VIRAT ಕೊಹ್ಲಿ ವಿಶ್ರಾಂತಿ ಪಡೆಯಬೇಕಾ..?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಫಾರ್ಮ್ ಅವರ ಬಗ್ಗೆ ಪ್ರಶ್ನೆಗಳು ಎದ್ದಿವೆ. ಪ್ರಸಕ್ತ ಐಪಿಎಲ್ ಸೀಸನ್ ನಲ್ಲಿ ವಿರಾಟ್ ಕೊಹ್ಲಿ ಲಯದಲ್ಲಿ ಇಲ್ಲದೇ ಇರುವುದು ತಂಡಕ್ಕೆ ತಲೆ ನೋವಾಗಿದೆ.
ಡಕೌಟ್ ನಿಂದ ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿಯುತ್ತಿದ್ದರೆ ಎದುರಾಳಿ ಆಟಗಾರರಿಗೆ ನಡುಕ ಹುಟ್ಟಿಸುತ್ತಿದ್ದ ಕೊಹ್ಲಿ, ಈಗ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದಾರೆ. ಕೆಟ್ಟ ಹೊಡೆತಗಳಿಗೆ ಮುಂದಾಗಿ ಅವರು ತಮ್ಮ ವಿಕೆಟ್ ಗಳನ್ನು ಸುಲಭವಾಗಿ ನೀಡುತ್ತಿದ್ದಾರೆ. ಪ್ರಸಕ್ತ ಐಪಿಎಲ್ ನಲ್ಲಿ ಕೊಹ್ಲಿ ಅಬ್ಬರಿಸದೇ ಇರುವುದು ಆರ್‌ಸಿಬಿ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ರನ್ ಮಷಿನ್ ಎಂದೇ ಖ್ಯಾತ ಪಡೆದಿದ್ದ ಕೊಹ್ಲಿ, ರನ್ ದಾಹಕ್ಕೆ ಬ್ರೇಕ್ ಬಿದ್ದಂತೆ ಆಗಿದೆ. ಹಾಗಿದ್ದರೆ ಕೊಹ್ಲಿ ವಿಶ್ರಾಂತಿ ಪಡೆಯಬೇಕಾ ಎಂಬ ಪ್ರಶ್ನೆಗಳು ಎದ್ದಿವೆ.
15ನೇ ಆವೃತ್ತಿಯ ಐಪಿಎಲ್ ನಲ್ಲಿ ವಿರಾಟ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ನಿರಾಸೆ ಅನುಭವಿಸಿದ್ದರು. ಹೀಗಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿಗೆ ಭಡ್ತಿ ನೀಡಿ ಇನ್ನಿಂಗ್ಸ್ ಆರಂಭಿಸಲು ಅವಕಾಶ ನೀಡಲಾಯ್ತು. ಆದ್ರೆ ಆಡುವ ಕ್ರಮಾಂಕ ಬದಲಾದ್ರೂ ವಿರಾಟ್ ನಸೀಬು ಬದಲಾಗಲಿಲ್ಲ. ರಾಜಸ್ಥಾನ್ ನೀಡಿದ ಸುಲಭ ಗುರಿಯನ್ನ ಬೆನ್ನತ್ತಿದ್ದ ತಂಡಕ್ಕೆ ಉತ್ತಮ ಆರಂಭ ನೀಡಬೇಕಿದ್ದ ವಿರಾಟ್, ಕೇವಲ 9 ರನ್ ಗಳಿಗೆ ಪ್ರಸಿದ್ಧ ಕೃಷ್ಣಾಗೆ ವಿಕೆಟ್ ನೀಡಿ ಪೆವಿಲಿಯನ್ ಸೇರಿಕೊಂಡರು. ಇದು ತಂಡದ ಮೇಲೆ ಪರಿಣಾಮ ಬೀರಿದ್ದು ಅಲ್ಲದೇ ಸೋಲಿಗೂ ಪ್ರಮುಖ ಕಾರಣವಾಗಿದೆ.
ಅಂದಹಾಗೆ ಈ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಮೊದಲು ಮೂರನೇ ಕ್ರಮಾಂಕದಲ್ಲಿ 8 ಪಂದ್ಯಗಳನ್ನಾಡಿದ್ದಾರೆ. ಈ ಪೈಕಿ 17ರ ಸರಾಸರಿಯಲ್ಲಿ 119 ರನ್ ಕಲೆ ಹಾಕಿದ್ದಾರೆ. ಅಲ್ಲದೆ ಒಂದೇ ಪಂದ್ಯದಲ್ಲಿ 48 ರನ್ ಬಾರಿಸಿ ಮಿಂಚಿದ್ದಾರೆ. ಇವರ ಪ್ರಸಕ್ತ ಸಾಲಿನ ಸ್ಟ್ರೈಕ್ ರೇಟ್ ಸಹ 122.68 ಆಗಿದೆ. ಬೌಂಡರಿ ಸಿಕ್ಸರ್ ಗಳ ಚಿತ್ತಾರ ಬಿಡಿಸುತ್ತಿದ್ದ ಕೊಹ್ಲಿ ಈ ಬಾರಿ ಕೇವಲ 9 ಬೌಂಡರಿ, 2 ಸಿಕ್ಸರ್ ಬಾರಿಸಿದ್ದಾರೆ.
ಈ ಅಂಕಿ ಅಂಶಗಳನ್ನ ಗಮನಿಸಿದ್ರೆ ವಿರಾಟ್ ಕೊಹ್ಲಿ ಮೊದಲಿನ ಚಾರ್ಮ್ ನಲ್ಲಿಲ್ಲ ಅನ್ನೋದು ಸ್ಪಷ್ಟವಾಗುತ್ತೆ. ಹೀಗೆ ವಿರಾಟ್ ಕೊಹ್ಲಿ ಪದೇ ಪದೇ ವಿಫಲವಾಗುತ್ತಿರುವುದು ಡ್ರೆಸ್ಸಿಂಗ್ ರೂಮ್ ನ ವಾತಾವರಣವನ್ನು ಕೆಡಿಸುತ್ತಿದೆ. ಯಾಕಂದರೇ ವಿರಾಟ್ ಆರ್ ಸಿಬಿಯ ಹಿರಿಯ ಆಟಗಾರರಾಗಿ ಹೊಸ ಹಾಗೂ ಯುವ ಆಟಗಾರರಿಗೆ ಮಾರ್ಗದರ್ಶನ ನೀಡಬೇಕಾಗಿತ್ತು. ಆದ್ರೆ ಸ್ವತಃ ವಿರಾಟ್ ಕೊಹ್ಲಿವೇ ಒತ್ತಡಕ್ಕೆ ಸಿಲುಕಿದ್ದು ತಂಡದಲ್ಲಿ ತಮ್ಮ ಸ್ಥಾನ ಅಲುಗಾಡುತ್ತಿದೆ. ಹೀಗಾಗಿ ಬ್ಯಾಟಿಂಗ್ ನತ್ತ ಗಮನ ಹರಿಸಲು ವಿರಾಟ್ ಕೊಹ್ಲಿ ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಮುಖ್ಯವಾಗಿ ಇಂಗ್ಲೆಂಡ್ ನ ಮಾಜಿ ಕ್ರಿಕೆಟ್ ಆಟಗಾರ ಕೆವಿನ್ ಪೀಟರ್ ಸನ್ ಹೇಳಿದಂತೆ ವಿರಾಟ್ ಕೊಹ್ಲಿ ಈ ಮೊದಲಿನಂತೆ ಇಲ್ಲ. ಅವರು ಯಾವಾಗಲೂ ತುಂಬಾ ಗಂಭೀರವಾಗಿರುತ್ತಾರೆ. ಹಾಯ್ ಇಲ್ಲ. ನಗು ಇಲ್ಲ.. ಸ್ವತಃ ಅವರಿಗೆ ಅವರೇ ಬೌಂಡರಿಗಳನ್ನ ಹಾಕಿಕೊಂಡಿದ್ದಾರಂತೆ. ಹೀಗಾಗಿ ವಿರಾಟ್ ಕೊಹ್ಲಿ ಸ್ವಲ್ಪ ಕಾಲ ರೆಸ್ಟ್ ಪಡೆಯಬೇಕು ಎಂದು ಎಲ್ಲಾ ಹಿರಿಯ ಕ್ರಿಕೆಟಿಗರು ವಾದಿಸುತ್ತಿದ್ದಾರೆ. IPL 2022 RCB VIRAT Kohli needs to rest