ್ಯದಲ್ಲಿ ಅವರು ಪ್ರಮುಖ ಆಟಗಾರರಾಗಿ ಬೆಳೆಯುತ್ತಾರೆ. ತಂಡಕ್ಕೆ ಅಗತ್ಯವಿದ್ದಾಗ ರಿಂಕು ಸಿಂಗ್ ಉತ್ತಮವಾಗಿ ಬ್ಯಾಟ್ ಬೀಸಿ ತಂಡಕ್ಕೆ ನೆರವಾಗುತ್ತಾರೆ. ಸಿಕ್ಕ ಅವಕಾಶಗಳನ್ನು ಬಳಿಸಿಕೊಂಡು ತನ್ನನ್ನು ತಾನು ಸಾಭೀತುಪಡಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಐದು ವರ್ಷಗಳಿಂದ ಕೆಕೆಆರ್‌ನಲ್ಲಿದ್ದ ರಿಂಕು, ಐಪಿಎಲ್-2022ರಲ್ಲಿ ತಮ್ಮ ಅತ್ಯದ್ಭುತ ಪ್ರದರ್ಶನದಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರು ಏಳು ಪಂದ್ಯಗಳಲ್ಲಿ 174 ರನ್ ಗಳಿಸಿದ್ದಾರೆ. ವಿಶೇಷವಾಗಿ ತಂಡವು ಕಠಿಣ ಪರಿಸ್ಥಿತಿಯಲ್ಲಿದ್ದಾಗ ರಿಂಕು ಸಿಂಗ್ ಜವಾಬ್ದಾರಿಯುತವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಪ್ಲೇ-ಆಫ್ ರೇಸ್‌ನ ನಿರ್ಣಾಯಕ ಪಂದ್ಯದಲ್ಲಿಯೂ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಿಂಕು ಸಿಂಗ್ ಕೊನೆಯವರೆಗೂ ಹೋರಾಡಿದ ರೀತಿ ಅದ್ಭುತವಾಗಿದೆ.

ಬುಧವಾರ (ಮೇ 18) ನಡೆದ ಪಂದ್ಯದಲ್ಲಿ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ರಿಂಕು ಸಿಂಗ್ 15 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 40 ರನ್ ಗಳಿಸಿ ಗೆಲುವಿನ ಭರವಸೆ ಮೂಡಿಸಿದರು. ಆದರೆ ಎರಡು ರನ್‌ಗಳಿಂದ ಸೋತು ಕೆಕೆಆರ್ ಟೂರ್ನಿಯಿಂದ ನಿರ್ಗಮಿಸಿದ್ದರಿಂದ ಅವರ ವೀರೋಚಿತ ಹೋರಾಟ ವ್ಯರ್ಥವಾಯಿತು.
ಆದಾಗ್ಯೂ, ರಿಂಕು ಹೋರಾಟಕ್ಕೆ ಪ್ರಶಂಸೆಗಳ ಸುರಿಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಕೆಆರ್ ಮುಖ್ಯ ಕೋಚ್ ಮೆಕಲಮ್, ‘‘ಕೆಕೆಆರ್ ಫ್ರಾಂಚೈಸಿಗೆ ರಿಂಕು ಸಿಂಗ್ ಮೇಲೆ ನಂಬಿಕೆ ಇದೆ. ಮುಂಬರುವ ವರ್ಷಗಳಲ್ಲಿ ಅವರು ಪ್ರಮುಖ ಸದಸ್ಯರಾಗಿ ಬೆಳೆಯುವ ಸಾಧ್ಯತೆಯಿದೆ. ಮಿಡಲ್ ಆರ್ಡರ್ ನಲ್ಲಿ ಮಿಂಚಿ ಒಂಟಿ ಕೈಯಲ್ಲಿ ಪಂದ್ಯವನ್ನು ಗೆಲ್ಲಿಸಬಲ್ಲ ತಾಕತ್ತಿರುವ ಕೆಲವೇ ಆಟಗಾರರಲ್ಲಿ ರಿಂಕು ಸಿಂಗ್ ಕೂಡ ಒಬ್ಬರಾಗಿದ್ದಾರೆ.
ಅವರ ಆಟದ ಶೈಲಿ ಅದ್ಭುತವಾಗಿದೆ. ಐದು ವರ್ಷಗಳ ಕಾಲ ಐಪಿಎಲ್ ನಲ್ಲಿ ಇದ್ದರೂ ಬಹುಕಾಲ ಬೆಂಚಿಗೆ ಸೀಮಿತವಾಗಿದ್ದರು. ಆದರೆ ಅವಕಾಶ ಸಿಕ್ಕಾಗ ವಿಜೃಂಭಿಸಿದ್ದಾರೆ ಎಂದಿದ್ದಾರೆ ಮೆಕಲ್ಲಮ್.
ipl-2022–brendon-mccullum-praise-rinku-singh