ಬಿಗ್‌ಬಾಸ್ ಕನ್ನಡ ಸೀಸನ್ 12ರ ಕಿರೀಟ ಯಾರ ಮುಡಿಗೇರಲಿದೆ ಎನ್ನುವ ಕುತೂಹಲಕ್ಕೆ ಇನ್ನೆರಡೇ ದಿನಗಳಲ್ಲಿ ತೆರೆ ಬೀಳಲಿದೆ. ಆದರೆ ಫಿನಾಲೆಗೂ ಮುನ್ನವೇ ಇಡೀ ಕರ್ನಾಟಕದಲ್ಲಿ ಗಿಲ್ಲಿ ಹೆಸರಿನ ಅಬ್ಬರ ಜೋರಾಗಿದೆ. ಕಲರ್ಸ್ ಕನ್ನಡ ವಾಹಿನಿಯ ಇತಿಹಾಸದಲ್ಲೇ ಒಬ್ಬ ಸ್ಪರ್ಧಿ ಈ ಮಟ್ಟಿಗೆ ಹವಾ ಸೃಷ್ಟಿಸಿರುವುದು ಇದೇ ಮೊದಲು ಎನ್ನಬಹುದು. ಅರೇ, ಏನ್ ಕ್ರೇಜ್ ಗುರೂ ಇದು ಎಂದು ಹುಬ್ಬೇರಿಸುವ ಮಟ್ಟಿಗೆ ಗಿಲ್ಲಿ ಮೋಡಿ ಮಾಡಿದ್ದಾರೆ.
ರಾಜ್ಯಾದ್ಯಂತ ಗಿಲ್ಲಿ ಹವಾ: ಶಾಸಕರಿಂದಲೂ ಬೆಂಬಲ
ಸಾಮಾನ್ಯವಾಗಿ ಬಿಗ್‌ಬಾಸ್ ಸ್ಪರ್ಧಿಗಳಿಗೆ ಫ್ಯಾನ್ ಪೇಜ್‌ಗಳು ಇರುವುದು ಸಹಜ. ಆದರೆ ಗಿಲ್ಲಿ ವಿಷಯದಲ್ಲಿ ಅಭಿಮಾನದ ಪರಾಕಾಷ್ಠೆ ಮುಗಿಲು ಮುಟ್ಟಿದೆ. ಅಭಿಮಾನಿಗಳು ಗಿಲ್ಲಿಯ ಭಾವಚಿತ್ರವನ್ನು ತಮ್ಮ ಮೈಮೇಲೆ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಹುಚ್ಚು ಪ್ರೀತಿ ತೋರುತ್ತಿದ್ದಾರೆ. ರಸ್ತೆಗಿಳಿದರೆ ಆಟೋ, ಕಾರು ಮತ್ತು ಬೈಕ್‌ಗಳ ಮೇಲೆ ಗಿಲ್ಲಿ ಫೋಟೋಗಳು ರಾರಾಜಿಸುತ್ತಿವೆ. ಮಂಡ್ಯ ಜಿಲ್ಲೆ ಮಳವಳ್ಳಿ ಕ್ಷೇತ್ರದ ಶಾಸಕರಾದ ನರೇಂದ್ರ ಸ್ವಾಮಿ ಅವರೇ ಸ್ವತಃ ಗಿಲ್ಲಿಗೆ ವೋಟ್ ಮಾಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆಂದರೆ ಈತನ ಜನಪ್ರಿಯತೆ ಯಾವ ಮಟ್ಟಕ್ಕೆ ತಲುಪಿದೆ ಎಂದು ಊಹಿಸಬಹುದು.
ಮಾತಿನ ಮಲ್ಲನ ಮೋಡಿಗೆ ಫಿದಾ ಆದ ಕರುನಾಡು
ಬಿಗ್‌ಬಾಸ್ ಅಂದರೆ ಬರೀ ಟಾಸ್ಕ್ ಅಲ್ಲ, ಅದು ವ್ಯಕ್ತಿತ್ವದ ಆಟ ಎನ್ನುವುದನ್ನು ಗಿಲ್ಲಿ ಸಾಬೀತುಪಡಿಸಿದ್ದಾರೆ. ದೈಹಿಕ ಟಾಸ್ಕ್‌ಗಳಲ್ಲಿ ಇವರು ಬಾಹುಬಲಿ ಅಲ್ಲದೇ ಇರಬಹುದು, ಆದರೆ ಮಾತಿನ ಚಾತುರ್ಯದಲ್ಲಿ ಇವರನ್ನು ಮೀರಿಸುವವರು ಯಾರೂ ಇಲ್ಲ. ತಮ್ಮ ಅದ್ಭುತ ಕಾಮಿಡಿ ಟೈಮಿಂಗ್ ಮತ್ತು ಎದುರಾಳಿಗಳನ್ನು ಮಾತಿನಲ್ಲೇ ಮಣಿಸುವ ಚಾಕಚಕ್ಯತೆಯಿಂದಲೇ ಗಿಲ್ಲಿ ವೀಕ್ಷಕರ ಮನಗೆದ್ದಿದ್ದಾರೆ. ಮನೆಯಲ್ಲಿ ಎದುರಾಳಿಗಳನ್ನು ಎದುರಿಸಲು ಇವರು ಬಳಸಿದ ತಂತ್ರಗಾರಿಕೆ ಈಗ ಇವರನ್ನು ಟ್ರೋಫಿಯ ಸಮೀಪಕ್ಕೆ ತಂದು ನಿಲ್ಲಿಸಿದೆ.
ಕಲರ್ಸ್ ಕನ್ನಡದಲ್ಲಿ ದಾಖಲೆ ಬರೆದ ಗಿಲ್ಲಿ
ಸೋಷಿಯಲ್ ಮೀಡಿಯಾದಲ್ಲಿ ಗಿಲ್ಲಿ ಸೃಷ್ಟಿಸಿರುವ ದಾಖಲೆ ಸದ್ಯಕ್ಕೆ ಯಾರಿಂದಲೂ ಮುರಿಯಲು ಸಾಧ್ಯವಿಲ್ಲವೇನೋ. ಕಲರ್ಸ್ ಕನ್ನಡ ವಾಹಿನಿಯ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಗಿಲ್ಲಿಗೆ ಸಂಬಂಧಿಸಿದ ಮೂರು ಪ್ರೋಮೋಗಳು ಬರೋಬ್ಬರಿ 1 ಮಿಲಿಯನ್ ಅಂದರೆ 10 ಲಕ್ಷ ಲೈಕ್ಸ್ ಗಿಟ್ಟಿಸಿಕೊಂಡು ಹೊಸ ಇತಿಹಾಸ ಬರೆದಿವೆ.
1. ಕಿಚ್ಚ ಸುದೀಪ್ ಅವರನ್ನು ಇಮಿಟೇಟ್ ಮಾಡಿದ ಪ್ರೋಮೋ.
2. ಫ್ಯಾಮಿಲಿ ರೌಂಡ್‌ನಲ್ಲಿ ತಂದೆ-ತಾಯಿ ಬಂದಾಗಿನ ಭಾವುಕ ಕ್ಷಣದ ಪ್ರೋಮೋ.
3. ಇತ್ತೀಚೆಗೆ ಅಭಿಮಾನಿಗಳ ಎದುರು ವೋಟ್ ಕೇಳಿದ ಪ್ರೋಮೋ.
ಈ ಮೂರೂ ಪ್ರೋಮೋಗಳು 1 ಮಿಲಿಯನ್ ಲೈಕ್ಸ್ ಪಡೆಯುವ ಮೂಲಕ ಗಿಲ್ಲಿಯ ಜನಪ್ರಿಯತೆಗೆ ಕನ್ನಡಿ ಹಿಡಿದಿವೆ. ಕೇವಲ ಕೆಲವೇ ಗಂಟೆಗಳಲ್ಲಿ ಈ ದಾಖಲೆ ನಿರ್ಮಾಣವಾಗಿರುವುದು ನಿಜಕ್ಕೂ ಅಚ್ಚರಿ.
1 ಲಕ್ಷದಿಂದ 10 ಲಕ್ಷಕ್ಕೆ ಜಿಗಿದ ಫಾಲೋವರ್ಸ್
ಬಿಗ್‌ಬಾಸ್ ಮನೆಗೆ ಕಾಲಿಡುವಾಗ ಗಿಲ್ಲಿಯ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಕೇವಲ 1 ಲಕ್ಷದ ಆಸುಪಾಸಿನಲ್ಲಿತ್ತು. ಆದರೆ ಈಗ ಆ ಸಂಖ್ಯೆ 10 ಲಕ್ಷ (1 ಮಿಲಿಯನ್) ದಾಟಿದೆ. ಫಿನಾಲೆ ಮುಗಿಯುವುದರೊಳಗೆ ಅಥವಾ ನಂತರದ ದಿನಗಳಲ್ಲಿ ಇದು 2 ಮಿಲಿಯನ್ ಮುಟ್ಟಿದರೂ ಆಶ್ಚರ್ಯವಿಲ್ಲ. ಈಗಾಗಲೇ ಧ್ರುವಂತ್ ಮಿಡ್ ವೀಕ್ ಎಲಿಮಿನೇಷನ್ ಆಗಿದ್ದು, ಉಳಿದ 6 ಮಂದಿಯಲ್ಲಿ ಗಿಲ್ಲಿ ವಿನ್ನರ್ ಆಗೋದು ಪಕ್ಕಾ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ.
ಬೆಳ್ಳಿತೆರೆಯಲ್ಲೂ ಮಿಂಚಲು ರೆಡಿ
ಈಗಾಗಲೇ ಡೆವಿಲ್ ಸಿನಿಮಾದಲ್ಲಿ ನಟಿಸಿರುವ ಗಿಲ್ಲಿ, ಬಿಗ್‌ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಸ್ಟಾರ್ ನಟನಾಗಿ ಹೊರಹೊಮ್ಮುವುದು ಖಚಿತ. ಅವರ ಕೈಯಲ್ಲಿ ಈಗಾಗಲೇ ಎರಡು ಸಿನಿಮಾಗಳಿವೆ ಎನ್ನಲಾಗುತ್ತಿದ್ದು, ಇನ್‌ಸ್ಟಾಗ್ರಾಮ್ ಖ್ಯಾತಿ ಮತ್ತು ಜನಪ್ರಿಯತೆ ಅವರನ್ನು ದೊಡ್ಡ ಮಟ್ಟದ ಸ್ಟಾರ್ ಆಗಿ ರೂಪಿಸಲಿದೆ. ಒಟ್ಟಿನಲ್ಲಿ ಈ ಬಾರಿಯ ಬಿಗ್‌ಬಾಸ್ ಸೀಸನ್ 12ನ್ನು ಗಿಲ್ಲಿ ತಮ್ಮ ಹೆಸರಿಗೆ ಬರೆದುಕೊಂಡಂತಿದೆ.








