ಬೆಂಗಳೂರು: ಸ್ವಾಭಿಮಾನಿ ಕನ್ನಡಿಗರ ಪಕ್ಷ ಜೆಡಿಎಸ್ ಎಂದಿಗೂ ವಿಲೀನದ ಆಲೋಚನೆ ಮಾಡುವುದಿಲ್ಲ. ಜನರ ಗಟ್ಟಿ ಧ್ವನಿಯಾದ ಜೆಡಿಎಸ್ ಅಂತಹ ಅವಿವೇಕತನ ಪ್ರದರ್ಶನ ಮಾಡುವುದಿಲ್ಲ. ಅಗತ್ಯವಿದ್ದಾಗ ವಿಷಯಾಧಾರಿತವಾಗಿ ಮುಂದಿನ ದಿನಗಳಲ್ಲಿ ಬಿಜೆಪಿ ಜೊತೆ ವಿಶ್ವಾಸಪೂರ್ವಕವಾಗಿ ನಡೆಯಬಹುದಷ್ಟೆ. ವಿಲೀನದಂಥ ಕಪೋಲಕಲ್ಪಿತ ಸುದ್ದಿಗಳಿಗೆ ಯಾವುದೇ ಪ್ರಾಮುಖ್ಯತೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
`ರೈತರ ಸಾಲಮನ್ನಾ’, `ಬಡವರ ಬಂಧು’ ಇಂತಹ ಕಾರ್ಯಕ್ರಮಗಳನ್ನು ನೀಡಿದ, ಶಿಸ್ತುಬದ್ಧ ಆಡಳಿತ ನಡೆಸಿದ, ದೇವೇಗೌಡರ ಆಶಯದಂತೆ ನಡೆಯುತ್ತಿರುವ ಜೆಡಿಎಸ್ ಮೇಲೆ ಜನರ ವಿಶ್ವಾಸವಿದೆ. ಮತ್ತೊಂದು ಪಕ್ಷದೊಂದಿಗೆ ವಿಲೀನ ಮಾಡಿಕೊಳ್ಳುವ ಮೂಲಕ `ಸ್ವಯಂ ಆತ್ಮಹತ್ಯೆ’ ಮಾಡಿಕೊಳ್ಳುವ ಸನ್ನಿವೇಶ ಬಂದಿಲ್ಲ, ಬರುವುದೂ ಇಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತೇನೆ ಎಂದು ಟ್ವಿಟರ್ ನಲ್ಲಿ ಹೆಚ್ಡಿಕೆ ತಿಳಿಸಿದ್ದಾರೆ.
1973ರಲ್ಲಿ 22 ಶಾಸಕರನ್ನು ಇಟ್ಟುಕೊಂಡು ದೇವೇಗೌಡರು ವಿರೋಧದ ಪಕ್ಷದ ನಾಯಕರಾಗಿ ಹೋರಾಟ ಆರಂಭಿಸಿದರು. ಕಾಂಗ್ರೆಸ್ ಮತ್ತು ಜನತಾದಳ ಒಡೆದು ಹೋದ ಬಳಿಕವೂ ಕಷ್ಟಪಟ್ಟು ಪಕ್ಷವನ್ನು ಉಳಿಸಿಕೊಂಡು ಬಂದಿದ್ದೇವೆ. ನಾವು ಸ್ವತಂತ್ರವಾಗಿರುವ ನಿಟ್ಟಿನಲ್ಲಿ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುತ್ತೇವೆ. ಯಾವುದೇ ಕಾರಣಕ್ಕೂ ಜೆಡಿಎಸ್ನ್ನು ಯಾವುದೇ ಪಕ್ಷದ ಜೊತೆ ವಿಲೀನ ಮಾಡುವುದಿಲ್ಲ. ಅರವಿಂದ ಲಿಂಬಾವಳಿ ಯಾವ ರೀತಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ ಯಾಕೆ ಈ ವದಂತಿ ಎದ್ದಿದೆ ಎಂಬುದೂ ಸಹ ತಿಳಿದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು, ದೇವೇಗೌಡರು ಹಾಗೂ ನನ್ನ ಬಗ್ಗೆ ಇಟ್ಟಿರುವ ವಿಶೇಷ ಗೌರವದಿಂದ ಈ ಗುಮಾನಿ ಎದ್ದಿರಬಹುದು ಎಂದಿದ್ದಾರೆ.
ಜೆಡಿಎಸ್ ಬಿಜೆಪಿಯ ‘ಬಿ ಟೀಂ’ ಎಂದು ಟೀಕಿಸಿದ್ದ ಕಾಂಗ್ರೆಸ್ ಹೈಕಮಾಂಡ್ ನಮ್ಮ ಮನೆಬಾಗಿಲಿಗೆ ಬಂದು ಕಾಂಗ್ರೆಸ್ ಜೊತೆ ಸರ್ಕಾರ ರಚಿಸುವ ಆಹ್ವಾನ ನೀಡಿತ್ತು. ನಾವೇನಾದರೂ ಬಿಜೆಪಿಯ `ಬಿ ಟೀಂ’ ಆಗಿದ್ದರೆ, ಕಾಂಗ್ರೆಸ್ನೊಂದಿಗೆ ಸರ್ಕಾರವನ್ನೇ ಮಾಡುತ್ತಿರಲಿಲ್ಲ. ಅವರು ಹೇಳಿದಂತೆ ಒಳ ಒಪ್ಪಂದವೇನೂ ಇಲ್ಲ. ವಿಷಯಾಧಾರಿತ ಹೊಂದಾಣಿಕೆಯಷ್ಟೇ ಸಾಧ್ಯ.
ಲೋಕದ ಡೊಂಕ ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನೆರೆಮನೆಯ ದುಃಖಕ್ಕೆ ಅಳುವವರ
ಮೆಚ್ಚ ಕೂಡಲಸಂಗಮದೇವ ಎಂದು ಬಸವಣ್ಣನವರ ವಚನ ಉಲ್ಲೇಖಿಸುವ ಮೂಲಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರಿಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel