ಬೆಂಗಳೂರು : ರಾಜ್ಯಸಭೆ ಚುನಾವಣೆ ಹತ್ತಿರ ಬರುತ್ತಿದಂತೆ ಕಾಂಗ್ರೆಸ್ ವಲಯದಲ್ಲಿ ಟಿಕೆಟ್ ಕೇಳುವವರ ಪಟ್ಟಿ ಬೆಳೆಯುತ್ತಲೇ ಇದೆ. ಜೊತೆಗೆ ಟಿಕೆಟ್ ಆಕಾಂಕ್ಷಿಗಳ ಪರ ಬ್ಯಾಟಿಂಗ್ ಮಾಡುವವರ ಸಂಖ್ಯೆ ಕಾಂಗ್ರೆಸ್ ನಲ್ಲಿ ಹೆಚ್ಚಾಗಿದೆ. ಅಚ್ಚರಿ ಎಂದರೆ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪ ಕಾಂಗ್ರೆಸ್ ಪರ ಬ್ಯಾಟಿಂಗ್ ಮಾಡದೇ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಪರ ಬ್ಯಾಟಿಂಗ್ ಮಾಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಹೆಚ್.ಮುನಿಯಪ್ಪ, ಹೆಚ್. ಡಿ. ದೇವೇಗೌಡರು ಎಂದಿಗೂ ಹಿಂಬಾಗಿಲಲ್ಲಿ ರಾಜಕಾರಣ ಮಾಡಿದ್ದವರಲ್ಲ. ಅಲ್ಲದೆ ಜೆಡಿಎಸ್ – ಕಾಂಗ್ರೆಸ್ ಈ ಹಿಂದೆ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿತ್ತು. ಇದೀಗ ಅಂತದೊಂದು ಅವಕಾಶ ಮತ್ತೆ ಬಂದಿದೆ. ಹಾಗಾಗಿ ದೇವೇಗೌಡರಿಗೆ ಕಾಂಗ್ರೆಸ್ ಹೈಕಮಾಂಡ್ ಅವಕಾಶ ಮಾಡಿಕೊಡಬೇಕು. ಮಾಡಿಕೊಡಬೇಕು. ಮಲ್ಲಿಕಾರ್ಜುನ ಖರ್ಗೆ, ದೇವೇಗೌಡರು ಇಬ್ಬರು ಹಿರಿಯ ನಾಯಕರು. ಇಬ್ಬರು ರಾಜ್ಯಸಭೆಯಲ್ಲಿ ಇದ್ದರೆ ಉತ್ತಮವಾಗಿರುತ್ತದೆ.
ಇದೆ ವೇಳೆ, ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆ ಪ್ರವೇಶದ ಬಗ್ಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ದಲಿತ ಸಮುದಾಯದ ಪ್ರಶ್ನಾತೀತ ನಾಯಕರು. ಅವರಿಗೆ ಟಿಕೆಟ್ ನೀಡಲು ಯಾರಾದರೂ ವಿರೋಧ ಮಾಡುತ್ತಾರಾ ಎಂದು ಹೇಳಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರು ಹಿರಿಯರು, ಹರಿಪ್ರಸಾದ್, ರಾಜೀವ್ ಗೌಡ ಯಾರೇ ಆಗಲಿ, ನಾವು ಸಲಹೆಯನ್ನ ಕೊಡುವುದಕ್ಕೂ ಅವಕಾಶವಿಲ್ಲ. ಎಲ್ಲವೂ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡುತ್ತದೆ.
ಟಿಕೆಟ್ ಕೊಡುವ ವೇಳೆ ಪಕ್ಷದ ನಿಷ್ಟಾವಂತರಿಗೆ ಕೊಡಬೇಕು. ನಮಗೆ ಎರಡು ಸೀಟು ಸಿಗುವ ವಿಶ್ವಾಸವಿದೆ. ನಿಷ್ಟಾವಂತರನ್ನ ಗುರುತಿಸಿ ಟಿಕೆಟ್ ನೀಡಿದರೇ ಕಾರ್ಯಕರ್ತರಿಗೆ ಹುಮ್ಮಸ್ಸು ಬರುತ್ತದೆ. ಹಾಗಾಗಿ ಈ ವಿಚಾರವನ್ನು ಅಧ್ಯಕ್ಷರ ಗಮನಕ್ಕೆ ತಂದಿದ್ದೇನೆ. ಪಕ್ಷ ವಿರೋಧಿ ಧೋರಣೆ ತೋರಿದವರಿಗೆ ನೀಡಬಾರದು ಎಂದು ಹೇಳಿದ್ದೇನೆ ಎಂದರು. ಸಿದ್ದರಾಮಯ್ಯ ಬೇರೆ ಅಲ್ಲ,ಡಿ ಕೆ ಶಿವಕುಮಾರ್ ಬೇರೆ ಅಲ್ಲ. ಇಬ್ಬರೂ ಸೇರಿಯೇ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು.