ISRO LVM 3 : 36 ಉಪಗ್ರಹಗಳೊಂದಿಗೆ LVM3 ರಾಕೆಟ್ ಉಡಾವಣೆ ಯಶಸ್ವಿ…
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ LVM 3 ರಾಕೆಟ್ ಅನ್ನ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಭಾನುವಾರ ಬೆಳಗ್ಗೆ ಒಂಬತ್ತು ಗಂಟೆಗೆ ಆಂಧ್ರ ಪ್ರದೇಶದಲ್ಲಿರುವ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋ ಈ ರಾಕೆಟ್ ಅನ್ನು ಉಡಾವಣೆ ಮಾಡಲಾಯಿತು. ಈ ಮೂಲಕ ಏಕಕಾಲಕ್ಕೆ 36 ಉಪಗ್ರಹಗಳನ್ನ ಕಕ್ಷೆಗೆ ಸೇರಿಸಲಾಯಿತು.
ಈ Launch Vehicle Mark-3 ರಾಕೆಟ್ 43.5 ಮೀಟರ್ ಉದ್ದ, 4.4 ಮೀಟರ್ ಅಗಲ ಮತ್ತು 543 ಟನ್ ತೂಕವನ್ನ ಹೊಂದಿದೆ. ಈ ಉಪಗ್ರಹಗಳ ಉಡಾವಣೆಗಾಗಿ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ ಒನ್‌ವೆಬ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಒಪ್ಪಂದದ ಪ್ರಕಾರ 72 ಉಪಗ್ರಹಗಳನ್ನ ಕಕ್ಷೆಗೆ ಸೇರಿಸಬೇಕಿದೆ. ಮೊದಲ ಹಂತದಲ್ಲಿ ಅಕ್ಟೋಬರ್ 23 ರಂದು 36 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿತ್ತು. ಭಾನುವಾರ ಮತ್ತೆ 36 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ. ಇವು ಖಾಸಗಿ ಕಂಪನಿಯ ಒಡೆತನದ ಉಪಗ್ರಹಗಳಾಗಿದ್ದು, ಇವುಗಳನ್ನ ಉಡಾವಣೆ ಮಾಡುವ ಮೂಲಕ ಇಸ್ರೋ 1,000 ಕೋಟಿ ಆದಾಯ ಗಳಿಸಿದೆ. ಇದು ಇಸ್ರೋದ ಎರಡನೇ ವಾಣಿಜ್ಯ ಉಪಗ್ರಹ ಉಡಾವಣೆಯಾಗಿದೆ.
ರಾಕೆಟ್ ಉಡಾವಣೆ ಯಶಸ್ವಿಯಾಗಿದೆ. ನಿಗದಿತ ಕಕ್ಷೆಗೆ ಜಿಎಸ್‌ಎಲ್‌ವಿ ಮಾರ್ಕ್-3 ರಾಕೆಟ್‌ನ ಪ್ರವೇಶ ಪೂರ್ಣಗೊಂಡಿದೆ. ಯಾವುದೇ ಅಡೆತಡೆಯಿಲ್ಲದೆ ಪ್ರಯೋಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು. ಇಸ್ರೋ ಸಿಬ್ಬಂದಿಯ ಸಾಮೂಹಿಕ ಪ್ರಯತ್ನದಿಂದ ಇದು ಸಾಧ್ಯವಾಗಿದೆ ಎಂದು ಇಸ್ರೋ ಅಧ್ಯಕ್ಷ ಡಾ.ಸೋಮನಾಥ್ ಘೋಷಿಸಿದ್ದಾರೆ.
ಮುಂದಿನ ತಿಂಗಳು ಪಿ ಎಸ್ ಎಲ್ ವಿ ರಾಕೆಟ್ ಮೂಲಕ ಸಿಂಗಾಪುರ ಮೂಲದ ಉಪಗ್ರಹವನ್ನು ಉಡಾವಣೆ ಮಾಡುತ್ತೇವೆ. ಈ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಮಾರ್ಕ್-3 ರಾಕೆಟ್ ಮೂಲಕ ಹೆಚ್ಚಿನ ವಾಣಿಜ್ಯ ಪರೀಕ್ಷೆಗಳನ್ನು ಮಾಡಲಾಗುವುದು. ಜಿಎಸ್ ಎಲ್ ವಿ ಮಾರ್ಕ್-3 ರಾಕೆಟ್ ಅನ್ನು ಮತ್ತಷ್ಟು ಅಭಿವೃದ್ಧಿಪಡಿಸುತ್ತೇವೆ ಎಂದು ಡಾ.ಸೋಮನಾಥ್ ಬಹಿರಂಗಪಡಿಸಿದರು.
ISRO LVM 3 : Successful launch of LVM3 rocket with 36 satellites…