ಚಿಕ್ಕಮಗಳೂರು : ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮಾತಿಗೆ ತಕ್ಕಂತೆ ನಡೆಯೋದಾದ್ರೆ ಅವರು ಈಗ ಸಿಎಂ ಬಿಎಸ್ ಯಡಿಯೂರಪ್ಪ ಮನೆ ಮುಂದೆ ವಾಚ್ ಮ್ಯಾನ್ ಆಗಿ ಇರುತ್ತಿದ್ದರು ಎಂದು ಸಿ.ಟಿ ರವಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಆರೋಪ ಸಾಬೀತಾದರೆ ನನ್ನ ಸಂಪೂರ್ಣ ಆಸ್ತಿಯನ್ನು ಸರ್ಕಾರಕ್ಕೆ ಬರೆದು ಕೊಡುತ್ತೇನೆ ಎಂಬ ಜಮೀರ್ ಹೇಳಿಕೆ ಪ್ರತಿಕ್ರಿಸಿದ ಸಿ.ಟಿ ರವಿ, ಯಡಿಯೂರಪ್ಪ ಸಿಎಂ ಆದರೆ ನಾನು ಅವರ ಮನೆ ಮುಂದೆ ವಾಚ್ಮ್ಯಾನ್ ಆಗುತ್ತೇನೆ ಎಂದು ಶಾಸಕ ಜಮೀರ್ ಅಹ್ಮದ್ ಹೇಳಿದ್ದರು. ಮಾತಿಗೆ ತಕ್ಕಂತೆ ನಡೆಯೋದಾದ್ರೆ ಅವರು ಸಿಎಂ ಮನೆ ಮುಂದೆ ವಾಚ್ಮ್ಯಾನ್ ಆಗಿ ಇರುತ್ತಿದ್ದರು. ಎಂಎಲ್ ಎ ಆಗುತ್ತಿರಲಿಲ್ಲ. ಆಸ್ತಿ ಬರೆದುಕೊಡುತ್ತೇನೆ ಅನ್ನೋದು ಪ್ರಚಾರದ ಮಾತು. ಆಸ್ತಿ ಬರೆಯಲಿ, ಬಿಡಲಿ. ಆದರೆ, ಯಾರ್ಯಾರು ಈ ಡ್ರಗ್ಸ್ ಮಾಫಿಯಾದಲ್ಲಿ ತೊಡಗಿದ್ದಾರೆ ಅವರನ್ನು ಬೇರು ಸಮೇತ ಕಿತ್ತು ಹಾಕುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತೆ. ಇಷ್ಟು ಗಂಭೀರ ತನಿಖೆ ಇದೇ ಮೊದಲು ನಡೆಯುತ್ತಿರುವುದು. ಈ ಬಗ್ಗೆ ತನಿಖೆ ಗಂಭೀರವಾಗಿ ನಡೆಯುತ್ತಿದೆ ಎಂದರು.
ನಂತರ ಪ್ರಮೋದ್ ಮುತಾಲಿಕ್ ರ ಜಿಹಾದ್ ಹೇಳಿಕೆ ಬಗ್ಗೆ ಮಾತನಾಡಿ, ಜಿಹಾದ್ ಗೆ ಹಲವು ಮುಖಗಳಿವೆ. ಅದರಲ್ಲಿ ಡ್ರಗ್ಸ್ ಮಾಫಿಯಾ ಕೂಡ ಇರಬಹುದು. ಪ್ರಮೋದ್ ಮುತಾಲಿಕ್ ಹುಡುಗಾಟದ ಹೇಳಿಕೆ ಕೊಡುವವರಲ್ಲ. ಅವರ ಹೇಳಿಕೆಯಲ್ಲಿ ಗಂಭೀರತೆ ಇರುತ್ತೆ ಎಂದು ಭಾವಿಸಿದ್ದೇನೆ. ಈಗ ತನಿಖೆ ಗಂಭೀರವಾಗಿ ನಡೆಯುತ್ತಿದೆ. ಹಲವು ಆಯಾಮಗಳಲ್ಲಿ ಭಯೋತ್ಪಾದಕ ಚಟುವಟಿಕೆಗೆ ಹಣ ಪೂರೈಕೆ ಸಂಬಂಧದ ಬಗ್ಗೆಯೂ ಸಂಶಯವಿದೆ.ಲವ್ ಜಿಹಾದ್ ಬಗ್ಗೆ ಸಂಸದರು, ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಹವಾಲ ಹಣದ ಬಗ್ಗೆಯೂ ಸಂಶಯವಿದೆ. ಎಲ್ಲವೂ ಕೂಡ ತನಿಖೆ ಹಂತದಲ್ಲಿದೆ. ರಾಜೀ ಇಲ್ಲದ ಕಾರಣ ತನಿಖೆ ಗಂಭೀರ ಸ್ವರೂಪ ಪಡೆದಿದೆ ಎಂದರು.
https://youtu.be/d0E5xnURqcg








