ಬೆಳಗಾವಿ : ಕಾಂಗ್ರೆಸ್ ಪಕ್ಷದಲ್ಲಿ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಬಣ ಇರುವುದು ಸತ್ಯ. ಆದ್ರೆ ಭಿನ್ನಾಭಿಪ್ರಾಯಗಳಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮನೆ ಎಂದ ಮೇಲೆ ಕೆಲವರಲ್ಲಿ ವೈಮನಸ್ಸು ಇರುವುದು ಸಹಜ. ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಗಾಗಿ ಗುಂಪುಗಾರಿಕೆ ನಡೆಯುತ್ತದೆ. ಸಿದ್ದರಾಮಯ್ಯ ಬಣ, ಡಿ.ಕೆ.ಶಿವಕುಮಾರ ಬಣ ಇರುವುದು ಸತ್ಯ. ಆದರೆ ಪಕ್ಷದ ವಿಚಾರ ಬಂದಾಗ ಎಲ್ಲರೂ ಒಂದಾಗುತ್ತೇವೆ ಎಂದರು.
ಕಾರ್ಯಾಧ್ಯಕ್ಷರಿಂದ ಡಿಕೆಶಿಗೆ ಪೂರ್ಣ ಸಹಕಾರ
ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಬಗ್ಗೆ ಎಲ್ಲರ ಬಹುದಿನಗಳ ಕಾತುರತೆಯಿತ್ತು. ಹೈಕಮಾಂಡ್ ಇದನ್ನು ಗಂಭೀರವಾಗಿ ಪರಿಗಣಿಸಿ ಒಬ್ಬ ಅಧ್ಯಕ್ಷ ಹಾಗೂ ಮೂವರನ್ನು ಕಾರ್ಯಾಧ್ಯಕ್ಷರ ನೇಮಕ ಮಾಡಿದೆ . ನನಗೆ ಕಾರ್ಯಾಧ್ಯಕ್ಷ ಹುದ್ದೆ ನೀಡಿದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ ನವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು. ಇನ್ನು ಪಕ್ಷದ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರಲ್ಲಿ ಉತ್ಸಾಹ ಇದೆ. ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮೂವರು ಕಾರ್ಯಾಧ್ಯಕ್ಷರು ಕೆಪಿಸಿಸಿ ಅಧ್ಯಕ್ಷರಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು.