ದಾವಣಗೆರೆ : ಬರೋಬ್ಬರಿ 40 ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಎಂಎಲ್ಸಿ ರಮೇಶ್ ಬಾಬು ಅವರು ಜೆಡಿಎಸ್ ಗೆ ಗುಡ್ ಬೈ ಹೇಳಿ ಅಚ್ಚರಿ ಮೂಡಿಸಿದ್ದಾರೆ. ಈ ಬಗ್ಗೆ ದಾವಣಗೆರೆಯಲ್ಲಿ ಮಾತನಾಡಿದ ಅವರು, “ನಿನ್ನೆಯೇ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರವರಿಗೆ ರಾಜೀನಾಮೆ ಸಲ್ಲಿಸಿದ್ದೇನೆ. ಇಷ್ಟರಲ್ಲಿ ಬೇರೊಂದು ಪಕ್ಷದ ಜೊತೆ ಗುರ್ತಿಸಿಕೊಳ್ಳುವೆ. ಅಲ್ಲದೆ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ” ಎಂದು ತಿಳಿಸಿದರು.
“ಜೆಡಿಎಸ್ ಪಕ್ಷದಲ್ಲಿ ಪ್ರಾಮಾಣಿಕರಿಗೆ ಬೆಲೆ ಇಲ್ಲ”
“ಜೆಡಿಎಸ್ ಪಕ್ಷದಲ್ಲಿ ಪ್ರಾಮಾಣಿಕರಿಗೆ ಅವಕಾಶವಿಲ್ಲ. ಪಕ್ಷಕ್ಕಾಗಿ ದುಡಿಯುತ್ತಿರುವ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ. ಪ್ರಾದೇಶಿಕ ಪಕ್ಷದ ಅಗತ್ಯವಿದೆ ಎಂಬ ಕಾರ್ಯಕರ್ತರ ನಂಬಿಕೆಗೆ ಇಂದು ಅನ್ಯಾಯವಾಗುತ್ತಿದೆ. ಆದ್ದರಿಂದ ಜೆಡಿಎಸ್ ಪಕ್ಷದ ನಿಷ್ಠರು ಪಕ್ಷ ಬಿಡುತ್ತಿದ್ದಾರೆ. ಜೆಡಿಎಸ್ ಪ್ರಾದೇಶಿಕ ಪಕ್ಷದ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ ಎಂದು ಜೆಡಿಎಸ್ ಮೇಲಿನ ತಮ್ಮ ಅಸಮಾಧಾನ ಹೊರ ಹಾಕಿದರು.