IPL 2023 MI vs RCB: ಇಂದು ಮುಂಬಯಿ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ತಂಡವು ಭರ್ಜರಿ ರನ್ ಕಲೆ ಹಾಕಿತು. ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ವಿಶೇಷ ದಾಖಲೆ ಬರೆದಿದ್ದಾರೆ.
ಟಾಸ್ ಗೆದ್ದಿದ್ದ ಮುಂಬಯಿ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಇನಿಂಗ್ಸ್ ಆರಂಭಿಸಿದ ಆರ್ಸಿಬಿ ಉತ್ತಮ ಆರಂಭ ಪಡೆದಿರಲಿಲ್ಲ. ಮೊದಲ ಓವರ್ ನಲ್ಲಿಯೇ 1 ರನ್ಗಳಿಸಿ ವಿರಾಟ್ ಕೊಹ್ಲಿ ಔಟ್ ಆದರು. ಅನೂಜ್ ರಾವತ್ (6) ಕೂಡ ಬೇಗ ಔಟ್ ಆದರು.
ಈ ಹಂತದಲ್ಲಿ ಜೊತೆಯಾದ ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಅತ್ಯುತ್ತಮ ಜೊತೆಯಾಟ ಪ್ರದರ್ಶಿಸಿದರು. 3ನೇ ಓವರ್ನಿಂದ ಸಿಡಿಲಬ್ಬರದ ಆರಂಭಿಸಿದರು. ಮ್ಯಾಕ್ಸ್ವೆಲ್ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಫಾಫ್ ಡುಪ್ಲೆಸಿಸ್ 30 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿದರು. ಹೀಗಾಗಿ 10 ಓವರ್ ಗಳಿಗೆ ಆರ್ಸಿಬಿ ತಂಡದ ಮೊತ್ತ 100ರ ಗಡಿ ದಾಟಿತು.
ನಂತರ ಗ್ಲೆನ್ ಮ್ಯಾಕ್ಸ್ವೆಲ್ 33 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 8 ಫೋರ್ನೊಂದಿಗೆ 68 ರನ್ ಗಳಿಸಿದರು. ಒಟ್ಟಾರೆ ಮ್ಯಾಕ್ಸ್ವೆಲ್-ಫಾಫ್ ಜೋಡಿಯು 120 ರನ್ಗಳ ಜೊತೆಯಾಟವಾಡಿದ್ದರು. ಇದರ ಮೂಲಕ ಐಪಿಎಲ್ನಲ್ಲಿ ಅತ್ಯಧಿಕ ಬಾರಿ ಶತಕದ ಜೊತೆಯಾಟವಾಡಿದ ವಿಶೇಷ ದಾಖಲೆಯೊಂದು ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಫಾಫ್ ಡುಪ್ಲೆಸಿಸ್ ಬರೆದಿದ್ದಾರೆ.
ಆರ್ಸಿಬಿ ಪರ ಒಂದೇ ಸೀಸನ್ನಲ್ಲಿ ಅತೀ ಹೆಚ್ಚು ಬಾರಿ ಶತಕದ ಜೊತೆಯಾಟವಾಡಿದ 2ನೇ ಜೋಡಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಆರ್ಸಿಬಿ ಪರ ಒಂದೇ ಸೀಸನ್ನಲ್ಲಿ ಅತೀ ಹೆಚ್ಚು ಬಾರಿ ಶತಕದ ಜೊತೆಯಾಟವಾಡಿದ ದಾಖಲೆ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಹೆಸರಿನಲ್ಲಿದೆ. 2016 ರಲ್ಲಿ ಕಿಂಗ್ ಕೊಹ್ಲಿ ಹಾಗೂ ಎಬಿಡಿ ಒಟ್ಟು 5 ಬಾರಿ ಶತಕದ ಜೊತೆಯಾಟವಾಡಿದ್ದರು. ಪ್ರಸ್ತುತ ಸರಣಿಯಲ್ಲಿ ಈಗಾಗಲೇ ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಒಟ್ಟು 4 ಬಾರಿ ಶತಕದ ಜೊತೆಯಾಟವಾಡಿದ್ದಾರೆ.
ಲೀಗ್ ಹಂತದಲ್ಲಿ 3 ಪಂದ್ಯಗಳು ಬಾಕಿಯಿದ್ದು, ಈ ಪಂದ್ಯಗಳಲ್ಲಿ ಫಾಫ್ ಡುಪ್ಲೆಸಿಸ್-ಗ್ಲೆನ್ ಮ್ಯಾಕ್ಸ್ವೆಲ್ ಶತಕದ ಜೊತೆಯಾಟವಾಡಿದರೆ ವಿರಾಟ್ ಕೊಹ್ಲಿ ಹಾಗೂ ಎಬಿಡಿ ಹೆಸರಿನಲ್ಲಿರುವ ದಾಖಲೆ ಮುರಿಯಬಹುದು.








