ಪ್ಲೇ ಆಫ್ ಗೇರಲು ಮುಂದಿನ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂದು ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಸನ್ರೈಸರ್ಸ್ ಈಗಾಗಲೆ ಮುಂದಿನ ಹಂತಕ್ಕೆ ತೇರ್ಗಡೆಯಾಗುವ ಅವಕಾಶವನ್ನು ಕಳಕೊಂಡಿದೆಯಾದರೂ ಆರ್ಸಿಬಿಯ ಅವಕಾಶವನ್ನು ಮೊಟಕುಗೊಳಿಸುವ ಅವಕಾಶವನ್ನಂತೂ ಪಡೆದಿದೆ.
ಆರ್ಸಿಬಿ ಹಲವಾರು ಕೊರತೆಗಳೊಂದಿಗೇ ಆಡುತ್ತಿದೆ. ಮುಖ್ಯವಾಗಿ ಆರ್ಸಿಬಿಯ ಬ್ಯಾಟಿಂಗ್ ವಿಭಾಗವು ಹಲವಾರು ಲೋಪಗಳನ್ನು ಹೊಂದಿದೆ. ವಿರಾಟ್ ಕೊಹ್ಲಿ ಫಾಫ್ ಡುಪ್ಲೆಸಿಸ್ ಮತ್ತು ಮ್ಯಾಕ್ಸ್ವೆಲ್ ಚೆನ್ನಾಗಿ ಆಡಿದರೆ ಆರ್ಸಿಬಿ ಗೆಲ್ಲುತ್ತದೆ, ಇವರು ವಿಫಲರಾದರೆ ತಂಡವು ಸೋಲು ಕಾಣುತ್ತದೆ ಎಂಬಂತಹ ಪರಿಸ್ಥಿತಿಯಿದೆ. ಮಧ್ಯಮ ಸರದಿ ಮತ್ತು ಕೆಳಸರದಿಯಲ್ಲಿ ಯಾವನೇ ಆಟಗಾರ ಗಮನಾರ್ಹ ನಿರ್ವಹಣೆಯನ್ನು ಈವರೆಗೆ ನೀಡಿಲ್ಲ. ಬೇರೆ ತಂಡಗಳಲ್ಲಿ ಇನ್ನಿಂಗ್ಸಿನ ಕೊನೆಯ ಹಂತದಲ್ಲಿ ಕೆಲವು ಆಟಗಾರರು ರನ್ ಗತಿ ಹೆಚ್ಚಿಸುವ ಆಟ ಪ್ರದರ್ಶಿಸುವುದಿದೆ. ಆದರೆ ಆರ್ಸಿಬಿಯಲ್ಲಿ ಅಂತಹ ಪ್ರಸಂಗ ಕಾಣುತ್ತಿಲ್ಲ. ಕೆಳಸರದಿಯಲ್ಲಿ ದೊಡ್ಡ ಹೊಡೆತಗಳ ಆಟಗಾರರಿಗೆ ಕೊರತೆಯಿದೆ ಎಂಬಂತೆ ಕಂಡುಬರುತ್ತದೆ.
ಅದೃಷ್ಟವಶಾತ್ ಕೊಹ್ಲಿ, ಮ್ಯಾಕ್ಸ್ವೆಲ್ ಮತ್ತು ಡುಪ್ಲೆಸಿ ಉತ್ತಮ ಫಾರ್ಮ್ನಲ್ಲಿ ಇರುವುದು ತಂಡಕ್ಕೆ ನಿರಾಳತೆ ತರುವ ಅಂಶ. ಇಂದಿನ ಪಂದ್ಯದಲ್ಲೂ ಅವರಿಂದ ಉತ್ತಮ ನಿರ್ವಹಣೆಯನ್ನು ನಿರೀಕ್ಷಿಸಲಾಗುತ್ತಿದೆ. ಡುಪ್ಲೆಸಿ ಈಗಾಗಲೆ 12 ಪಂದ್ಯಗಳಿಂದ 631 ರನ್ ಗಳಿಸಿ ಆರೆಂಜ್ ಕ್ಯಾಪ್ ಹೊಂದಿದ್ದಾರೆ. ಮ್ಯಾಕ್ಸ್ವೆಲ್ ಕೂಡಾ 5 ಅರ್ಧ ಶತಕಗಳನ್ನು ದಾಖಲಿಸಿದ್ದಾರೆ.
ಕೊಹ್ಲಿ ಆರ್ಸಿಬಿ ಪರ ರನ್ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರು 438 ರನ್ ಗಳಿಸಿದ್ದಾರೆ. ಆದರೆ ಕಳೆದೆರಡು ಪಂದ್ಯಗಳಲ್ಲಿ ಕೊಹ್ಲಿ ಉತ್ತಮ ರನ್ ಗಳಿಸಲು ವಿಫಲರಾಗಿದ್ದಾರೆ. ಅದನ್ನೀಗ ಅವರು ಇಂದಿನ ಪಂದ್ಯದಲ್ಲಿ ಸರಿಪಡಿಸಿಕೊಳ್ಳಬೇಕಾಗಿದೆ. ಇನ್ನುಳಿದ ಎರಡು ಪಂದ್ಯಗಳಲ್ಲಾದರೂ ಆರ್ಸಿಬಿಯ ಮಧ್ಯಮ ಮತ್ತು ಕೆಳಸರದಿಯ ಬ್ಯಾಟರ್ಗಳು ತಮ್ಮ ನಿರ್ವಹಣೆಯನ್ನು ಸುಧಾರಿಸಿಕೊಳ್ಳಲೇಬೇಕಾದ ಅನಿವಾರ್ಯತೆಯಿದೆ.
ಆರ್ಸಿಬಿಯ ಗೆಲುವಿನಲ್ಲಿ ಬೌಲರುಗಳ ಪಾತ್ರ ದೊಡ್ಡದು. ರಾಜಸ್ಥಾನವನ್ನು 59 ರನ್ಗಳಿಗೆ ಆಲೌಟ್ ಮಾಡಿ ದೊಡ್ಡ ಅಂತರದಲ್ಲಿ ಸೋಲಿಸಲು ನೆರವಾಗುವ ಮೂಲಕ ತಂಡದ ರನ್ರೇಟ್ ಹೆಚ್ಚಿಸುವಲ್ಲೂ ಅವರು ನೆರವಾಗಿದ್ದಾರೆ. ಸಿರಾಜ್, ಪರ್ನೆಲ್ ಮತ್ತು ಬ್ರೇಸ್ವೆಲ್ ಇಂದಿನ ಪಂದ್ಯದಲ್ಲೂ ಅದೇ ಬಗೆಯ ನಿರ್ವಹಣೆ ನೀಡುವ ಆಶಾವಾದ ತಂಡದ್ದಾಗಿದೆ.
ಈಗಾಗಲೆ ಪ್ಲೇ ಆಫ್ ಅವಕಾಶವನ್ನು ಕಳಕೊಂಡಿರುವ ಸನ್ರೈಸರ್ಸ್ ತನ್ನ ಗೌರವ ಕಾಪಾಡಿಕೊಳ್ಳುವ ಯತ್ನವಾಗಿ ಇಂದಿನ ಪಂದ್ಯ ಜಯಿಸಲು ಯತ್ನಿಸುವುದು ಖಚಿತ. ಉತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್ ಬಲವನ್ನು ಹೊಂದಿದ್ದೂ ನಿರಾಶಾಜನಕ ನಿರ್ವಹಣೆ ನೀಡಿರುವ ತಂಡವಿದು. ಆದರೆ ಕೊನೆಯ ಹಂತದಲ್ಲಿ ತನ್ನ ಸಾಮರ್ಥ್ಯ ಪ್ರದರ್ಶನಕ್ಕೆ ಸರ್ವಪ್ರಯತ್ನ ಮಾಡುವ ಸಾಧ್ಯತೆಗಳಿವೆ. ಹಾಗಾಗಿ ಈ ಪಂದ್ಯವನ್ನು ಆರ್ಸಿಬಿ ನಿರ್ಲಕ್ಷಿಸುವ ಹಾಗಿಲ್ಲ ಎಂಬುದು ಖಚಿತ.