ಐಪಿಎಲ್ ನೇರ ಪ್ರಸಾರ ಹಕ್ಕು ಮಾರಾಟ – ಬಿಸಿಸಿಐ ಬೊಕ್ಕಸ ತುಂಬುತ್ತೆ… ಆದ್ರೆ ಜನ ಸಾಮಾನ್ಯರ ಜೇಬಿಗೆ ಕತ್ತರಿ..!
ಸುಮಾರು 40 ವರ್ಷಗಳ ಹಿಂದೆ ಭಾರತೀಯ ಕ್ರಿಕೆಟಿಗರಿಗೆ ವೇತನ, ಭತ್ಯೆ ನೀಡಲು ಕೂಡ ಬಿಸಿಸಿಐನ ಬಳಿ ದುಡ್ಡು ಇರಲಿಲ್ಲ. ಅಷ್ಟೇ ಯಾಕೆ, 1983ರಲ್ಲಿ ವಿಶ್ವಕಪ್ ಗೆದ್ದಾಗ ಕಪಿಲ್ ಬಳಗಕ್ಕೆ ಸನ್ಮಾನ ಮಾಡಲು ಮತ್ತು ಗೌರವ ಧನ ನೀಡಲು ಲತಾ ಮಂಗೇಶ್ಕರ್ ಅವರು ಸಂಗೀತ ಕಚೇರಿ ನಡೆಸಬೇಕಾಯ್ತು. ಅಷ್ಟರ ಮಟ್ಟಿಗೆ ಬಿಸಿಸಿಐ ದುಡ್ಡಿಗಾಗಿ ಪರದಾಟ ನಡೆಸಬೇಕಾಗಿತ್ತು.
ಆದ್ರೆ ಜಗನ್ ಮೋಹನ್ ದಾಲ್ಮಿಯಾ ಬಿಸಿಸಿಐ ಕಾರ್ಯದರ್ಶಿಯಾಗಿ ನೇಮಕಗೊಂಡ ನಂತರ ಬಿಸಿಸಿಐನ ಬೊಕ್ಕಸಕ್ಕೆ ಹಣದ ಹೊಳೆಯೇ ಹರಿದುಬಂತು. ನೋಡ ನೋಡುತ್ತಲೇ ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮವಾಗಿ ಬೆಳೆದುನಿಂತಿತ್ತು. ಸಚಿನ್ ತೆಂಡುಲ್ಕರ್ ಎಂಬ ಮಾಂತ್ರಿಕ ವಿಶ್ವ ಕ್ರಿಕೆಟ್ ಅನ್ನು ಭಾರತದತ್ತ ತಿರುಗಿನೋಡುವಂತೆ ಮಾಡಿದ್ದರು. ಮೈದಾನದೊಳಗೆ ಪ್ರೇಕ್ಷಕರನ್ನು ಕೈ ಬೀಸಿ ಕರೆಯುವಂತೆ ಮಾಡಿದ್ದ ಎವರ್ ಗ್ರೀನ್ ಆಟಗಾರ. ಅಷ್ಟೇ ಅಲ್ಲ, ಜಾಹಿರಾತು ಕಂಪೆನಿಗಳನ್ನು ಕ್ರಿಕೆಟಿಗರತ್ತ ಸೂಜಿಗಲ್ಲಿನಂತೆ ಆಕರ್ಷಿಸುವಂತೆ ಮಾಡಿದ್ದರು. ಸಚಿನ್ ಜೊತೆಗೆ ಗಂಗೂಲಿ, ರಾಹುಲ್, ಧೋನಿ, ವಿರಾಟ್ ಕೊಡುಗೆಯೂ ಸೇರಿಕೊಂಡಿದೆ. ಇದಕ್ಕೂ ಮುನ್ನ ಅಂದ್ರೆ 80ರ ದಶಕದಲ್ಲಿ ಕಪಿಲ್ ದೇವ್ ಮತ್ತು ಸುನೀಲ್ ಗವಾಸ್ಕರ್ ನಂತಹ ಆಟಗಾರರು ಜಾಹಿರಾತುಕಂಪೆನಿಗಳ ಕಣ್ಮನಿಗಳಾಗಿದ್ದರು.
ನಂತರ 2007ರಲ್ಲಿ ಆರಂಭವಾಗ ಐಪಿಎಲ್ ಬಿಸಿಸಿಐನ ಬೊಕ್ಕಸವನ್ನು ತುಂಬಿತುಳುಕುವಂತೆ ಮಾಡಿತ್ತು. ಐಪಿಎಲ್ ಅಂದ್ರೆ ಬಿಸಿಸಿಐ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ. ಅಷ್ಟರ ಮಟ್ಟಿಗೆ ಐಪಿಎಲ್ ನಲ್ಲಿ ಹಣದ ಹೊಳೆಯೇ ಹರಿದು ಬರುತ್ತಿದೆ. ಕಳೆದ 15 ವರ್ಷಗಳಲ್ಲಿ ಐಪಿಎಲ್ ವಿಶ್ವ ಕ್ರೀಡಾ ರಂಗದ ಉದ್ಯಮವಾಗಿ ಬೆಳೆಯುತ್ತೆ ಅಂತ ಯಾರು ಕೂಡ ಅಂದುಕೊಂಡಿರಲಿಲ್ಲ.
ಇವತ್ತು ಬಿಸಿಸಿಐ ಕೋಟಿ ಕೋಟಿ ಲೆಕ್ಕಚಾರದಲ್ಲಿ ವ್ಯವಹಾರ ನಡೆಸುತ್ತದೆ. ಸ್ವತಂತ್ರ್ಯ ಸಂಸ್ಥೆಯಾಗಿರುವ ಬಿಸಿಸಿಐನಲ್ಲಿ ಭ್ರಷ್ಟಚಾರ ನಡೆದಿಲ್ಲ ಅಂತ ಹೇಳುತ್ತಿಲ್ಲ. ಆದ್ರೂ ಅದನ್ನೆಲ್ಲಾ ಮೆಟ್ಟಿ ನಿಂತು ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ. ಬಿಸಿಸಿಐ ಪದಾಧಿಕಾರಿಗಳ ದೂರ ದೃಷ್ಟಿ ಮತ್ತು ಬದ್ದತೆಯಿಂದಾಗಿಯೇ ಇಂದು ವಿಶ್ವ ಕ್ರಿಕೆಟ್ ನ ದೊಡ್ಡಣ್ಣನಾಗಿ ಬಿಸಿಸಿಐ ಬೆಳಗುತ್ತಿದೆ.
ಇದೀಗ 2023ರಿಂದ 27ರವರೆಗಿನ ಐಪಿಎಲ್ ನ ಮಾಧ್ಯಮ ಹಕ್ಕು 48,390 ಕೋಟಿ ರೂಪಾಯಿಗೆ ಮಾರಾಟವಾಗಿದೆ.
ಅಂದ್ರೆ ನಾಲ್ಕು ವರ್ಷಗಳ ಐಪಿಎಲ್ ಟೂರ್ನಿಗಳಲ್ಲಿ ಒಟ್ಟು 410 ಪಂದ್ಯಗಳು ನಡೆಯಲಿವೆ. ಇಲ್ಲಿ ಪ್ರತಿ ಪಂದ್ಯಕ್ಕೆ ಬಿಸಿಸಿಐ ಪಡೆಯುವ ಹಣ ಬರೋಬ್ಬರಿ 118 ಕೋಟಿ ರೂಪಾಯಿ. ಇನ್ನು ಪ್ರತಿ ಓವರ್ ಗೆ ದಕ್ಕುವ ಹಣ 2.95 ಕೋಟಿ ರೂಪಾಯಿ. ಹಾಗೇ ಪ್ರತಿ ಎಸೆತಕ್ಕೆ ಬಿಸಿಸಿಐಗೆ ಸಿಗುವಂತಹ ಹಣ 49 ಲಕ್ಷ ರೂಪಾಯಿ.
ಅಂದ ಮೇಲೆ ಐಪಿಎಲ್ ನಲ್ಲಿ ಪ್ರತಿ ಆಟಗಾರರು ಕೋಟಿ ಕೋಟಿ ಬೆಲೆಗೆ ಹರಾಜಾಗುವುದರಲ್ಲಿ ಅಚ್ಚರಿ ಏನಿಲ್ಲ. ಲಕ್ಷ, ಕೋಟಿ ಲೆಕ್ಕದಲ್ಲಿ ನಡೆಯುವ ಐಪಿಎಲ್ ಟೂರ್ನಿಯಲ್ಲಿ ಕ್ರಿಕೆಟಿಗರು ಕೂಡ ದುಬಾರಿ ಬೆಲೆಗೆ ಮಾರಾಟವಾಗುವುದರಲ್ಲಿ ವಿಶೇಷತೆ ಏನು ಇಲ್ಲ.
ಆದ್ರೆ ನೆನಪಿಡಿ, ನೇರ ಪ್ರಸಾರದ ಹಕ್ಕಿನಿಂದ ಬಿಸಿಸಿಐನ ಬೊಕ್ಕಸ ತುಂಬುತ್ತೆ. ಆದ್ರೆ ನೇರ ಪ್ರಸಾರದ ಹಕ್ಕನ್ನು ಪಡೆದ ಸಂಸ್ಥೆ ಈ ಹಣವನ್ನು ಯಾವ ರೀತಿ ಸರಿದೂಗಿಸುತ್ತೆ ಅನ್ನೋದು ಕೂಡ ಮುಖ್ಯವಾಗಿರುತ್ತದೆ. ಮುಖ್ಯವಾಗಿ ಜಾಹಿರಾತಿನ ದರ ದುಪ್ಪಟ್ಟು ಆಗುವುದರಲ್ಲಿ ಅನುಮಾನವೇ ಇಲ್ಲ. ಕಾರ್ಪೋರೇಟ್ ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ದುಬಾರಿ ಹಣ ನೀಡಿ ಜಾಹಿರಾತು ನೀಡುತ್ತವೆ. ಇದರಿಂದ ಗ್ರಾಹಕರ ಜೇಬಿಗೂ ಕತ್ತರಿ ಬೀಳುವ ಸಾಧ್ಯತೆಗಳಿವೆ.
ಒಟ್ಟಿನಲ್ಲಿ ಕ್ರಿಕೆಟ್ ಭಾರತದಲ್ಲಿ ಹಣದ ಹೊಳೆಯನ್ನೇ ಹರಿಸುತ್ತಿದೆ. ಇಲ್ಲಿ ಬಿಸಿಸಿಐಗೆ ನಷ್ಟವಿಲ್ಲ. ನೇರ ಪ್ರಸಾರದ ಹಕ್ಕನ್ನು ಪಡೆದ ಸಂಸ್ಥೆಗೂ ತೊಂದರೆ ಇಲ್ಲ. ಜಾಹಿರಾತು ಕಂಪೆನಿಗಳಿಗೂ ಸಮಸ್ಯೆ ಇಲ್ಲ. ಸಮಸ್ಯೆ ಇರೋದು ಕ್ರಿಕೆಟ್ ಅಭಿಮಾನಿಗಳಿಗೆ ಮತ್ತು ಜನ ಸಾಮಾನ್ಯರಿಗೆ ಎಂಬುದನ್ನು ಮರೆಯುವಂತಿಲ್ಲ.