Jallian Walabagh | ಮತ್ತೆ ನೆನಪಾಯ್ತು ದಕ್ಷಿಣ ಭಾರತದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ
ಬ್ರಿಟಿಷರ ಕಪಿ ಮುಷ್ಠಿಯಿಂದ ಭಾರತ ದೇಶಕ್ಕೆ 1947ರ ಅಗಷ್ಟ 15 ರಂದು ಸ್ವಾತಂತ್ರ್ಯ ಸಿಕ್ಕಿತ್ತು. ಇಡೀ ಭಾರತ ಸ್ವಾತಂತ್ರ್ಯ ದಕ್ಕಿರುವ ಸಡಗರದಲ್ಲಿದ್ದರೇ ಇಂದಿನ ಕಲ್ಯಾಣ ಕರ್ನಾಟಕ ಅಂದಿನ ಹೈದ್ರಾಬಾದ್ ಕರ್ನಾಟಕ ಭಾಗದ ಜನರು ಸ್ವಾತಂತ್ರ್ಯಕ್ಕಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದರು. ಇಂದಿನ ಕಲ್ಯಾಣ ಕರ್ನಾಟಕ ಭಾಗ ಅಂದು ಹೈದ್ರಾಬಾದ್ ನಿಜಾಮರ ಕಪ್ಪಿಮುಷ್ಠಿಯಿಂದ ಹೊರಗಡೆ ಬರಲು 13 ತಿಂಗಳುಗಳ ಕಾಲ ನಿಜಾಮರ ಎದುರು ಹೊರಾಡಿ ರಕ್ತ ಹರಿಸಬೇಕಾಯಿತು. ಬ್ರಿಟಿಷರಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದರೂ ಹೈದ್ರಾಬಾದ್ ನಿಜಾಮ ಕರ್ನಾಟಕದ ಏಳು ಜಿಲ್ಲೆಗಳು ತನ್ನ ಕಪ್ಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದ. ಇದರಿಂದ ಹೊರಗಡೆ ಬರಲು ಬೀದರ್ ಜಿಲ್ಲೆಯಲ್ಲಿ ನೂರಾರು ಜನ ಹುತಾತ್ಮರಾಗಿದ್ದರು. ಇಡೀ ಭಾರತ ದೇಶ ತಿರಂಗಾ ಹಾರಿಸಿ ಸಂಭ್ರಮಿಸುತ್ತಿದ್ದರೆ ಬೀದರ್ ನಲ್ಲಿ ಮಾತ್ರ ಭಾರತ ಧ್ವಜ ಹಾರಿಸಿದ್ದವರನ್ನು ಹತ್ಯೆ ಮಾಡಲಾಗುತ್ತಿತ್ತು. ನಿಜಾಮರ ಕಪಿ ಮುಷ್ಠಿಯಿಂದ ಹೈ – ಕರ್ನಾಟಕ ಮುಕ್ತಿ ಪಡೆಯಲು 13 ತಿಂಗಳು ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮವೇ ಮಾಡಬೇಕಾಯಿತು. ಜಲಿಯನವಾಲಾ ಬಾಗ ಹತ್ಯಾಕಾಂಡದಂತೆ ಮಾದರಿಯಲ್ಲೇ ದಕ್ಷಿಣ ಭಾರತದಲ್ಲಿ ಮತ್ತೊಂದು ಮಾರಣಹೋಮದಂತೆ ಬೀದರ ಜಿಲ್ಲೆಯ ಗೋರ್ಟಾ ಎಂಬ ಗ್ರಾಮದ ಲಕ್ಷ್ಮಿ ದೇಗುಲ ಎದುರು ರಕ್ತದೋಕುಳಿ ಹರಿಸಿದ್ದರು ನಿಜಾಮರು.
ಹೌದು, ಮತ್ತೆ ನೆನಪಾಯ್ತು ದಕ್ಷಿಣ ಭಾರತದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಎಂದೇ ಕರೆಯಲ್ಪಡುವ ಬೀದರ್ ಜಿಲ್ಲೆಯ ಗೋರ್ಟಾ ಗ್ರಾಮದ ಡುಮಣೆ ಸಾಹುಕಾರ್ ಮನೆ ಹಾಗೂ ಶ್ರೀ ಲಕ್ಷ್ಮೀ ಮಂದಿರ ಹತ್ಯಾಕಾಂಡದ ಘನ ಸಾಕ್ಷಿಗಳು !
ದೇಶವೇನೋ ೧೯೪೭ರಲ್ಲಿ ಬ್ರಿಟಿಷರ ಪಾರುಪತ್ಯದಿಂದ ಮುಕ್ತಿಗೊಂಡಿತ್ತು. ಆದರೆ, ಕಲ್ಯಾಣ ಕರ್ನಾಟಕದ ಬಹುಭಾಗ ಇನ್ನೂ ಹೈದ್ರಾಬಾದ್ ನಿಜಾಂ ಆಳ್ವಿಕೆಗೊಳಪಟ್ಟಿತು. ಆಗ ಒಳಗೊಳಗೆ ನಿಜಾಂನ ವಿರುದ್ದ ನಡೆಯುತ್ತಿರುವ ಹೋರಾಟದ ಭಾಗವಾಗಿ ಗೋರ್ಟಾ ಗ್ರಾಮದಲ್ಲಿ ಹೋರಾಟಗಾರರ ಹೆಡೆಮುರಿ ಕಟ್ಟಲು ನಿಜಾಂನ ರಜಾಕಾರರು ನಡೆಸಿದ ಸಾಮೂಹಿಕ ಹತ್ಯಾಕಾಂಡವೇ ದಕ್ಷಿಣ ಭಾರತದ ಜಲಿಯನ್ ವಾಲಬಾಗ್ ಹತ್ಯಾಕಾಂಡ.
೧೯೪೮ರ ಮೇ ತಿಂಗಳಲ್ಲಿ ರಜಾಕಾರರ ಗ್ಯಾಂಗ್ ಗೋರ್ಟಾ ಗ್ರಾಮಕ್ಕೆ ದಾಳಿ ಇಡುತ್ತದೆ. ದಾಳಿಯಿಂದ ಬಚಾವಾಗಲು ಡುಮಣೆ ಸಾಹುಕಾರ ಮನೆಯೊಳಗೆ ಕನಿಷ್ಟ ೨೦೦೦ ಜನ ಅಡಗಿದ್ದರು. ಆಗ ಎರಡು ಕಡೆಯಿಂದ ದಂಗೆ ನಡೆದು ಕನಿಷ್ಟ ೨೦೦ ಜನರ ಸಾಮೂಹಿಕ ಹತ್ಯಾಕಾಂಡ ನಡೆಯಿತು ಎನ್ನುತ್ತಾರೆ ಗ್ರಾಮದ ನಿವೃತ ಶಿಕ್ಷಕ ಸುಭಾಷ್ ಪತಂಗೆ.

ಆಗಿನ ಕೇಂದ್ರ ಗ್ರಹ ಸಚಿವ ಸರ್ದಾರ ವಲ್ಲಭಭಾಯಿ ಪಟೇಲ್ ಅವರ ದೃಡನಿರ್ಧಾರದಿಂದ 1948ರ ಸಪ್ಟೆಂಬರ್ 17ರಂದು ನಿಜಾಮರು ಭಾರತದ ಸೈನಿಕರ ಎದುರು ಮಂಡಿಯೂರಿದ್ದರು. ಸತತ 13 ತಿಂಗಳ ಹೋರಾಟದ ಫಲವಾಗಿ ತಡವಾಗಿ ಈ ಭಾಗಕ್ಕೆ ಸ್ವಾತಂತ್ರ್ಯ ದಕ್ಕಿತ್ತು. ಆದರೆ ಆ ಹುತಾತ್ಮರಿಗೆ ನ್ಯಾಯ ಕೊಡಿಸುತ್ತೇವೆ ಅಂತ ಬಂದ ಬಿಜೆಪಿ ನಾಯಕರು ಕಾಣೆಯಾಗಿದ್ದಾರೆ. ಸರ್ದಾರ ವಲ್ಲಭಭಾಯಿ ಪಟೇಲ್ ಮೂರ್ತಿ, ಹುತಾತ್ಮರ ಸ್ಮಾರಕಗಳು ನಿರ್ಮಿಸುತ್ತೇವೆಂದು 2014ರ ಲೋಕಸಭಾ ಚುನಾವಣೆ ವೇಳೆ ಜಿಲ್ಲೆಯ ಗೋರ್ಟಾ ಗ್ರಾಮಕ್ಕೆ ಬಂದು ಸ್ಮಾರಕ ನಿರ್ಮಾಣ ಮಾಡಲು ಭೂಮಿ ಪೂಜೆ ಮಾಡಿದ್ದರು.
ಯುವ ಮೋರ್ಚದಿಂದ ರಾಜ್ಯದಾದ್ಯಂತ 26 ಲಕ್ಷಕ್ಕೂ ಅಧಿಕ ದೇಣಿಗೆ ಸಂಗ್ರಹ ಮಾಡಲಾಯಿತು. ಗೋರಟಾದಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಸ್ಮಾರಕ ನಿರ್ಮಾಣಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ ಅಮಿತ್ ಶಾ 2014ರಲ್ಲಿ ಶಂಕುಸ್ಥಾಪನೆ ಮಾಡಿದ್ದರು. ದ್ವಜ ಸ್ತಂಭ ಮತ್ತು ಜ್ಯೋತಿ ಸ್ಥಂಭ ಬಿಟ್ಟರೆ ಉಳಿದ ಕಾಮಗಾರಿ ಆರಂಭವೇ ಆಗಿಲ್ಲ. ಬೆಳಗಾವಿಯಲ್ಲಿ ಸರ್ಧಾರ ವಲ್ಲಭಭಾಯಿ ಪಟೇಲ್ ಅವರ ಮೂರ್ತಿ ಸಿದ್ಧವಾದರೂ ಅದನ್ನು ಗೋರಟಾಕ್ಕೆ ತರಲು ಬಿಜೆಪಿ ಮುಖಂಡರು ಆಸಕ್ತಿ ತೋರುತ್ತಿಲ್ಲ.
ಆದರೆ ಬಿಜೆಪಿ ನಾಯಕರ ಒಳ ಜಗಳದಿಂದ ಸ್ಮಾರಕ ಕಾರ್ಯ ಅರ್ದಕ್ಕೆ ನಿಂತಿದ್ದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದವರಿಗೆ ಅವಮಾನ ಮಾಡಿದಂತಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.