ವಿಜಯಪುರ: 2 ವರ್ಷದ ಬಾಲಕ ಕೊಳವೆ ಬಾವಿಗೆ ಆಘಾತಕಾರಿ ಪ್ರಕರಣ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದ ತೋಟದಲ್ಲಿ ನಡೆದಿತ್ತು. ಸದ್ಯ ಬಾಲಕನ ವಿಡಿಯೋ ಸಿಕ್ಕಿದ್ದು, ಕಾಲು ಅಲುಗಾಡಿಸುವ ದೃಶ್ಯ ಅದರಲ್ಲಿದೆ. ಹೀಗಾಗಿ ಮಗು ಬದುಕಿರುವ ಶಂಕೆ ವ್ಯಕ್ತವಾಗಿದೆ.
400 ಅಡಿ ಆಳದ ಕೊಳವೆ ಬಾವಿಯಲ್ಲಿ 2 ವರ್ಷದ ಸಾತ್ವಿಕ್ ಬಿದ್ದಿದ್ದಾನೆ. ಹೀಗಾಗಿ ಕಳೆದ 13 ಗಂಟೆಯಿಂದ ಮಗುವಿನ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಬೆಳಗಾವಿ, ಕಲಬುರಗಿಯಿಂದ ಎಸ್ ಡಿಆರ್ ಎಫ್, ಹೈದರಾಬಾದ್ ನಿಂದ ಎನ್‌ಡಿಆರ್‌ಎಫ್ ತಂಡ ಆಗಮಿಸಿದ್ದು, ಸ್ಥಳೀಯ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಜೊತೆಗೂಡಿದ್ದು ರಕ್ಷಣಾ ಕಾರ್ಯಾಚರಣೆ ವೇಗವಾಗಿ ನಡೆಯುತ್ತಿದೆ.
ಕೊಳವೆ ಬಾವಿ 40 ಅಡಿ ಇದ್ದರೂ 20 ಅಡಿ ಆಳದಲ್ಲಿ ಬಾಲಕ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಪಕ್ಕದಲ್ಲಿ ಸಮಾನಾಂತರವಾಗಿ 2 ಜೆಸಿಬಿ ಬಳಸಿ ಗುಂಡಿಯನ್ನು ತೋಡಿ ಮಣ್ಣನ್ನು ಹೊರತೆಗೆದು ಮಗುವಿರುವ ಸ್ಥಳದ ಬಳಿಗೆ ರಕ್ಷಣಾ ತಂಡ ಸಮೀಪಿಸುತ್ತಿದೆ. ಕೇವಲ ಇನ್ನೊಂದು ಅಡಿ ಕೊರೆದರೆ ಮಗುವಿನ ಬಳಿಗೆ ರಕ್ಷಣಾ ತಂಡ ತಲುಪಲಿದೆ. ಕೊಳವೆ ಬಾವಿಗೆ ಕ್ಯಾಮೆರಾ ಇಳಿಬಿಟ್ಟು ಬಾಲಕನ ಚಲನವಲನ ಗಮನಿಸಲಾಗುತ್ತಿದೆ. ಜಿಲ್ಲಾಡಳಿತ ಪೈಪ್ ಮೂಲಕ ಆಕ್ಸಿಜನ್ ಕಳುಹಿಸಲಾಗುತ್ತಿದೆ. ಕ್ಯಾಮೆರಾದಲ್ಲಿ ಕಾಲು ಅಲುಗಾಡಿಸುತ್ತಿರುವ ದೃಶ್ಯ ಸೆರೆಯಾಗಿದ್ದರಿಂದ ಬಿರುಸಿನಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸ್ಥಳಕ್ಕೆ ಅಧಿಕಾರಿಗಳ ತಂಡ ಬೀಡು ಬಿಟ್ಟಿದೆ.