ಬೆಂಗಳೂರು : ಜನ ವಿರೋಧಿ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ಕೈಗಾರಿಕೆ ಹಾಗೂ ಕಾರ್ಮಿಕ ಕಾಯ್ದೆ ತಿದ್ದುಪಡಿಗಳನ್ನು ವಿರೋಧಿಸಿ ಜೆಡಿಎಸ್ ಪಕ್ಷ ನಾಳೆಯಿಂದ ರಾಜ್ಯಾದ್ಯಂತ ಹೋರಾಟ ನಡೆಸಲು ಮುಂದಾಗಿದೆ.
ಈ ಬಗ್ಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮಾಹಿತಿ ನೀಡಿದ್ದು, ನಾವು ನಾಳೆಯಿಂದಲೇ ರಾಜ್ಯಾದ್ಯಂತ ಹೋರಾಟ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ನಾಳೆ ಹಾಸನದಲ್ಲಿ ಸಾಂಕೇತಿಕವಾಗಿ ಹೋರಾಟವನ್ನು ಆರಂಭಿಸುತ್ತೇವೆ. ಹಾಸನ ಜಿಲ್ಲೆಯ ಎಲ್ಲಾ ಶಾಸಕರು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಾರೆ. ಇನ್ನೂರು ಜನ ಮಾತ್ರ ಸೇರಿ ಪ್ರತಿಭಟನೆ ಮಾಡುತ್ತೇವೆ. ಘೋಷಣೆಗಳನ್ನು ಕೂಗುವುದಿಲ್ಲ. ಪ್ರತಿಭಟನೆ ನಂತರ ಜಿಲ್ಲಾಕಾರಿಗೆ ಮನವಿ ಕೊಡುತ್ತೇವೆ. ನಮ್ಮ ಪಕ್ಷದಲ್ಲಿ ಈ ಹೋರಾಟದ ಬಗ್ಗೆ ಯಾವುದೇ ಒಡಕಿಲ್ಲ. ಒಗ್ಗಟ್ಟಾಗಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಇದೇ ವೇಳೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ದೇವೇಗೌಡ, ಸರ್ಕಾರ ತಂದಿರುವ ಮೂರು ಕಾಯ್ದೆಗಳಿಗೆ ನಮ್ಮ ಸಮ್ಮತಿ ಇಲ್ಲ. ಈ ಕಾಯ್ದೆಗಳನ್ನು ಸುಗ್ರಿವಾಜ್ಞೆ ಮೂಲಕ ಅನುಷ್ಠಾನಕ್ಕೆ ತಂದಿದ್ದಾರೆ. ಇದನ್ನು ವಿರೋಧಿಸಿ ಜೆಡಿಎಸ್ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಹೇಳಿದರು. ಜೆಡಿಎಸ್ ರಾಜ್ಯಾದ್ಯಕ್ಷ ಎಚ್.ಕೆ. ಕುಮಾರಸ್ವಾಮಿ, ಮುಖಂಡರಾದ ಜಫ್ರುಲ್ಲಾ ಖಾನ್, ಟಿ.ಎ.ಶರವಣ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.