ಈಗ್ಲೇ ಸಿಎಂ ಅಭ್ಯರ್ಥಿ ಬಗ್ಗೆ ಮಾತನಾಡೋದು ಅಪ್ರಸ್ತುತ : ಚುನಾವಣೆ ನಡೆಯಲಿ ಎಂದ ಸತೀಶ್
ಬೆಳಗಾವಿ : ರಾಜ್ಯದಲ್ಲಿ ಇನ್ನೂ ಚುನಾವಣೆ ಆಗಬೇಕು. ಶಾಸಕರು ಆಯ್ಕೆಯಾಗಬೇಕು.ಈಗ್ಲೇ ಸಿಎಂ ಅಭ್ಯರ್ಥಿ ಬಗ್ಗೆ ಮಾತನಾಡೋದು ಅಪ್ರಸ್ತುತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಚರ್ಚೆ ತೀವ್ರಗೊಂಡಿದೆ. ಈ ಕುರಿತು ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿ, ಇನ್ನೂ ಚುನಾವಣೆ ಆಗಿಲ್ಲ, ಅದು ಯಾವಾಗ ಚುನಾವಣೆ ಬರುತ್ತೋ ಗೊತ್ತಿಲ್ಲ.
ಈಗಲೇ ಸಿಎಂ ಅಭ್ಯರ್ಥಿ ಬಗ್ಗೆ ಮಾತನಾಡೋ ಅವಶ್ಯಕತೆ ಇಲ್ಲ. ಸಿದ್ದರಾಮಯ್ಯ ಮುಂದಿನ ಸಿಎಂ ಅಂತ ಅಭಿಮಾನಿಗಳು ಹೇಳ್ತಾರೆ, ಹೇಳೋದ್ರಲ್ಲಿ ಏನು ತಪ್ಪಿಲ್ಲ. ಅದಕ್ಕೇನು ನಿಬರ್ಂಧ ಹಾಕಕ್ಕಾಗಲ್ಲ ಅದು ಅವರ ಇಷ್ಟ.
ರಾಜ್ಯದಲ್ಲಿ ಇನ್ನೂ ಚುನಾವಣೆ ಆಗಬೇಕು. ಶಾಸಕರು ಆಯ್ಕೆಯಾಗಬೇಕು. ಬಳಿಕ ಹೈಕಮಾಂಡ್ ನಿರ್ಧಾರ ಮಾಡಿದಾಗ ಮುಂದಿನ ಸಿಎಂ ಲೆಕ್ಕಾಚಾರ ನಡೆಯಲಿದೆ. ಆದ್ರೆ, ಈಗ್ಲೇ ಸಿಎಂ ಅಭ್ಯರ್ಥಿ ಬಗ್ಗೆ ಮಾತನಾಡೋದು ಅಪ್ರಸ್ತುತ ಎಂದರು.
ಇದೇ ವೇಳೇ ನೀವು ಸಿಎಂ ರೇಸ್‍ನಲ್ಲಿದ್ದೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ಸತೀಶ್ ಜಾರಕಿಹೊಳಿ, ನಾನು ಸಿಎಂ ರೇಸ್ ನಲ್ಲಿಲ್ಲ ಅಂತಾ ಈಗಾಗಲೇ ಹೇಳಿದ್ದೇನೆ. ಅಭಿಮಾನಿಗಳು ಪ್ರಚಾರ ಮಾಡಿದಾರೆ ಮಾಡಲಿ.
ಈಗ ಅದರ ಬಗ್ಗೆ ಚರ್ಚೆ ಅವಶ್ಯಕತೆ ಇಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಪಕ್ಷದ ವೇದಿಕೆಯಲ್ಲಿ ಆ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಆದ್ರೆ, ಈಗ ಸಿಎಂ ಮಾಡುವ ಪ್ರಶ್ನೆಯೇ ಬರಲ್ಲ ಎಂದರು.