‘ಪುಡಾಂಗ್’ ಎಂದು ನನ್ನ ಬಗ್ಗೆ ಹೇಳಿದ್ದು ಸರಿಯಲ್ಲ : ಜೋಗಿ ಪ್ರೇಮ್
ಬೆಂಗಳೂರು : ದರ್ಶನ್ ನನಗೆ ಹಾಗೂ ರಕ್ಷಿತಾ ಇಬ್ಬರಿಗೂ ಆತ್ಮೀಯ ಸ್ನೇಹಿತ. ಆದರೆ ಆತ ಬಳಸಿದ ಪದ ಪ್ರಯೋಗದಿಂದ ನಮ್ಮಿಬ್ಬರಿಗೂ ಬೇಸರವಾಗಿದೆ ಎಂದು ನಿರ್ದೇಶಕ ಜೋಗಿ ಪ್ರೇಮ್ ಬೇಸರ ಹೊರಹಾಕಿದ್ದಾರೆ.
ನಿನ್ನೆ ನಟ ದರ್ಶನ್ ಮಾತನಾಡುವ ಬರದಲ್ಲಿ ಜೋಗಿ ಪ್ರೇಮ್ ಏನ್ ದೊಡ್ ಪುಡಾಂಗಾ.. ಎರಡು ಕೊಂಬು ಇದ್ಯಾ ಎಂದು ಬಾಯಿ ಜಾರಿದ್ದರು. ಇದಕ್ಕೆ ಸುದ್ದಿಗೋಷ್ಠಿ ನಡೆಸಿ ಬೇಸರ ಹೊರಹಾಕಿರುವ ಜೋಗಿ ಪ್ರೇಮ್, ದರ್ಶನ್ ನನಗೆ ಹಾಗೂ ರಕ್ಷಿತಾ ಇಬ್ಬರಿಗೂ ಆತ್ಮೀಯ ಸ್ನೇಹಿತ. ಆದರೆ ಆತ ಬಳಸಿದ ಪದ ಪ್ರಯೋಗದಿಂದ ನಮ್ಮಿಬ್ಬರಿಗೂ ಬೇಸರವಾಗಿದೆ. ‘ಜೋಗಿ ಪ್ರೇಮ್ ಪುಡಾಂಗು’ ಎಂದು ಹೇಳಿರುವುದು ತುಂಬಾ ಹರ್ಟ್ ಆಗಿದೆ. ಅವರು ಯಾಕೆ ಹಾಗೆ ಹೇಳಿದ್ರು ಎಂದು ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ಉಮಾಪತಿ ಬಗ್ಗೆ ಮಾತನಾಡಿ, ದರ್ಶನ್ ಗೆ ನಿರ್ಮಾಪಕ ಉಮಾಪತಿ ಪರಿಚಯಿಸಿದ್ದೇ ನಾನು. ಅವರಿಬ್ಬರು ಚರ್ಚಿಸಿ ದರ್ಶನ್ ಉಮಾಪತಿಗೆ ಸಿನಿಮಾ ಡೇಟ್ ಕೊಟ್ಟರು. ರಾಬರ್ಟ್ ನಂತಹ ಒಳ್ಳೆಯ ಸಿನಿಮಾ ಮಾಡಿದರು. ಆ ವೇಳೆ ನಾನು ನನ್ನ ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದೆ. ನನ್ನ ದರ್ಶನ್ ಸ್ನೇಹವೇ ಬೇರೆ, ಸಿನಿಮಾನೇ ಬೇರೆ, ಇನ್ನು ನಿರ್ಮಾಪಕರ ಹಾಗೂ ದರ್ಶನ್ ವ್ಯವಹಾರಗಳೇ ಬೇರೆ. ನನಗೂ ಹಾಗೂ ಇತ್ತೀಚಿನ ಅವರ ಘಟನೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.