ಬೆಂಗಳೂರು: ಸಾವಿರಾರು ಭಾಷೆ, ಸಂಸ್ಕೃತಿ, ಧರ್ಮಗಳಿರುವ ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ತರುವುದಕ್ಕೆ ಪ್ರಯತ್ನಿಸುವುದು ಮೂರ್ಖತನದ ಪರಮಾವಧಿ. ಇದನ್ನು ಭಾರತೀಯರು ಒಪ್ಪುವುದಿಲ್ಲ ಎಂದು ಮಾಜಿ ಸಚಿವ ಕೃಷ್ಣ ಬೈರೇಗೌಡ ಪ್ರತಿಪಾದಿಸಿದ್ದಾರೆ. ವಿಧಾನಸಭೆಯಲ್ಲಿಂದು ಸಂವಿಧಾನದ ಮೇಲೆ ನಡೆದ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ದೇಶದ ವೈವಿಧ್ಯತೆಯನ್ನು ಸಂಭ್ರಮಿಸಬೇಕೇ ಹೊರತು ಅದಕ್ಕೆ ಧಕ್ಕೆ ತಂದು ಏಕರೂಪತೆ ತರುತ್ತೇವೆ ಎಂಬುದು ಮೂರ್ಖತನ. ಇತ್ತೀಚಿನ ದಿನಗಳಲ್ಲಿ ವೈವಿಧ್ಯತೆ ಮತ್ತು ಸ್ವಾತಂತ್ರ್ಯಕ್ಕೆ ಕುತ್ತು ಬರುತ್ತಿರುವುದು ಕಳಕಳಕಾರಿ ವಿಷಯವಾಗಿದೆ. ದೇಶದ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯಕ್ಕೆ ಕುತ್ತು ಬರುತ್ತಿದ್ದು, ಇದನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದರು.
ಇನ್ನು ಪ್ರಜಾಪ್ರಭುತ್ವವನ್ನು ಮೌಲ್ಯಮಾಪನ ಮಾಡುವ ಅಂತಾರಾಷ್ಟ್ರೀಯ ಸಂಸ್ಥೆಯೊಂದು ಬಿಡುಗಡೆ ಮಾಡಿದ ವರದಿಯ ಪ್ರಕಾರ 2014ರಲ್ಲಿ ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಜಾಗತಿಕ ಮಟ್ಟದಲ್ಲಿ 27ನೇ ಸ್ಥಾನದಲ್ಲಿತ್ತು. ಈಗ ಅದು 51ನೇ ಸ್ಥಾನಕ್ಕೆ ಕುಸಿದಿದೆ ಎಂದರು.








