ಸೂರ್ಯಗ್ರಹಣಕ್ಕೆ ಇನ್ನೂ ಕೆಲ ತಿಂಗಳುಗಳು ಬಾಕಿ ಇದೆ. ಆದರೆ,ವಿಜ್ಞಾನಿಗಳು ಶೀಘ್ರದಲ್ಲೇ ಕೃತಕ ಸೂರ್ಯಗ್ರಹಣವನ್ನು ಸೃಷ್ಟಿಸುವ ಮೂಲಕ ಇತಿಹಾಸ ಬರೆಯಲು ಸಿದ್ಧರಾಗಿದ್ದಾರೆ. ಯುರೋಪಿಯನ್ ಬಾಹ್ಯಾಕಾಶ ಏಜೆನ್ಸಿಯ ರಾಕೆಟ್ ಉಡಾವಣೆ ಕಾರ್ಯಾಚರಣೆಯ ಅಂತಿಮ ಸಿದ್ಧತೆಗಳು ಪ್ರಾರಂಭವಾಗಿವೆ. ಇದರಲ್ಲಿ ಉಪಗ್ರಹವನ್ನು ಕಳುಹಿಸುವ ಮೂಲಕ ಕೃತಕ ಸೂರ್ಯಗ್ರಹಣ ಸೃಷ್ಟಿಸಲು ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಶ್ರೀಹರಿಕೋಟಾ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ PSLV C-59 ರಾಕೆಟ್ ಇಂದು ನಭಕ್ಕೆ ಚಿಮ್ಮಲಿದೆ. ಇಸ್ರೋ ಸಂಜೆ 4:08ಕ್ಕೆ ಈ ಉಡಾವಣೆಗೆ ಸಮಯ ನಿಗದಿಪಡಿಸಿದೆ. ಈ ರಾಕೆಟ್ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಪ್ರೊಬಾ-3 ಉಪಗ್ರಹವನ್ನು ಕಕ್ಷೆಗೆ ಸೇರಿಸುತ್ತದೆ. ಇದಲ್ಲದೆ, ಇನ್ನೂ ನಾಲ್ಕು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತಿದೆ. ಭೂಮಿಯಿಂದ ಸುಮಾರು 60 ಸಾವಿರ ಕಿ.ಮೀ. ಎತ್ತರಕ್ಕೆ ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತಿದೆ.