ದೇಶೀಯ ಕ್ರಿಕೆಟರ್ಗಳಿಗೆ ಜಾಕ್ಪಾಟ್, ಸಂಭಾವನೆಯನ್ನು ಏರಿಸಿದ ಬಿಸಿಸಿಐ
ಭಾರತದ ದೇಶೀಯ ಕ್ರಿಕೆಟರ್ಗಳು ಕೋಟ್ಯಾಧಿಪತಿಗಳು ಅನ್ನುವ ಮಾತಿದೆ. ಉಳಿದ ದೇಶಗಳ ದೇಶೀಯ ಕ್ರಿಕೆಟಿಗರ ಸ್ಥಿತಿ ನೋಡಿದ್ರೆ ಅದು ನಿಜವೂ ಹೌದು. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾದ ಅಂತರಾಷ್ಟ್ರೀಯ ಕ್ರಿಕೆಟರ್ಗಳಿಗಿಂತ ನಮ್ಮ ದೇಶೀಯ ಕ್ರಿಕೆಟ್ ಆಡುವ ಆಟಗಾರರ ವೇತನ ಹೆಚ್ಚಿದೆ. ಈಗ ಬಿಸಿಸಿಐ ಮತ್ತೊಮ್ಮೆ ದೇಶೀಯ ಕ್ರಿಕೆಟಿಗರ ವೇತನವನ್ನು ಪರಿಷ್ಕರಿಸಿದೆ. ಎಲ್ಲಾ ವಯೋಮಿತಿಯ ಮತ್ತು ಮಹಿಳಾ ಕ್ರಿಕೆಟಿಗರಿಗೆ ಅನ್ವಯವಾಗುವಂತೆ ಸಂಭಾವನೆಯನ್ನು ಹೆಚ್ಚಿಸಿದೆ. ಕಳೆದ ವರ್ಷ ಕೊರೊನಾದಿಂದಾಗಿ ದೇಶೀಯ ಕ್ರಿಕೆಟ್ ಟೂರ್ನಿಗಳು ನಡೆದಿಲ್ಲ. ಹೀಗಾಗಿ 2019-20ರ ಸೀಸನ್ನಲ್ಲಿ ಆಡಿದ ಎಲ್ಲಾ ಆಟಗಾರರಿಗೆ ಆಗಿನ ಲೆಕ್ಕಾಚಾರದಂತೆ ಶೇಕಡಾ 50ರಷ್ಟು ಪಂದ್ಯ ಸಂಭಾವನೆ ನೀಡಲು ಬಿಸಿಸಿಐ ಒಪ್ಪಿಗೆ ಸೂಚಿಸಿದೆ.
ಈ ಹಿಂದೆ ದೇಶೀಯ ಕ್ರಿಕೆಟ್ ಆಡುವ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದ ಆಟಗಾರರಿಗೆ ಪ್ರತಿದಿನಕ್ಕೆ 35000 ರೂಪಾಯಿ ಸಭಾವನೆ ಸಿಗುತ್ತಿತ್ತು. ರಿಸರ್ವ್ ಆಟಗಾರನಿಗೆ 17500 ರೂಪಾಯಿ ಸಿಗುತ್ತಿತ್ತು. ಆದ್ರೆ ಈಗ ಇದನ್ನು ಬದಲಿಸಲಾಗಿದೆ. ಹೊಸ ನಿಯಮದಂತೆ 20 ಪಂದ್ಯಗಳನ್ನು ಆಡಿದ ಆಟಗಾರ ಪ್ಲೇಯಿಂಗ್ IXನಲ್ಲಿ ಸ್ಥಾನ ಪಡೆದರೆ ದಿನವೊಂದಕ್ಕೆ 40,000 ರೂಪಾಯಿ ವೇತನ ಪಡೆಯುತ್ತಾನೆ ರಿಸರ್ವ್ ಆಟಗಾರನ ಸಂಭಾವನೆ 20,000 ಆಗಿರಲಿದೆ. 21 ರಿಂದ 40 ಪಂದ್ಯಗಳನ್ನು ಆಡಿರುವ ಅನುಭವಿ ಪ್ಲೇಯಿಂಗ್ IX ನಲ್ಲಿದ್ದರೆ ಆತನ ಪ್ರತಿದಿನದ ಸಂಭಾವನೆ 50,000 ರೂಪಾಯಿ ಆಗಿರಲಿದೆ. ಈ ಕೆಟಗರಿಯ ರಿಸರ್ವ್ ಆಟಗಾರ 25,000 ರೂಪಾಯಿ ಸಂಭಾವನೆ ಪಡೆಯಲಿದ್ದಾನೆ. 40ಕ್ಕಿಂತ ಹೆಚ್ಚು ಪಂದ್ಯ ಆಡಿದ ಅನುಭವಿ ಪ್ಲೇಯಿಂಗ್ IXನಲ್ಲಿದ್ದರೆ ಆತನ ದಿನದ ಸಂಭಾವನೆ 60,000 ರೂಪಾಯಿ ಆಗಿರಲಿದೆ. ಈ ಕೆಟಗರಿಯ ರಿಸರ್ವ್ ಪ್ಲೇಯರ್ ಪ್ರತಿದಿನ 30,000 ರೂಪಾಯಿ ಸಂಭಾವನೆ ಪಡೆಯುತ್ತಾನೆ.
ಈ ಹಿಂದೆ ಪ್ಲೇಯಿಂಗ್ IXನಲ್ಲಿದ್ದ ಸದಸ್ಯರು ಒಂದು ರಣಜಿ ಪಂದ್ಯಕ್ಕಾಗಿ 1 ಲಕ್ಷದ 40 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ರಿಸರ್ವ್ ಆಟಗಾರರು 70 ಸಾವಿರ ರೂಪಾಯಿ ಪಡೆಯುತ್ತಿದ್ದರು. ಹೊಸ ವೇತನದ ಪ್ರಕಾರ ಮೊದಲ ಕೆಟರಿಯ ಆಟಗಾರ ಪ್ಲೇಯಿಂಗ್ IXನಲ್ಲಿದ್ದರೆ 1ಲಕ್ಷದ 60 ಸಾವಿರ ರೂಪಾಯಿ ಪಡೆಯುತ್ತಾನೆ. ರಿಸರ್ವ್ ಪ್ಲೇಯರ್ ಆಗಿದ್ದ 80 ಸಾವಿರ ರೂಪಾಯಿ ಸಿಗುತ್ತದೆ. 21 ರಿಂದ 40 ಪಂದ್ಯಗಳನ್ನಾಡಿದ ಅನುಭವಿ ಪ್ಲೇಯಿಂಗ್ IXನಲ್ಲಿದ್ದರೆ ಒಂದು ರಣಜಿ ಪಂದ್ಯಕ್ಕಾಗಿ 2 ಲಕ್ಷ ರೂಪಾಯಿ ಸಂಭಾವನೆ ಸಿಗುತ್ತದೆ. ರಿಸರ್ವ್ ಆಟಗಾರನಾಗಿದ್ದರೆ 1 ಲಕ್ಷ ರೂಪಾಯಿ ಸಿಗುತ್ತದೆ. 40ಕ್ಕಿಂತ ಹೆಚ್ಚು ಪಂದ್ಯಗಳನ್ನಾಡಿದ ಆಟಗಾರ ಪ್ಲೇಯಿಂಗ್ IXನಲ್ಲಿದ್ದರೆ ಒಂದು ರಣಜಿ ಪಂದ್ಯದ ಸಂಭಾವನೆಯಾಗಿ 2 ಲಕ್ಷದ 40 ಸಾವಿರ ರೂಪಾಯಿ ಪಡೆಯುತ್ತಾನೆ. ಈ ಕೆಟಗರಿಯ ರಿಸರ್ವ್ ಪ್ಲೇಯರ್ 1 ಲಕ್ಷದ 20 ಸಾವಿರ ರೂಪಾಯಿ ಪಡೆಯುತ್ತಾನೆ.
ಇದರ ಜೊತೆಗೆ ಅಂಡರ್ 25 ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಆಟಗಾರರ ವೇತನವೂ ಪರಿಷ್ಕರಣೆಗೊಂಡಿದೆ. ಅಂಡರ್ 25ನ ಪ್ಲೇಯಿಂಗ್ IX ನಲ್ಲಿ ಸ್ಥಾನ ಪಡೆಯುವ ಆಟಗಾರ ದಿನದ ಭತ್ಯೆಯಾಗಿ 25 ಸಾವಿರ ರೂಪಾಯಿ ಪಡೆಯಲಿದ್ದಾನೆ. ರಿಸರ್ವ್ ಆಟಗಾರನ ಸಂಭಾವನೆ 12 ಸಾವಿರದ 500 ರೂಪಾಯಿ ಆಗಿರಲಿದೆ. ಅಂಡರ್ 16 ಮತ್ತು ಅಂಡರ್ 19 ಆಟಗಾರರ ವೇತನವೂ ಹೆಚ್ಚಳವಾಗಿದೆ.
ಮಹಿಳಾ ಕ್ರಿಕಟರ್ಗಳ ವೇತನದಲ್ಲೂ ಏರಿಕೆಯಾಗಿದೆ. ಸೀನಿಯರ್ ಮಹಿಳಾ ಕ್ರಿಕೆಟರ್ಗಳು ಪ್ಲೇಯಿಂಗ್ IXನಲ್ಲಿದ್ದರೆ ಪ್ರತಿದಿನಕ್ಕೆ 20 ಸಾವಿರ ಸಂಭಾವನೆಯಲ್ಲಿದ್ದಾರೆ. ರಿಸರ್ವ್ ಆಟಗಾರ್ತಿಯರು 10 ಸಾವಿರ ಸಂಭಾವನೆಯ ಪಡೆಯಲಿದ್ದಾರೆ. ಅಂಡರ್ 19 ಮತ್ತು ಅಂಡರ್ 16 ಮಹಿಳಾ ಕ್ರಿಕೆಟರ್ಗಳ ಸಂಭಾವನೆಯಲ್ಲೂ ಏರಿಕೆ ಮಾಡಲಾಗಿದೆ. ಒಟ್ಟಿನಲ್ಲಿ ಬಿಸಿಸಿಐ ತನ್ನ ಸಂಪಾದನೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಜೊತೆಗೆ ಆಟಗಾರರ ಸಂಪಾದನೆಯನ್ನು ಕೂಡ ಏರಿಕೆ ಮಾಡುತ್ತಿದೆ.









