ನವದೆಹಲಿ: ಇರಾನ್ (Iran) ನಡೆಸಿದ ಕ್ಷಿಪಣಿ ದಾಳಿಗೆ ಇಸ್ರೇಲ್ (Israel) ದಾಳಿಯ ಮೂಲಕ ಉತ್ತರ ನೀಡಿದೆ. ಶುಕ್ರವಾರ ಮಧ್ಯರಾತ್ರಿ 100 ಕ್ಕೂ ಹೆಚ್ಚು ಯುದ್ಧ ವಿಮಾನಗಳ (Air Strike) ಮೂಲಕ ಇರಾನ್ನ 20 ಕ್ಕೂ ಹೆಚ್ಚು ಮಿಲಿಟರಿ ಸ್ಥಳಗಳಲ್ಲಿ ಇಸ್ರೇಲ್ ಏರ್ಸ್ಟ್ರೈಕ್ ನಡೆಸಿದೆ.
ಅ.1 ರಂದು ಇರಾನ್ ಕ್ಷಿಪಣಿ ದಾಳಿ ನಡೆಸಿದಾಗ ಪ್ರತಿಕ್ರಿಯೆ ನೀಡುವುದಾಗಿ ಇಸ್ರೇಲ್ ಹೇಳಿತ್ತು. ಅದಕ್ಕೆ ಪೂರಕವಾಗಿ ಈ ಕಾರ್ಯಚರಣೆ ನಡೆದಿದೆ ಎಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ. ಇದರಿಂದಾಗಿ ಇರಾನ್ ಗೆ ಭಾರೀ ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ. ದಾಳಿ ನಡೆದಾಗ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ಟೆಲ್ ಅವಿವ್ನಲ್ಲಿರುವ ಮಿಲಿಟರಿ ಪ್ರಧಾನ ಕಚೇರಿಯಲ್ಲಿದ್ದರು ಎಂದು ನೆತನ್ಯಾಹು ಕಚೇರಿ ತಿಳಿಸಿದೆ.
ಮೂರು ಅಲೆಗಳ ದಾಳಿಯನ್ನು ನಡೆಸಲಾಯಿತು ಎಂದಾದರೂ ಸ್ಥಳೀಯ ನಿವಾಸಿಗಳ ಪ್ರಕಾರ ಮೊದಲ ಸುತ್ತಿನಲ್ಲಿ ಕನಿಷ್ಠ ಏಳು ಸ್ಫೋಟಗಳು ಕೇಳಿಬಂದವು ಎಂದು ಇರಾನ್ ವರದಿ ಮಾಡಿದೆ. ಇರಾನ್ ನ ಪರಮಾಣು ಕೇಂದ್ರಗಳು ಮತ್ತು ತೈಲ ಘಟಕಗಳನ್ನು ಇಸ್ರೇಲ್ ಗುರಿಯಾಗಿಸಬಹುದು ಎಂದು ಹೇಳಲಾಗಿತ್ತು. ಆದರೆ ಈ ಪ್ರದೇಶಗಳನ್ನು ಇಸ್ರೇಲ್ ಗುರಿಯಾಗಿಸಿಲ್ಲ. ಇರಾನ್ನ ವಾಯು ರಕ್ಷಣಾ ವ್ಯವಸ್ಥೆಯು ಇಸ್ರೇಲ್ನ ಆಕ್ರಮಣವನ್ನು ಯಶಸ್ವಿಯಾಗಿ ಪತ್ತೆ ಹಚ್ಚಿದೆ. ಕೆಲವು ಸ್ಥಳಗಳ ಮೇಲಿನ ದಾಳಿಯನ್ನು ಪ್ರತಿಬಂಧಿಸಿದೆ.
ಮುಂದಿನ ಸೂಚನೆ ಬರುವವರೆಗೂ ಇರಾನ್ ಎಲ್ಲಾ ಮಾರ್ಗಗಳಲ್ಲಿನ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಇಸ್ರೇಲ್ ತನ್ನ ವಾಯುಪ್ರದೇಶವನ್ನು ನಾಗರಿಕ ವಿಮಾನಯಾನಕ್ಕೆ ಸಂಪೂರ್ಣವಾಗಿ ಮುಚ್ಚುವುದಾಗಿ ಘೋಷಿಸಿದೆ. ಇರಾನ್ ವಿರುದ್ಧ ಇಸ್ರೇಲ್ ಸೇನಾ ಕಾರ್ಯಚರಣೆ ಬಗ್ಗೆ ಇಸ್ರೇಲ್ ಸೇನಾ ಮುಖ್ಯಸ್ಥ ಹರ್ಜಿ ಹಲೇವಿ ಮಾಹಿತಿ ನೀಡಿದ್ದಾರೆ. ಮೂರು ಹಂತದ ದಾಳಿ ನಡೆಸಿದೆ. ಈ ದಾಳಿಯ ಬಳಿಕ ಇಸ್ರೇಲ್ ಮಿಲಿಟರಿ ಕಾರ್ಯಾಚರಣೆ ಅಂತ್ಯವಾಗಿದೆ. ನಾವು ಇರಾನ್ನಲ್ಲಿನ ಮಿಲಿಟರಿ ಗುರಿಗಳ ಮೇಲೆ ನಿಖರವಾದ ದಾಳಿಗಳನ್ನು ನಡೆಸಿದ್ದೇವೆ ಎಂದಿದ್ದಾರೆ.