ಬೆಂಗಳೂರು : ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆ ಹತ್ತಿರವಾಗುತ್ತಿದಂತೆ ರಾಜ್ಯ ರಾಜಕೀಯದಲ್ಲಿ ರಾಜಕೀಯ ಚಟುವಟಿಕೆಗಳು ಗದಿಗೆದರಿವೆ. ಅದರ ಭಾಗವಾಗಿ ನಡೆಯುತ್ತಿರುವ ಜೆಡಿಎಸ್ ಶಾಸಕಾಂಗ ಸಭೆ ಶುರುವಾಗಿದೆ.
ಬೆಂಗಳೂರಿನ ಜೆಪಿ ಭವನದಲ್ಲಿ ನಡೆಯುತ್ತಿರುವ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ, ಜೆಡಿಎಸ್ ಹಿರಿಯ ನಾಯಕ ಬಸವರಾಜ ಹೊರಟ್ಟಿ, ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್, ಶಾಸಕ ಶಿವಲಿಂಗೇಗೌಡ, ಸಂಸದ ಪ್ರಜ್ವಲ್ ರೇವಣ್ಣ ಸೇರಿದಂತೆ ಜೆಡಿಎಸ್ ಶಾಸಕರು ಭಾಗಿಯಾಗಿದ್ದಾರೆ.
ಸಭೆಯ ಪ್ರಮುಖ ಚರ್ಚೆ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಯಾರು ಅಭ್ಯರ್ಥಿ ಆಗಬೇಕು ಎಂಬುದಾಗಿದೆ. ಇನ್ನೊಂದೆಡೆ ರಾಜ್ಯಸಭೆಗೆ ಹೆಚ್.ಡಿ.ದೇವೇಗೌಡರು ಸ್ಪರ್ಧಿಸಬೇಕು ಎಂದು ಜೆಡಿಎಸ್ ಶಾಸಕರು ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ. ರಾಜ್ಯಸಭೆ ಚುನಾವಣೆಯಲ್ಲಿ ಗೆಲುವು ಪಡೆಯಬೇಕಾದರೆ ಜೆಡಿಎಸ್ ಗೆ 48 ಮತಗಳು ಬೇಕು. ಆದರೆ 34 ಶಾಸಕರ ಬೆಂಬಲ ಮಾತ್ರ ಜೆಡಿಎಸ್ ಗೆ ಇದೆ.
ಆದ್ದರಿಂದ ದೇವೇಗೌಡರು ಬಿಟ್ಟು ಬೇರೆ ಯಾರೇ ಸ್ಪರ್ಧಿ ಮಾಡಿದರೂ ಸ್ಥಾನವನ್ನು ಕಳೆದಯಕೊಳ್ಳುತ್ತೇವೆ ಎಂಬ ಆತಂಕ ಜೆಡಿಎಸ್ ವಲಯದಲ್ಲಿ ಇದೆ. ಒಂದು ವೇಳೆ ದೇವೇಗೌಡರು ಸ್ಪರ್ಧೆ ಮಾಡಿದರೆ ಕಾಂಗ್ರೆಸ್ ಬೆಂಬಲ ಸಿಗಲಿದೆ. ಕಾಂಗ್ರೆಸ್ ನ 14 ಶಾಸಕರ ಬೆಂಬಲ ಸಿಕ್ಕರೇ ದೇವೇಗೌಡರು ಸುಲಭವಾಗಿ ರಾಜ್ಯಸಭೆ ಪ್ರವೇಶ ಮಾಡಬಹುದು ಎಂಬ ಲೆಕ್ಕಚಾರ ಜೆಡಿಎಸ್ ವಲಯದಲ್ಲಿದೆ. ಅಲ್ಲದೆ ದೇವೇಗೌಡರು ಸ್ಪರ್ಧೆ ಮಾಡಿದರೆ ಯಾರು ಅಡ್ಡಿಪಡಿಸಲು ಎಂಬುದು ಈಗಾಗಲೇ ಖಚಿತವಾಗಿದೆ.








