ನವದೆಹಲಿ: ದಿನದಿಂದ ದಿನಕ್ಕೆ ಭಾರತದಲ್ಲಿ ಸೋಂಕಿನ ಪ್ರಮಾಣ ಹೆಚ್ಚಲು ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ಮಾ.13-15ರವರೆಗೆ ನಡೆದ ಮುಸ್ಲಿಂ ಧಾರ್ಮಿಕ ಸಭೆ ಕಾರಣವಾಗಿದೆ. ಈ ಸಭೆಯಲ್ಲಿ ಭಾಗವಹಿಸಿದ್ದ ಅನೇಕರಲ್ಲಿ ಸೋಂಕು ದೃಢಪಟ್ಟಿದೆ. ಸುಮಾರು 10 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.ಸದ್ಯ ಸಭೆಯಲ್ಲಿ ಭಾಗವಹಿಸಿದ್ದವರನ್ನು ಟ್ರೇಸ್ ಮಾಡುವ ಕೆಲಸವೂ ನಡೆಯುತ್ತಿದೆ.
ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಮುಸ್ಲಿಂ ಸಮುದಾಯಕ್ಕೆ ಸೇರಿದ ಅನೇಕರು ತಮ್ಮ ಮೊಳಕಾಲ ಮೇಲೆ ಕುಳಿತುಕೊಂಡು ಪ್ರಾರ್ಥನೆಯಲ್ಲಿ ತೊಡಗಿರುವ ವಿಡಿಯೋ ಇದಾಗಿದೆ.
ಆದರೆ ವಿಡಿಯೋದಲ್ಲಿ ಅವರ ಉಸಿರಾಟದ ಕ್ರಿಯೆ ವಿಭಿನ್ನವಾಗಿದೆ. ಅವರೆಲ್ಲ ಸೀನುತ್ತಿದ್ದಾರೋ ಎಂಬಂತೆ ಕಾಣಿಸುತ್ತಿದೆ.
ಇದು ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದಿದ್ದು. ಮುಸ್ಲಿಮರು ಪ್ರಾರ್ಥನೆಯ ನೆಪದಲ್ಲಿ ಹೀಗೆ ಗುಂಪಾಗಿ ಸೇರಿ ಬೇಕೆಂದೇ ಸೀನುತ್ತಿದ್ದಾರೆ. ಈ ಮೂಲಕ ಕೊರೊನಾ ವೈರಸನ್ನು ಜಾಸ್ತಿ ಹರಡುತ್ತಿದ್ದಾರೆ ಎಂದು ಟ್ವಿಟ್ಟರ್ ಬಳಕೆದಾರರೋರ್ವರು ಕ್ಯಾಪ್ಷನ್ ಬರೆದಿದ್ದರು. ಜನರೂ ಕೂಡ ಇದು ದೆಹಲಿ ಮಸೀದಿಯಲ್ಲಿ ನಡೆದಿದ್ದು ಎಂದು ನಂಬಿಕೊಂಡಿದ್ದಾರೆ.
https://www.facebook.com/ridouansoumaa77/videos/460559394834182/
ಆದರೆ ಇದು ವಾಸ್ತವ ಅಲ್ಲ. ಸುಳ್ಳು ಮತ್ತು ಹಳೇ ವಿಡಿಯೋ ಎಂಬುದು ಇದೀಗ ಬೆಳಕಿಗೆ ಬಂದಿದೆ. ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ತಬ್ಲಿಘಿ ಜಮಾತ್ ಸಮಾವೇಶ ನಡೆಯುವುದಕ್ಕೂ ಮೊದಲಿನಿಂದಲೇ ವಿಡಿಯೋ ವೈರಲ್ ಆಗುತ್ತಿದೆ. ರಿಡೋವಾನ್ ಸೌಮಾ ಎಂಬುವರ ಫೇಸ್ ಬುಕ್ ನಲ್ಲಿ 2020ರ ಜನವರಿ 29ರಂದು ಈ ವಿಡಿಯೋ ಪೋಸ್ಟ್ ಆಗಿದೆ ಎಂದು ಇಂಡಿಯಾ ಟುಡೆ ಫ್ಯಾಕ್ಟ್ ಚೆಕ್ ನಲ್ಲಿ ತಿಳಿದುಬಂದಿದೆ.
ಅವರೆಲ್ಲ ಸೀನುತ್ತಿಲ್ಲ..! ಅದು ಪ್ರಾರ್ಥನೆ!
ವಿಡಿಯೋದಲ್ಲಿ ಪ್ರಾರ್ಥನೆ ಮಾಡುತ್ತಿರುವವರೆಲ್ಲಾ ಸೀನುತ್ತಿರುವಾಗೆ ಕಾಣಿಸುತ್ತೆ. ಆದರೆ ಇವರೆಲ್ಲ ಸೀನುತ್ತಿಲ್ಲ. ಬದಲಿಗೆ ಅದೂ ಕೂಡ ಪ್ರಾರ್ಥನೆಯ ಒಂದು ಕ್ರಮ. ಸೂಫಿ ಪಂಥಕ್ಕೆ ಸೇರಿದವರ ಈ ರೀತಿಯ ಪ್ರಾರ್ಥನಾ ಕ್ರಮಕ್ಕೆ ಜಿಕಿರ್ ಎಂದು ಕರೆಯಲಾಗುತ್ತದೆ.








