ಶ್ರೀನಗರ: ಜಮ್ಮು ವಿನಲ್ಲಿನ ಭಾರತ ಮತ್ತು ಪಾಕಿಸ್ತಾನ ಗಡಿ ಭಾಗದಲ್ಲಿ ಸುರಂಗ ಮಾರ್ಗ ಪತ್ತೆಯಾಗಿದೆ. ಗಡಿಗೆ ಹೊಂದಿಕೊಂಡಿರುವಂತಹ ಸುರಂಗ ಮಾರ್ಗವೊಂದನ್ನು ಬಿಎಸ್‌ಎಫ್ ಪತ್ತೆ ಹಚ್ಚಿದೆ. ಇನ್ನೂ ಈ ಸುರಂಗ ಮಾರ್ಗದ ಮೂಲಕ ಉಗ್ರರು ಒಳನುಸುಳುತ್ತಿದ್ದು, ಮಾದಕವಸ್ತುಗಳ ಸಾಗಾಟಕ್ಕೆ ಬಳಕೆ ಮಾಡಲಾಗುತಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಇತ್ತ ಸುರಂಗ ಮಾರ್ಗ ಪತ್ತೆಯಾದ ಬೆನ್ನಲ್ಲೇ ಬಿಎಸ್‌ಎಫ್ ಮಹಾಪ್ರಧಾನ ನಿರ್ದೇಶಕ ರಾಕೇಶ್ ಆಸ್ತಾನಾ ಅವರು, ಗಡಿಯುದ್ದಕ್ಕೂ ಒಳನುಸುಳುವಿಕೆಗೆ ಯಾವುದೇ ಆಸ್ಪದ ಇಲ್ಲದಂತೆ ಎಚ್ಚರ ವಹಿಸಬೇಕು ಎಂದು ಕಮಾಂಡರ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಗಡಿರೇಖೆಯಿಂದ ಸುಮಾರು 50 ಮೀಟರ್ ದೂರದಲ್ಲಿ, ಭಾರತದ ಭೂಪ್ರದೇಶದಲ್ಲಿ ಸುರಂಗ ಪತ್ತೆಯಾಗಿದ್ದು, ಗುರುವಾರ ಬೆಳಿಗ್ಗೆ ಸಾಂಬಾ ವಲಯದಲ್ಲಿ ಗಸ್ತು ಸೇವೆಯಲ್ಲಿದ್ದ ಬಿಎಸ್‌ಎಫ್ ಸಿಬ್ಬಂದಿ ಗುರುತಿಸಿದ್ದಾರೆ. ಇನ್ನ ಈ ಸುರಂಗ ಮಾರ್ಗವನ್ನು ಮರಳಿನ ಮೂಟೆಗಳಿಂದ ಮುಚ್ಚಲಾಗಿತ್ತು. ಅಷ್ಟೇ ಅಲ್ಲ ಅವುಗಳ ಮೇಲೆ ಪಾಕಿಸ್ತಾನದ ಚಿಹ್ನೆಗಳಿರುವುದು ಬೆಳಕಿಗೆ ಬಂದಿದೆ.ಇನ್ನೂ ಆಘಾತಕಾರಿ ವಿಚಾರವೆಂದರೆ ಈ ಸುರಂಗ ಮಾರ್ಗ ಬರೋಬ್ಬರಿ 20 ಮೀಟರ್ ಉದ್ದ, 25 ಅಡಿ ಆಳವಿದ್ದು, ನಿರ್ಮಾಣ ಕಾರ್ಯ ನಡೆದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.









