ನೋವೆಲ್ ಕೊವಿಡ್ -19 ಪ್ಯಾಂಡಮಿಕ್ ಸಂಕಟದ ಹಿಂದಿದೆಯಾ ಮೆಡಿಕಲ್ ಮಾಫಿಯಾ? ಇಂತದ್ದೊಂದು ಜಗನ್ನಾಟಕದ ಸೂತ್ರಧಾರಿ ಯಾರು?
2020ರ ಮಾರ್ಚ್ ನಲ್ಲಿ ಇಡೀ ಪ್ರಪಂಚದಾದ್ಯಂತ ಶುರುವಾದ ಕರೋನಾ ಪ್ಯಾಂಡಮಿಕ್ ತಾಪತ್ರಯ ಈಗ ನಾಲ್ಕನೇ ತಿಂಗಳಿಗೆ ಕಾಲಿಟ್ಟಿದೆ. ಈ ನಾಲ್ಕು ತಿಂಗಳಲ್ಲಿ ಜಗತ್ತಿನಾದ್ಯಂತ 90 ಲಕ್ಷಕ್ಕೂ ಹೆಚ್ಚು ಸೋಂಕು ಪೀಡಿತರಾಗಿದ್ದಾರೆ. ಇನ್ನೊಂದೆರಡು ದಿನಗಳಲ್ಲೆ ಕೋಟಿ ದಾಟುತ್ತದೆ. ಕರೋನಾದಿಂದ ಬಚಾವಾದವರ ಸಂಖ್ಯೆಯೂ ಗ್ಲೋಬಲ್ ಮೀಟರ್ ನಲ್ಲಿ ಹತ್ತಿರ ಹತ್ತಿರ 50 ಲಕ್ಷ ಎಂದು ತೋರಿಸುತ್ತಿದೆ. ಇಡೀ ಜಗತ್ತಿನಲ್ಲಿ ಕರೋನಾ ಕಾರಣದಿಂದ ಸಾವಿಗೀಡಾದವರ ಸಂಖ್ಯೆ 4 ಮುಕ್ಕಾಲು ಲಕ್ಷ. ಭಾರತದಲ್ಲಿ ಒಟ್ಟು ಕರೋನಾ ಪೀಡಿತರು ಮತ್ತು ಕರೋನಾ ಸಾವುಗಳು ಕ್ರಮವಾಗಿ 4 ಲಕ್ಷ ಚಿಲ್ಲರೆ ಮತ್ತು 13 ಸಾವಿರ ಚಿಲ್ಲರೆ. ಸುಮಾರು ಎರಡೂವರೆ ಲಕ್ಷದಷ್ಟು ಜನ ನಮ್ಮ ದೇಶವೊಂದರಲ್ಲೇ ಕರೋನಾ ಸಾಂಕ್ರಾಮಿಕ ರೋಗದಿಂದ ಪಾರಾಗಿದ್ದಾರೆ.
ನಮ್ಮ ಜನಸಂಖ್ಯೆ 130 ಕೋಟಿ ದಾಟಿದ್ದರೂ ನಮ್ಮ ದೇಶಕ್ಕಾದ ಹಾನಿ ಅತ್ಯಂತ ಸಣ್ಣ ಮಟ್ಟದ್ದು. ಇದರಲ್ಲಿ ಬೆನ್ನು ತಟ್ಟಿಕೊಳ್ಳುವ ಸಾಧನೆ ಏನಿಲ್ಲ. ನಮ್ಮ ಹವಾಗುಣ, ನಮ್ಮ ರಕ್ತವಾಹಿನಿಯಲ್ಲಿ ಹರಿದು ಬಂದಿರುವ ರೋಗ ನಿರೋಧಕ ಶಕ್ತಿ ಮತ್ತು ನಮ್ಮ ದೈನಂದಿನ ಆಹಾರ ಕ್ರಮಗಳೇ ನಮ್ಮಲ್ಲಿ ಇದನ್ನು ನಿಯಂತ್ರಣದಲ್ಲಿಟ್ಟಿವೆ. ಹಾಗಿದ್ದರೇ, ನಮ್ಮ ದೇಶದಲ್ಲಿ 40 ದಿನಕ್ಕೂ ಹೆಚ್ಚು ಲಾಕ್ ಡೌನ್ ಹೇರಿದ್ದರಿಂದ ಆದ ಪ್ರಯೋಜನವೇನು? ಅಲ್ಲ ಅದಲ್ಲ ವಿಚಾರ, ಅಸಲಿಗೆ ಈ ಕರೋನಾ ಎನ್ನುವ ಸಾಂಕ್ರಾಮಿಕ ರೋಗ ಯಾರಿಗೆ ಉಪಕಾರ ಮಾಡುತ್ತಿದೆ?
ಇದು ಮಾರಣಾಂತಿಕ ಹೌದೋ ಅಲ್ಲವೋ ಬೇರೆ ಸಂಗತಿ. ಆದರೆ ಇದೊಂದು ವ್ಯಾದಿಯನ್ನು ನೆಪಮಾಡಿಕೊಂಡು ಲಾಭ ಮಾಡಿಕೊಳ್ಳುತ್ತಿರುವ ಶಕ್ತಿಗಳು ಯಾವುವು? ಕರೋನಾ ಕಾಯಿಲೆಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲಾಗ್ತಿದೆಯಾ? ನೋವೆಲ್ ಕೋವಿಡ್ -19 ಎಂಬ ಜಗನ್ನಾಟಕದ ಸೂತ್ರಧಾರಿಗಳು ಯಾರು?
ಕರೋನಾ ವೈರಸ್ ಗೆ ಈಗಾಗಲೇ ಜಗತ್ತಿನಾದ್ಯಂತ ಸುಮಾರು 120 ಲಸಿಕೆಗಳು ಸಿದ್ಧವಾಗುತ್ತಿವೆ. ಇವುಗಳಲ್ಲಿ 12 ಲಸಿಕೆಗಳು ಎರಡನೇ ಹಂತದ ಕ್ಲಿನಿಕಲ್ ಟ್ರಯಲ್ ನಲ್ಲಿವೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಹೀಗೆ ಕ್ಲಿನಿಕಲ್ ಟ್ರಯಲ್ ನಡೆದು ಅಕ್ಟೋಬರ್ ನಲ್ಲಿ ಸಿಗುತ್ತದೆ ಡಿಸೆಂಬರ್ ವೇಳೆಗೆ ಮಾರುಕಟ್ಟೆ ಪ್ರವೇಶಿಸುತ್ತದೆ ಇತ್ಯಾದಿ ಬ್ಲಾ ಬ್ಲಾ ಬ್ಲಾಗಳನ್ನು ನಾವು ಸಾಕಷ್ಟು ದಿನಗಳಿಂದ ಕೇಳುತ್ತಲೇ ಇದ್ದೀವಿ. ಜಗತ್ತು ಇಷ್ಟೆಲ್ಲಾ ಮುಂದುವರೆದಿದ್ದರೂ ಒಂದು ಯಕಃಶ್ಚಿತ್ ವೈರಸ್ ನಿಯಂತ್ರಣಕ್ಕೆ ಮದ್ದು ಕಂಡುಹಿಡಿಯಲು ನಮ್ಮ ಫಾರ್ಮಾಸ್ಯುಟಿಕಲ್ ಉದ್ಯಮ ಇಷ್ಟೆಲ್ಲಾ ತಿಣುಕಾಡಬೇಕಾ? ಇನ್ನೂ ಲಸಿಕೆ ಕಂಡು ಹಿಡಿಯದಿದ್ದರೂ ಗ್ಲೋಬಲ್ ಲೆವೆಲ್ ನಲ್ಲಿ 48 ಲಕ್ಷಕ್ಕೂ ಹೆಚ್ಚಿನ ಕರೋನಾ ರಿಕವರಿ ಸಾಧ್ಯವಾಗಿದ್ದು ಹೇಗೆ? ಕರೋನಾ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಯಾವ ಮಾತ್ರೆ ಕೊಡಲಾಗ್ತಿದೆ? ನಮ್ಮ ದೇಶದಲ್ಲಿ ಆಂಟಿ ಮಲೇರಿಯಾ ಹೈಡ್ರಾಕ್ಸಿ ಕ್ಲೋರೋಕ್ವಿನ್ ಸೌಕರ್ಯವಿದೆ ಸರಿ, ಹೈಡ್ರಾಕ್ಸಿ ಕ್ಲೋರೋಕ್ವಿನ್, ರೆಮ್ ಡೆಸಿವಿಯರ್ ಲಭ್ಯತೆ ಇಲ್ಲದ ಉಳಿದ ರಾಷ್ಟ್ರಗಳಲ್ಲಿ ಡಾಕ್ಟರ್ ಗಳು ಯಾವ ಮಾತ್ರೆ ಕೊಡ್ತಿದ್ದಾರೆ? ಕರೋನಾ ಹೋರಾಟದಲ್ಲಿ ದಿಗ್ವಿಜಯ ಸಾಧಿಸಿದ ತೈವಾನ್, ನ್ಯೂಜಿಲ್ಯಾಂಡ್ ಮುಂತಾದ ರಾಷ್ಟ್ರಗಳಲ್ಲಿ ಬಳಸಿದ ಶಕ್ತಿಮದ್ದು ಯಾವುದು?
ಅಸಲಿಗೆ ಕರೋನಾ ರಿಕವರಿ ಪೇಷೆಂಟ್ ಗಳಿಗೆ ಕೊಡಲಾಗುತ್ತಿರುವ ಮಾತ್ರೆ ಅವರ ದೇಹದ ಇಮ್ಯುನೋ ಹೆಚ್ಚಿಸಲಯ ಮಾತ್ರ ತಾನೆ! ಈಗ ಕೊಡಲಾಗುತ್ತಿರುವ ಮದ್ದು ಕರೋನಾ ರೋಗ ವಾಸಿ ಮಾಡಲು ಅಲ್ಲ ರೋಗಿಯ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಎಂದೇ ನಮ್ಮ ವೈದ್ಯಕೀಯ ವ್ಯವಸ್ಥೆ ಹೇಳಿಕೊಳ್ಳುತ್ತಾ ಬಂದಿದೆ. ಫೈನ್! ಹೀಗೆ ಇಮ್ಯುನೋ ಹೆಚ್ಚಿಸಲು ಕೊಡಲಾಗುತ್ತಿರುವ ಮಾತ್ರೆಯಿಂದಲೇ ಕರೋನಾ ವಾಸಿಯಾಗುತ್ತಿದೆ ಎಂದಾದಲ್ಲಿ ಒಂದೇ ಒಂದು ಪ್ಯಾರಸಿಟಮಲ್ ಒಂದು ಡೋಲೋ 650 ಯಂತಹ ಮಾತ್ರೆಗಳು ಸಾಕಲ್ಲವಾ? ಉಹೂಂ ವಿಷಯ ಇಷ್ಟು ಸರಳವಾಗಿಲ್ಲ. ಇಷ್ಟು ಸರಳವಾಗಿಬಿಟ್ಟರೆ ಮೆಡಿಕಲ್ ಮಾಫಿಯಾ ಲಾಭ ಮಾಡಿಕೊಳ್ಳಲು ಸಾಧ್ಯವೂ ಇಲ್ಲ. ಬೆಂಗಳೂರು ಸೇರಿದಂತೆ ಬಹಳಷ್ಟು ನಗರಗಳಲ್ಲಿ ಈಗಾಗಲೇ ಮೆಡಿಕಲ್ ಶಾಪ್ ಗಳಲ್ಲಿ ಜ್ವರದ ಮಾತ್ರೆಗಳನ್ನು ಕೊಡುವುದನ್ನು ನಿಲ್ಲಿಸಲಾಗಿದೆ. ವೈದ್ಯರ ಪ್ರಿಸ್ಕ್ರಿಪ್ಷನ್ ಇದ್ದರೆ ಮಾತ್ರ ಜ್ವರದ ಮಾತ್ರೆ ಸಿಗುತ್ತದೆ. ವಿಚಾರ ಇಷ್ಟೆ ಒಂದು ಕಡೆ ಜ್ವರದ ಮಾತ್ರೆಯಿಂದಲೇ ಕರೋನಾ ವಾಸಿಯಾಗಿಬಿಟ್ಟರೆ ಖಾಸಗಿ ಆಸ್ಪತ್ರೆಗಳಲ್ಲಿ ಈಗ ಕರೋನಾ ಪ್ಯಾಕೇಜ್ ಎಂದು (ಕೆಲವು ಆಸ್ಪತ್ರೆಗಳಲ್ಲಿ ಕನಿಷ್ಟ 30 ರಿಂದ 40 ಸಾವಿರ ಒಬ್ಬ ರೋಗಿಗೆ ಬಿಲ್ ಮಾಡಲಾಗುತ್ತದೆ) ದುಡ್ಡು ಮಾಡಿಕೊಳ್ಳುತ್ತಿರುವುದು ನಿಂತು ಹೋಗುತ್ತದೆ. ಇನ್ನೊಂದು ಕಡೆ ಕರೋನಾ ಭಯ ದೂರಾಗಿಬಿಟ್ಟರೆ ಈಗಾಗಲೇ ಹಾಕಿಕೊಂಡಿರುವ ಹಣ ಮಾಡುವ ಯೋಜನೆಗಳಿಗೆ ಬ್ರೇಕ್ ಬೀಳುತ್ತದೆ. ನಮ್ಮ ಯಾವ ಸರ್ಕಾರಗಳಿಗೂ ಕರೋನಾ ದೂರವಾಗುವುದು ಬೇಕಿಲ್ಲವೇ?
ಈಗ ಮೊದಲಿಂದ ಬರೋಣ. ಕರೋನಾ ಸಾಂಕ್ರಾಮಿಕ ವೈರಸ್ ತಡೆಗಟ್ಟಲು ಜಗತ್ತನ್ನೇ ತಾತ್ಕಾಲಿಕವಾಗಿ ಶೆಟ್ ಡೌನ್ ಮಾಡಲಾಯಿತು. ದಿನಕ್ಕೊಂದು ರಾಷ್ಟ್ರಗಳಿಂದ ಮನಕಲಕುವ ಕಥೆಗಳು ಕೇಳಿಬರುತ್ತಿದ್ದವು. ಸತ್ತವರ ದೇಹವನ್ನೂ ಕೊಡದೇ ಅಂತ್ಯಸಂಸ್ಕಾರ ಮಾಡಲಾಯಿತು. ಸತ್ತ ವ್ಯಕ್ತಿಯ ದೇಹದಲ್ಲಿ ಕರೋನಾ ವೈರಸ್ ಇರುವುದಿಲ್ಲ ಎನ್ನುವುದು ಆನಂತರ ಸಾಬೀತಾಯಿತಲ್ಲ ಈಗಲೂ ಪರಿಸ್ಥಿತಿ ಹಾಗೆಯೇ ಇದೆ. ಕರೋನಾದಿಂದ ಸತ್ತವರೆಲ್ಲಾ 60 ವರ್ಷದ ಆಸುಪಾಸಿನವರು ಅಥವಾ ಮೇಲ್ಪಟ್ಟವರು. ಮಕ್ಕಳು ಸತ್ತ ಅಂಕಿಅಂಶಗಳು ಬಹಳ ಕಡಿಮೆ. ಕಿಶೋರರು, ತರುಣರು, ಯುವಜನರು, ಮಧ್ಯವಯಸ್ಕರ ಸಾವಿನ ಪ್ರಮಾಣವಂತೂ ತೀರಾ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಮಹಿಳೆಯರು ಸತ್ತ ಉದಾಹರಣೆಗಳು ಕಡಿಮೆಯೇ. ಸತ್ತ ವ್ಯಕ್ತಿಯ ಶವ ಪರೀಕ್ಷೆಯಲ್ಲಿ ಅಥವಾ ಗಂಟಲು ದ್ರವ ಪರೀಕ್ಷೆಯಲ್ಲಿ ಕರೋನಾ ಪಾಸೀಟೀವ್ ಅಂತ ಬಂದುಬಿಟ್ಟರೆ ದೊಡ್ಡ ನಾಟಕವನ್ನೇ ಸೃಷ್ಟಿಮಾಡಲಾಯಿತು. ಕೆಲವು ಕಡೆ ಹೇಗೆ ಸತ್ತರೂ ಕರೋನಾದಿಂದಲೇ ಸತ್ತರು ಎನ್ನುವಂತೆ ಬಿಂಬಿಸಲಾಯಿತು. 40 ದಿನಗಳ ಲಾಕ್ ಡೌನ್ ನಡುವೆಯೂ ಕರೋನಾ ನಿಯಂತ್ರಣ ಹೇಳಿಕೊಂಡಷ್ಟು ಯಶಸ್ವಿಯಾಗಿ ನಡೆಯಲೇ ಇಲ್ಲ. ಯಾವಾಗ ಕರೋನಾ ಸ್ಫೋಟವಾಗಬಹುದು ಎನ್ನುವ ಅಂದಾಜಿತ್ತೋ ಆಗ ಸಂಪೂರ್ಣ ಲಾಕ್ ಡೌನ್ ತೆಗೆಯಲಾಯಿತು. ಕರೋನಾ ದಾಳಿ ಹತ್ತು ಪಟ್ಟು ನೂರು ಪಟ್ಟು ಹೆಚ್ಚಾಯಿತು. ಹಾಗಿದ್ದರೆ ಲಾಕ್ ಡೌನ್ ಹೇರಿದ್ಯಾಕೆ? ಈ 40 ದಿನಗಳ ಲಾಕ್ ಡೌನ್ ಅವಧಿಯ ನಡುವೆ ಯಾವ ಯಾವ ದೇಶಗಳ ಶ್ರೀಮಂತರು ಹಣ ಮಾಡಿಕೊಂಡರು ಎನ್ನುವದನ್ನು ಹೇಳಲು ಮತ್ತೊಂದು ಅಂಕಣವನ್ನೇ ಬರೆಯಬೇಕಾದೀತು.
ನಮ್ಮ ಮಣ್ಣು ತಿನ್ನುವ ಮತಿಗೇಡಿ ಮಾಧ್ಯಮಗಳೂ ಕೂಡಾ ಕರೋನಾ ಕುರಿತಾದ ಭೀತಿಯನ್ನು ಇನ್ನಷ್ಟು ಹೆಚ್ಚಿಸಿದವೇ ಹೊರತು ಇದಕ್ಕೆ ಸರ್ಕಾರ ಏನು ಮಾಡಬೇಕಿತ್ತು ಎನ್ನುವ ಪರಿಹಾರ ಹೇಳಲಿಲ್ಲ. ಕರೋನಾ ವ್ಯಾದಿಯಿಂದ ಪರಿಹಾರಗೊಂಡು ಡಿಸ್ಚಾರ್ಜ್ ಆದ ಒಬ್ಬನೇ ಒಬ್ಬ ರೋಗಿಯನ್ನು ಸಂದರ್ಶಿಸಿ ಸತ್ಯ ದರ್ಶನ ಮಾಡಿಸಲಿಲ್ಲ. ಆಳುವ ಪ್ರಭುತ್ವಗಳ ಭಜನಾಕೇಂದ್ರಗಳಾಗಿರುವ ಸುದ್ದಿವಾಹಿನಿಯಿಂದ ಮತ್ತೇನೂ ನಿರೀಕ್ಷಿಸಲು ಸಾಧ್ಯವೂ ಇಲ್ಲ. ಈಗಲೂ ಸರ್ಕಾರವಾಗಲೀ, ಮಾಧ್ಯಮವಾಗಲೀ ಪರಿಹಾರ ಹುಡುಕುತ್ತಿಲ್ಲ. ಇಲ್ಲಿ ಸತ್ಯ ಕಣ್ಣಿಗೆ ಕಾಣಿಸುವಷ್ಟು ನಿಚ್ಚಳ. ಕರೋನಾ ವಾಸಿಯಾಗುವುದು ಯಾರಿಗೂ ಬೇಕಿಲ್ಲ. ಸಾಯುವುದು ಕೆಳವರ್ಗ, ಮಧ್ಯಮ ವರ್ಗದ ಬಡಪಾಯಿಗಳು ಮಾತ್ರವೇ ತಾನೆ ದೇಶದ ಜಿಡಿಪಿಗೆ ಪ್ರಪಂಚದ ವ್ಯವಹಾರಕ್ಕೆ ಇದರಿಂದ ನಷ್ಟವೇನಿಲ್ಲ ಬಿಡಿ.
ಈಗ ನನ್ನ ಅಭಿಪ್ರಾಯಕ್ಕೆ ಬರುತ್ತೇನೆ. ಇದು ಕೇವಲ ನನ್ನ ವೈಯಕ್ತಿಕ ಅಭಿಪ್ರಾಯ ಮಾತ್ರ. ಇದರ ಹಿಂದೆ ಎಡದವರು, ಬಲದವರು, ಭಕ್ತರು, ಗುಲಾಮರು, ಕೆಂಪು ನೀಲಿ ಹಸಿರು ಕೇಸರಿ ಇತ್ಯಾದಿ ಬಣ್ಣದವರ ಯಾವುದೇ ಕಾನ್ಸ್ಪಿರಸಿ ಥಿಯರಿಗಳೂ ಇಲ್ಲ. ನನ್ನ ಪ್ರಶ್ನೆ ಅತ್ಯಂತ ನೇರ ಮತ್ತು ಸ್ಪಷ್ಟ. ಈ ಕರೋನಾ ಏನು? ಇದು ಎಷ್ಟರ ಮಟ್ಟಿಗೆ ಪ್ಯಾಂಡಮಿಕ್? ಸಾರ್ಸ್, ಎಬೋಲಾ, ಹೆಚ್1ಎನ್1, ಹೋಗಲೀ ನಮ್ಮ ದೇಶದಲ್ಲೇ ಹತ್ತಾರು ವರ್ಷಗಳಿಂದ ಇರುವ ಮಲೇರಿಯಾ, ಚಿಕೂನ್ ಗುನ್ಯಾ, ಡೆಂಗ್ಯೂ, ಮಂಗನಕಾಯಿಲೆಯಷ್ಟು ಮಾರಣಾಂತಿಕವೇ? ನಮ್ಮ ಹಳ್ಳಿ ಕಡೆ ಗುದ್ದಪ್ಪನ ಬೇನೆ ಎಂದು ಕರೆಯುತ್ತಿದ್ದ ಪ್ಲೇಗ್, ಅಮ್ಮ ಎನ್ನುತ್ತಿದ್ದ ಸಿಡುಬು ಅಥವಾ ಸ್ಮಾಲ್ ಫಾಕ್ಸ್ ನಂತಹ ಮಹಾಮಾರಿ ರೋಗಗಳನ್ನು ಜಯಿಸಿದ ನಮ್ಮ ವಂಶವಾಹಿನಿಗೆ ಕರೋನಾ ಒಂದು ಲೆಕ್ಕವೇ? ಕರೋನಾ ಎಂಬ ಪೆಡಂಬೂತವನ್ನು ಸೃಷ್ಟಿಸಿದ ಚೀನಾ, ಬೆಳೆಸಿದ ಅಮೇರಿಕಾ ಮತ್ತು ಯುರೋಪಿಯನ್ ರಾಷ್ಟ್ರಗಳ ಅಸಲಿ ಉದ್ದೇಶವೇನು? ಎಲ್ಲಾ ಕ್ಯಾಪಟಲಿಸ್ಟ್ ರಾಷ್ಟ್ರಗಳಲ್ಲೂ ಕರೋನಾ ದೆಸೆಯಲ್ಲಿ ಲಾಭ ಮಾಡಿಕೊಳ್ಳುವ ಷಡ್ಯಂತ್ರ ಇತ್ತಾ? ಕರೊನಾ ಸಂಕಷ್ಟ ಕಾಲದಲ್ಲೂ ಹಣ ದೋಚಿದ ಕಾರ್ಪೊರೇಟ್ ಕುಳಗಳ ಅಸಲಿಯತ್ತೇನು? ಕರೋನಾ ಪಿಡುಗು ಎಂಬ ಜಗನ್ನಾಟಕದ ಹಿಂದಿನ ಸೂತ್ರಧಾರಿಗಳು ಯಾರು?
ಲಾಸ್ಟ್ ಬಿಟ್:
ಒಂದು ನಷ್ಟದಲ್ಲಿರುವ ಕಂಪೆನಿಯನ್ನು ಮತ್ತೊಂದು ದೈತ್ಯ ಕಂಪೆನಿ ಟೇಕ್ ಒವರ್ ಮಾಡಬೇಕೆಂದರೆ ಒಂದು ಷರತ್ತು ವಿಧಿಸುತ್ತದೆ. ಹಳೆಯ ಕಂಪೆನಿಯನ್ನು ಜೀರೋ ಮಾಡಿ ಕೊಡಬೇಕು ಅನ್ನುವುದು ಆ ಷರತ್ತು. ಹಳೆಯ ವ್ಯವಸ್ಥೆಯನ್ನು ತೊಲಗಿಸಿ ಹೊಸ ವ್ಯವಸ್ಥೆಯ ಮೂಲಕ ಬ್ಯುಸಿನೆಸ್ ಕಟ್ಟುವುದು ದೊಡ್ಡ ದೊಡ್ಡ ವ್ಯಾವಹಾರಿಕ ಸಂಸ್ಥೆಗಳ ಅತ್ಯಂತ ಸಾಮಾನ್ಯ ಬ್ಯುಸಿನೆಸ್ ಸ್ಟ್ರಾಟೆಜಿ. ಹಾಗೆಯೇ ಇಡೀ ಜಗತ್ತನ್ನೇ ಒಂದು ಸಲ ಸಂಪೂರ್ಣವಾಗಿ ನಿಲ್ಲಿಸಿ ಹೊಸ ವ್ಯವಸ್ಥೆಯನ್ನು ಸೃಷ್ಟಿಮಾಡಲು ಜಾಗತಿಕ ಫಾರ್ಮಾಸ್ಯುಟಿಕಲ್ ಉದ್ಯಮ ಮೆಡಿಕಲ್ ಮಾಫಿಯಾ ಕರೋನಾವನ್ನು ತಮ್ಮ ಉದ್ದೇಶ ಈಡೇರಿಸಿಕೊಳ್ಳಲು ಬಳಸಿಕೊಂಡಿತಾ ಎನ್ನುವ ಅನುಮಾನ ನಂಗಿದೆ. ನಾನು ಯೋಚಿಸಿದ್ದನ್ನು ಬರೆದಿದ್ದೇನೆ. ಇಷ್ಟು ಓದಿದ ನಂತರ ನೀವೂ ಯೋಚಿಸಿ ಇನ್ಯಾವುದಾದರೂ ಸಮರ್ಥನೆಗಳನ್ನೋ ಸ್ಪಷ್ಟನೆಗಳನ್ನೋ ಕೊಡುತ್ತೀರಾದರೆ ಇನ್ನೂ ಸಂತೋಷ. ಎಲ್ಲರೂ ಸಮೂಹ ಸನ್ನಿಯಲ್ಲಿರುವಾಗ ಒಂದಷ್ಟು ತಾರ್ಕಿಕ ಚಿಂತನೆಗಳಾಗಲಿ.
– ವಿಭಾ (ವಿಶ್ವಾಸ್ ಭಾರದ್ವಾಜ್ )