ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆಯಡಿಯಲ್ಲಿ ಉಚಿತ ಪಡಿತರ ಪಡೆಯಲು ತೊಂದರೆ ಆಗಿದೆಯೇ? ಹಾಗಿದ್ದರೆ ಇಲ್ಲಿದೆ ಮಾಹಿತಿ
ಹೊಸದಿಲ್ಲಿ, ಅಗಸ್ಟ್ 24: ಪ್ರಧಾನಿ ನರೇಂದ್ರ ಮೋದಿ ಅವರು ಜೂನ್‌ನಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ (ಪಿಎಂಜಿಕೆಎ) ವಿಸ್ತರಣೆಯನ್ನು ಘೋಷಿಸಿದ್ದರು. ಇದು 80 ಕೋಟಿ ಜನರಿಗೆ, ವಿಶೇಷವಾಗಿ ಬಡ ಜನರಿಗೆ ಉಚಿತ ಪಡಿತರವನ್ನು ನವೆಂಬರ್ ಅಂತ್ಯದವರೆಗೆ ಒದಗಿಸುತ್ತದೆ. ಕೋವಿಡ್-19 ಅನ್ನು ಎದುರಿಸಲು ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದ ಕೂಡಲೇ ಏಪ್ರಿಲ್‌ನಿಂದ ಜೂನ್‌ವರೆಗೆ ಮೂರು ತಿಂಗಳ ಕಾಲ ಈ ಯೋಜನೆಯನ್ನು ರೂಪಿಸಲಾಯಿತು. ಬಳಿಕ ಮಾರ್ಚ್ 26 ರಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಘೋಷಿಸಿದ ಈ ಯೋಜನೆಯಡಿ, ದೇಶದ 80 ಕೋಟಿ ಪಡಿತರ ಚೀಟಿ ಹೊಂದಿರುವವರಿಗೆ ಪ್ರತಿ ವ್ಯಕ್ತಿಗೆ 5 ಕಿಲೋಗ್ರಾಂಗಳಷ್ಟು ಧಾನ್ಯಗಳನ್ನು (ಗೋಧಿ ಅಥವಾ ಅಕ್ಕಿ) ಉಚಿತವಾಗಿ ನೀಡಲಾಗುತ್ತದೆ.
ನೀವು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ತೊಂದರೆ ಅನುಭವಿಸಿದ ಪಕ್ಷದಲ್ಲಿ ಅದರ ವಿರುದ್ಧ ದೂರು ನೀಡಬಹುದಾಗಿದೆ . ಟೋಲ್ ಫ್ರೀ ಸಂಖ್ಯೆ – 1800-180-2087 ಅಥವಾ 1800-212-5512 ಗೆ ಕರೆ ಮಾಡಿ ಸಂಬಂಧ ಪಟ್ಟ ಪಡಿತರ ಅಂಗಡಿಯವರ ಮೇಲೆ ದೂರು ಸಲ್ಲಿಸಬಹುದಾಗಿದೆ.
ನವೆಂಬರ್ ತಿಂಗಳವರೆಗೆ ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ, ಆದರೆ ಅನೇಕ ಸ್ಥಳಗಳಲ್ಲಿ ಅಂಗಡಿಯವರು ಬಡವರಿಗೆ ಆಹಾರ ಧಾನ್ಯಗಳನ್ನು ನೀಡುತ್ತಿಲ್ಲ. ಇದು ಶಿಕ್ಷಾರ್ಹ ಅಪರಾಧವಾಗಿದ್ದು, ಇದರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಆದರೆ ಅಂತಹ ಚಟುವಟಿಕೆಯನ್ನು ಆಡಳಿತಕ್ಕೆ ವರದಿ ಮಾಡಲು ಸಾರ್ವಜನಿಕರ ಅಗತ್ಯವಿದೆ.
ದೇಶದ ನಾಗರಿಕರು ಆಹಾರ ಸರಬರಾಜು ನಿಯಂತ್ರಕ ಅಥವಾ ರಾಜ್ಯದ ಗ್ರಾಹಕ ಸಹಾಯ ಕೇಂದ್ರಕ್ಕೆ ಭೇಟಿ ನೀಡಿ ದೂರು ನೀಡಬಹುದು. ಆರಂಭದಲ್ಲಿ ಈ ಯೋಜನೆ ಪಡಿತರ ಚೀಟಿ ಹೊಂದಿರುವವರಿಗೆ ಮಾತ್ರ ಲಭ್ಯವಿತ್ತು ಆದರೆ ಈಗ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಸರಬರಾಜು ಮಾಡಲು ಸರ್ಕಾರ ನಿರ್ಧರಿಸಿದೆ.