ಆಗಸ್ಟ್ 2ರಂದು ಐಪಿಎಲ್ ಆಡಳಿತ ಸಭೆ…!
ಯುಎಇ ನಲ್ಲಿ 13ನೇ ಐಪಿಎಲ್ ಟೂರ್ನಿ ನಡೆಯುವುದು ಬಹುತೇಕ ಪಕ್ಕಾ. ಭಾರತ ಸರ್ಕಾರದ ಅನುಮತಿಯೊಂದು ಸಿಗಬೇಕಿದೆ ಅಷ್ಟೇ. ಈಗಾಗಲೇ ಬಿಸಿಸಿಐ, ಐಪಿಎಲ್ ಗರ್ವನಿಂಗ್ ಕೌನ್ಸಿಲ್ ಮತ್ತು ಐಪಿಎಲ್ ಫ್ರಾಂಚೈಸಿಗಳು ಭರದಿಂದ ಪೂರ್ವ ತಯಾರಿ ನಡೆಸುತ್ತಿವೆ. ಆಗಸ್ಟ್ 2ರಂದು ನಡೆಯಲಿರುವ ಐಪಿಎಲ್ ಆಡಳಿತ ಸಭೆಯಲ್ಲಿ ಅಂತಿಮ ರೂಪುರೇಷೆಗಳು ಸಿದ್ಧಗೊಳ್ಳಲಿವೆ.
ಇನ್ನು ಈ ಬಾರಿಯ ಐಪಿಎಲ್ ಈ ಹಿಂದಿನ ಐಪಿಎಲ್ಗಿಂತ ಭಿನ್ನವಾಗಿದೆ. ಈ ಬಾರಿಯ ಟೂರ್ನಿಯಲ್ಲಿ ಜೈವಿಕ ಸುರಕ್ಷಾ ನಿಯಮವನ್ನು ಪ್ರತಿಯೊಬ್ಬ ಆಟಗಾರ, ಮಾಲೀಕ, ಸಿಬ್ಬಂದಿಗಳು, ಪದಾಧಿಕಾರಿಗಳು ಸೇರಿದಂತೆ ಐಪಿಎಲ್ ನಲ್ಲಿ ಭಾಗಿಯಾಗುವವರು ಕಡ್ಡಾಯವಾಗಿ ಪಾಲಿಸಲೇಬೇಕು. ಕೋವಿಡ್-19 ನ ಶಿಷ್ಟಚಾರಗಳು ಮತ್ತು ಮಾರ್ಗಸೂಚಿಗಳನ್ನು ಐಪಿಎಲ್ ಆಡಳಿತ ಸಭೆಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಹಾಗೇ ಈ ಬಾರಿಯ ಐಪಿಎಲ್ ನಲ್ಲಿ ಪ್ರೇಕ್ಷರಿಕಗೆ ಅವಕಾಶವಿಲ್ಲ. ಪ್ರೇಕ್ಷಕರಿಲ್ಲದ ಐಪಿಎಲ್ ಟೂರ್ನಿಯನ್ನು ಅಭಿಮಾನಿಗಳು ಟಿವಿಯಲ್ಲಿ ನೋಡಬೇಕು. ಇನ್ನೊಂದೆಡೆ ಆಟಗಾರರ ಪತ್ನಿ, ಕುಟುಂಬದ ಸದಸ್ಯರನ್ನು ಕರೆದುಕೊಂಡು ಹೊಗುವ ಬಗ್ಗೆ ಫ್ರಾಂಚೈಸಿಗಳು ನಿರ್ಧಾರ ಮಾಡಲಿವೆ. ಈ ಬಗ್ಗೆ ಬಿಸಿಸಿಐ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಎಂದು ಬಿಸಿಸಿಐನ ಮೂಲದಿಂದ ತಿಳಿದುಬಂದಿದೆ.
ಮತ್ತೊಂದೆಡೆ 13ನೇ ಆವೃತ್ತಿಯ ಐಪಿಎಲ್ ನಲ್ಲಿ ಕೆಲವೊಂದು ನಿಯಮಗಳನ್ನು ರೂಪಿಸಲಾಗಿದೆ. ತಂಡಗಳ ಡ್ರೆಸಿಂಗ್ ರೂಮ್ ನಲ್ಲಿ ಕೇವಲ 15 ಸದಸ್ಯರಿಗೆ ಮಾತ್ರ ಅವಕಾಶವಿದೆ. ವೀಕ್ಷಕ ವಿವರಣೆ ಮಾಡುವಾಗ ಆರು ಅಡಿಗಳಷ್ಟು ದೂರ ಇರಬೇಕು. ಪ್ರತಿಯೊಬ್ಬರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಡಗೌಟ್ನಲ್ಲೂ ಹೆಚ್ಚು ಆಟಗಾರರು ಇರಬಾರದು. ಹಾಗೇ ಎಲ್ಲಾ ಆಟಗಾರರಿಗೂ ಎರಡು ವಾರಗಳಲ್ಲಿ ನಾಲ್ಕು ಬಾರಿ ಕೊವಿಡ್-19 ಟೆಸ್ಟ್ ನಡೆಸಲಾಗುತ್ತದೆ. ಈ ಎಲ್ಲಾ ನಿಯಮಗಳನ್ನು ಆಗಸ್ಟ್ 2ರಂದು ನಡೆಯಲಿರುವ ಐಪಿಎಲ್ ಆಡಳಿತ ಸಭೆಯಲ್ಲಿ ಚರ್ಚೆ ಮಾಡಿ ಅಂತಿಮಗೊಳಿಸಲಾಗುವುದು.