ಐಪಿಎಲ್ 2022 – ಅಹಮದಾಬಾದ್ ಗೆ ಸೆಲೆಕ್ಟ್ ಆದ ಹಾರ್ದಿಕ್ ರಶೀದ್ ಮತ್ತು ಶುಭ್ ಮನ್
ಐಪಿಎಲ್ 2022 ಕ್ಕೆ, ಹೊಸದಾಗಿ ಸೇರ್ಪಡೆಯಾಗಿರುವ ಎರಡು ತಂಡಗಳಲ್ಲಿ ಅಹಮದಾಬಾದ್ ಫ್ರಾಂಚೈಸಿ ಮೂವರು ಆಟಗಾರರನ್ನು ಹೊಸದಾಗಿ ಸೇರ್ಪಡಿಸಿಕೊಂಡಿದೆ. ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ವರದಿ ಮಾಡಿರುವ ಪ್ರಕಾರ ಹಾರ್ದಿಕ್ ಪಾಂಡ್ಯ ಮತ್ತು ರಶೀದ್ ಖಾನ್ ಮತ್ತು ಶುಬ್ ಮನ್ ಗಿಲ್ ಹೊಸ ಪ್ರಾಂಚೈಸಿಗೆ ಸೆಲೆಕ್ಟ್ ಆಗಿದ್ದಾರೆ.
ಹಾರ್ದಿಕ್ ಪಾಂಡ್ಯ ಮತ್ತು ರಶೀದ್ ಖಾನ್ 15 ಕೋಟಿ ಹಾಗೂ ಶುಭ್‌ಮಾನ್ ಗಿಲ್ ಏಳು ಕೋಟಿ ಪಡೆಯಲಿದ್ದಾರೆ. ಪಾಂಡ್ಯ ತಂಡದ ನಾಯಕರೂ ಆಗಲಿದ್ದಾರೆ. ಜನವರಿ 22 ರ ಒಳಗಾಗಿ ಹೊಸ ಐಪಿಎಲ್ ತಂಡಗಳಾದ ಲಕ್ನೋ ಮತ್ತು ಅಹಮದಾಬಾದ್ ಮೂರು ಆಟಗಾರರನ್ನ ಉಳಿಸಿಕೊಳ್ಳಬೇಕಿದೆ.
ಆಟಗಾರರ ಜೊತೆಗೆ ಆಶಿಶ್ ನೆಹ್ರಾ ಅವರನ್ನ ತಂಡದ ಮುಖ್ಯ ಕೋಚ್ ಆಗಿ ಸೆಲೆಕ್ಟ್ ಮಾಡಲಾಗಿದೆ. ಇಂಗ್ಲೆಂಡ್‌ನ ಮಾಜಿ ಆರಂಭಿಕ ಆಟಗಾರ ವಿಕ್ರಮ್ ಸೋಲಂಕಿ ಅವರನ್ನು ತಂಡದ ನಿರ್ದೇಶಕರನ್ನಾಗಿ ಮಾಡಲಾಗಿದೆ. ಅದೇ ಸಮಯದಲ್ಲಿ, ಭಾರತದ ಮಾಜಿ ಕೋಚ್ ಗ್ಯಾರಿ ಕರ್ಸ್ಟನ್ ತಂಡದ ಮಾರ್ಗದರ್ಶಕರಾಗಿರುತ್ತಾರೆ.
ಈ ಹಿಂದೆ ಹಾರ್ದಿಕ್ ಮುಂಬೈ ಇಂಡಿಯನ್ಸ್, ರಶೀದ್ ಸನ್ ರೈಸರ್ಸ್ ಹೈದರಾಬಾದ್ ಮತ್ತು ಶುಭಮನ್ ಗಿಲ್ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿದ್ದರು.ಶುಭಮನ್ ಗಿಲ್ ಬಗ್ಗೆ ಮಾತನಾಡುವುದಾದರೆ ಅಹಮದಾಬಾದ್ ಐಪಿಎಲ್‌ನಲ್ಲಿ ಅವರ ಎರಡನೇ ತಂಡವಾಗಿದೆ. ಶುಭಮನ್ 2018 ರಿಂದ ಕೋಲ್ಕತ್ತಾದಿಂದ ಆಡುತ್ತಿದ್ದಾರೆ. ಕೋಲ್ಕತ್ತಾ ಅವರನ್ನು 1.8 ಕೋಟಿಗೆ ಖರೀದಿಸಿತು. ಇನ್ನು ರಶೀದ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ 2017 ರಲ್ಲಿ 4 ಕೋಟಿ ರೂ.ಗೆ ಖರೀದಿಸಿತು. ಇದರ ನಂತರ, 2018 ರಲ್ಲಿ ಹೈದರಾಬಾದ್ ಅವರನ್ನು ಒಂಬತ್ತು ಕೋಟಿ ರೂಪಾಯಿಗಳಿಗೆ ಉಳಿಸಿಕೊಂಡಿತ್ತು.
2015ರಲ್ಲಿ ಮುಂಬೈ ತಂಡ ಪಾಂಡ್ಯ ಅವರನ್ನು 10 ಲಕ್ಷಕ್ಕೆ ತಂಡಕ್ಕೆ ಸೇರಿಸಿತ್ತು. ಪಾಂಡ್ಯ ಗುಜರಾತ್ ಮೂಲದವರಾಗಿದ್ದು, ಸ್ಥಳೀಯ ಅಭಿಮಾನಿಗಳಲ್ಲಿ ಅವರ ಜನಪ್ರಿಯತೆಯನ್ನು ಲಾಭ ಮಾಡಿಕೊಳ್ಳಲು ಫ್ರಾಂಚೈಸಿ ಅವರನ್ನು ನಾಯಕನನ್ನಾಗಿ ಮಾಡಿದೆ ಎಂದು ತಜ್ಞರು ನಂಬಿದ್ದಾರೆ. ಪಾಂಡ್ಯ ಬೌಲಿಂಗ್ ಮಾಡದಿದ್ದರೂ ಅದು ತಂಡಕ್ಕೆ ಲಾಭದಾಯಕ ಒಪ್ಪಂದವಾಗಿದೆ ಎಂದು ಫ್ರಾಂಚೈಸಿ ಭಾವಿಸಿದೆ.
ಈ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿವೆ. ಈ ಬಾರಿ ಐಪಿಎಲ್‌ನಲ್ಲಿ ಮೆಗಾ ಹರಾಜು ನಡೆಯುತ್ತಿದ್ದು. ಫೆಬ್ರವರಿ 7 ಮತ್ತು 8 ರಂದು ಚೆನ್ನೈನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.