ಚೀನಾದಲ್ಲಿನ ಮಾನವ ಹಕ್ಕುಗಳ ಸ್ಥಿತಿಗತಿ ಬಗ್ಗೆ ಜಪಾನ್ ಕಳವಳ
ಜಪಾನ್ : ಜಿ7 ಸಮ್ಮೇಳನದಲ್ಲಿ ಚೀನಾದಲ್ಲಿನ ಮಾನವ ಹಕ್ಕುಗಳ ಸ್ಥಿತಿಗತಿ ಬಗ್ಗೆ ಜಪಾನ್ ನ ಪ್ರಧಾನಿ ಯೋಶಿಹಿದೆ ಸುಗಾ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಬ್ರಿಟನ್ ನಲ್ಲಿ ನಡೆಯುತ್ತಿರುವ ಜಿ7 ಸಮ್ಮೇಳನದ 2ನೇ ದಿನ ಚೀನಾಗೆ ಸಂಬಂಧಿಸಿದ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ ಸುಗಾ ಅವರು, ಪೂರ್ವ ಮತ್ತು ದಕ್ಷಿಣ ಸಮುದ್ರ ಪ್ರದೇಶಗಳಲ್ಲಿ ಕೈಗೊಂಡ ಏಕಪಕ್ಷೀಯ ಕ್ರಮಗಳು, ಮಾನವ ಹಕ್ಕುಗಳ ಸ್ಥಿತಿಗತಿ ಮತ್ತು ನ್ಯಾಯಸಮ್ಮತವಲ್ಲದ ಆರ್ಥಿಕ ಚಟುವಟಿಕೆಗಳು ಜಿ7 ಮೌಲ್ಯಗಳಿಗೆ ಹೊಂದಿಕೆಯಾಗುವುದಿಲ್ಲ.
ಜಿ7 ರಾಷ್ಟ್ರಗಳು ಈ ಸಮಸ್ಯೆಗಳನ್ನು ಪರಿಹರಿಸಲು ಒಟ್ಟಾಗಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ ಚೀನಾದ ಹಡಗುಗಳು ವಿವಾದಿತ ದ್ವೀಪ ʼಸೆಂಕಾಕುʼ ಸುತ್ತಲೂ ದಾಖಲೆಯ 112 ಬಾರಿ ಅತಿಕ್ರಮವಾಗಿ ಪ್ರವೇಶಿಸಿವೆ. ಮಾತ್ರವಲ್ಲದೆ, ಜಪಾನ್ ಸಾಗರ ಪ್ರದೇಶಕ್ಕೆ ಏಪ್ರಿಲ್‌ನಲ್ಲಿ ನಾಲ್ಕು ದಿನ, ಮೇನಲ್ಲಿ ಐದು ದಿನ ಪ್ರವೇಶಿಸಿವೆ. ಚೀನಾದಿಂದ ಜನವರಿಯಿಂದ ಮೇ ವರೆಗೆ ಒಟ್ಟು 20 ದಿನ ಅತಿಕ್ರಮ ಪ್ರವೇಶ ಮಾಡಲಾಗಿದೆ ಎಂದು ಜಪಾನ್ ಆರೋಪ ಮಾಡಿದೆ. ಜೊತೆಗೆ ಚೀನಾದಲ್ಲಿ ಉಯಿಗರ್ ಮುಸ್ಲಿಂ ಸಮುದಾಯದವರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ನಿರಂತರವಾಗಿ ವರದಿಯಾಗುತ್ತಿರುವ ಬಗ್ಗೆಯೂ ಆತಂಕ ವ್ಯಕ್ತಪಡಿಸಿದೆ.








